ADVERTISEMENT

ಚಿಕ್ಕಬಳ್ಳಾಪುರ | ಭಾವರಹಿತ ಶಿಕ್ಷಣ: ತಜ್ಞರ ಕಳವಳ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:00 IST
Last Updated 10 ಜುಲೈ 2025, 5:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಚಿಕ್ಕಬಳ್ಳಾಪುರ: ಕೃತಕ ಬುದ್ಧಿಮತ್ತೆಯಿಂದ ಭಾವರಹಿತವಾದ ಶಿಕ್ಷಣ ದೊರೆಯುತ್ತಿದೆ. ಪರಿವರ್ತನೆಯ ಮೂಲಕ ಸುಧಾರಣೆ ತರುವ ಶಿಕ್ಷಣ ಇಂದಿನ ಅನಿವಾರ್ಯ. ಸಮರ್ಪಣೆಯಿಂದ ಪರಿಪೂರ್ಣತೆಗೆ ಸಾಗುವುದೇ ನೈಜ ಶಿಕ್ಷಣ ಎಂದು ಪ್ರಸಿದ್ಧ ನೃತ್ಯಗಾರ್ತಿ ಸೋನಾಲ್ ಮಾನ್‌ಸಿಂಗ್ ಹೇಳಿದರು.

ADVERTISEMENT

ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಕುಲಪತಿಗಳ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಕರುಣೆಯೇ ಜೀವನದ ಮೂಲ ಮೌಲ್ಯ. ಅದನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ಮಾಡಿದರು.

ತಾಂತ್ರಿಕತೆಯಿಂದಾಗಿ ನೈಜ ಬುದ್ಧಿಮತ್ತೆ ಮರೆಯಾಗಿ ಕೃತಕ ಬುದ್ಧಿಮತ್ತೆಯು ವಿಜೃಂಭಿಸುತ್ತಿದೆ. ಇವು ಮನುಷ್ಯನನ್ನು ಷರತ್ತುಗಳಿಗೆ ಒಳಪಡಿಸಿ ಆಂತರಿಕ ಬೌದ್ಧಿಕತೆ ಹೊರಗೆಡವದಂತೆ ಮಾಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ಜಗತ್ತಿನ ನೈಜ ಪರಿಸ್ಥಿತಿ ಅರಿಯುವ ಶಿಕ್ಷಣ ಬೇಕಾಗಿದೆ. ಸ್ವಂತಿಕೆಯ ಚಿಂತನೆ ಮಾನವನನ್ನು ನಾಗರಿಕನನ್ನಾಗಿ ಮಾಡಿದೆ. ನಿರಂತರವಾದ ಅಭ್ಯಾಸ ಪರಿಪೂರ್ಣತೆಯ ಕಡೆಗೆ ಒಯ್ಯುತ್ತದೆ. ವಸಾಹತು ವಾದದ ನೆರಳಿನಲ್ಲಿ ನಲುಗಿದ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಶುಚಿಗೊಳಿಸಬೇಕಾದ ಅನಿವಾರ್ಯವಿದೆ. ಭಾರತದ ಶಿಕ್ಷಣ ಮಾತ್ರವೇ ಭಾರತದ ಪ್ರಜೆಗಳನ್ನು ನೈಜ ಭಾರತಿಯರನ್ನಾಗಿ ಮಾಡಬಲ್ಲದು ಎಂದರು.

ಶಿಕ್ಷಣದಲ್ಲಿ ಕ್ರಾಂತಿಕಾರಕ ನಿಲುವು ಸಾಧಿಸುವಲ್ಲಿ ಈ ಸಮಾವೇಶ ದಿಟ್ಟ ಹೆಜ್ಜೆ ಇಟ್ಟಿದೆ. ಶಿಕ್ಷಣದಲ್ಲಿ ಮಾನವ ಶಿಕ್ಷಣವನ್ನು ಅಳವಡಿಸಿ ಮಾನವರನ್ನು ಮಾನವೀಕರಣ ಮಾಡುವಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳು ಕೈಜೋಡಿಸಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಹೇಳಿದರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸಂಸ್ಥಾಪಕ ಮಧುಸೂದನ ಸಾಯಿ ಸಾನ್ನಿಧ್ಯವಹಿಸಿದ್ದರು. ವಿಶ್ರಾಂತ ಕುಲಪತಿ ಬಿ.ಎನ್ ನರಸಿಂಹಮೂರ್ತಿ, ಪ್ರೊ.ಶ್ರೀಕಂಠ ಮೂರ್ತಿ, ನಿವೃತ್ತ ಕುಲಪತಿ ಪ್ರೊ.ಜೆ ಶಶಿಧರ ಪ್ರಸಾದ್ ಉಪಸ್ಥಿತರಿದ್ದರು.

ಮಾನವೀಯತೆ ಮರೆಯದಿರಿ...

ಪದ್ಮಭೂಷಣ ಪುರಸ್ಕೃತ ಅಣು ಭೌತವಿಜ್ಞಾನಿ ಅನಿಲ್ ಕಾಕೋಡ್ಕರ್ ಮಾತನಾಡಿ, ‘ಮಾನವೀಯತೆ ಮರೆಯಬಾರದು. ಅಭಿವೃದ್ಧಿ  ಸಾಧಿಸುವಾಗ ಅನೇಕ ಅಡಚಣೆ ಎದುರಾಗುತ್ತವೆ. ಅವನ್ನು ನಿವಾರಿಸಿ ಮುನ್ನಡೆಯಬೇಕು.ನಾವು ಸಾಧಿಸಿದ್ದು ಅಲ್ಪ, ಸಾಧಿಸಬೇಕಾದದ್ದು ಬಹಳಷ್ಟು ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.