ADVERTISEMENT

ಚಿಕ್ಕಬಳ್ಳಾಪುರ: ನಿವೇಶನ ಹಂಚಿಕೆ ಹೆಸರಿನಲ್ಲಿ ಮಂಕುಬೂದಿ

ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:17 IST
Last Updated 5 ಫೆಬ್ರುವರಿ 2023, 7:17 IST
ಜೆಡಿಎಸ್ ಕುಟುಂಬ ಸಮಾವೇಶಕ್ಕೆ ಪಕ್ಷದ ಮುಖಂಡರು ಸಸಿಗೆ ನೀರು ಹಾಯಿಸುವ ಮೂಲಕ ಚಾಲನೆ ನೀಡಿದರು
ಜೆಡಿಎಸ್ ಕುಟುಂಬ ಸಮಾವೇಶಕ್ಕೆ ಪಕ್ಷದ ಮುಖಂಡರು ಸಸಿಗೆ ನೀರು ಹಾಯಿಸುವ ಮೂಲಕ ಚಾಲನೆ ನೀಡಿದರು   

ಚಿಕ್ಕಬಳ್ಳಾಪುರ: ‘ಯಾವುದೇ ಭೂಮಿ ಗುರುತಿಸದೆ ನಿವೇಶನ ಹಕ್ಕುಪತ್ರಗಳ ಹೆಸರಿನಲ್ಲಿ ಖಾಲಿ ಹಾಳೆ ವಿತರಿಸಿ ಜನರಿಗೆ ಸಚಿವ ಡಾ.ಕೆ. ಸುಧಾಕರ್ ಮೋಸ ಮಾಡುತ್ತಿದ್ದಾರೆ. ಅವರು ಶಾಸಕತ್ವದ ಇದೇ ಅವಧಿಯಲ್ಲಿ 21 ಸಾವಿರ ನಿವೇಶನ ವಿತರಿಸಿದ್ದೇ ಆದಲ್ಲಿ ಅವರ ಕಾಲ ಕೆಳಗೆ ನೂರು ಸಲ ತೂರುವೆ’ ಎಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಸವಾಲೆಸೆದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜೆಡಿಎಸ್ ಕುಟುಂಬ ಸಮಾವೇಶದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಯಾವುದೇ ಗ್ರಾಮದಲ್ಲಿ ಸರ್ಕಾರಿ ಜಮೀನು ಗುರುತಿಸಿ ಲೇಔಟ್ ಮಾಡಿಲ್ಲ. ನಿವೇಶನ ಸಂಖ್ಯೆ ಹಾಕಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಸಚಿವರು ಗ್ರಾಮಸಭೆ ನಡೆಸಿ ಕ್ಷೇತ್ರದಲ್ಲಿ 21 ಸಾವಿರ ನಿವೇಶನ ವಿತರಿಸುತ್ತಿರುವೆ ಎಂದು ಮತದಾರರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಕಳೆದ 10 ವರ್ಷದಿಂದ ಸುಧಾಕರ್ ಶಾಸಕರಾಗಿದ್ದಾರೆ. ಮೊದಲು ಕಾಂಗ್ರೆಸ್‍ನಲ್ಲಿದ್ದಾಗ ಜನರಿಗೆ ನಿವೇಶನ ಒದಗಿಸಬೇಕು ಎನಿಸಲಿಲ್ಲ. ಆ ನಂತರ ಸಮ್ಮಿಶ್ರ ಸರ್ಕಾರದಲ್ಲೂ ನಿವೇಶನ ನೀಡಲಿಲ್ಲ. ಆಪರೇಷನ್ ಕಮಲಕ್ಕೆ ಒಳಗಾಗಿ ಬಾಂಬೆಗೆ ಹೋಗಿ ಬಂದು ಬಿಜೆಪಿಯಲ್ಲಿ ಮಂತ್ರಿಯಾದ ಬಳಿಕವೂ ನಿವೇಶನ ನೀಡಲಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಸೋಲುವ ಭೀತಿಯಿಂದ ಮತದಾರರನ್ನು ವಂಚಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಅವರು ಶಾಸಕರಾದ ಬಳಿಕ ಕ್ಷೇತ್ರದ ಅಭಿವೃದ್ಧಿಯು ತೀರಾ ಹಿಂದುಳಿದಿದೆ‌. ಭ್ರಷ್ಟಾಚಾರ ನಡೆಸಿ ಬಂದ ಪಾಪದ ಹಣದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನವಾಗಿ ಕುಕ್ಕರ್, ಮಿಕ್ಸಿ ಹಾಗೂ ಗ್ಯಾಸ್ ಸ್ಟೌ ವಿತರಣೆಯೇ ಇವರ ಸಾಧನೆಯಾಗಿದೆ. ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಏನು ಮಾಡಿದ್ದಾರೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಭ್ರಷ್ಟ, ನೀಚರನ್ನು ಕ್ಷೇತ್ರದಿಂದ ಓಡಿಸುವ ಕೆಲಸ ಮಾಡಬೇಕು ಎಂದು
ಹೇಳಿದರು.

‘ನಾನು ಪ್ರಾಮಾಣಿಕ ಕೆಲಸ ಮಾಡಿದ್ದರೆ ನಮ್ಮ ಕೆಲಸಕ್ಕೆ ಮತದಾರರ ಬಳಿ ಮತ ಕೇಳಬೇಕು. ಸೀರೆ, ಕುಕ್ಕರ್, ಮಿಕ್ಸಿ ತೋರಿಸಿ ಅಲ್ಲ. ಜೆಡಿಎಸ್‍ನಿಂದ ಕುಟುಂಬ ಸಮಾವೇಶ ಮಾಡುತ್ತಿದ್ದೇವೆ ಎಂದು ಇದಕ್ಕೆ ಪ್ರತಿಯಾಗಿ ತರಾತುರಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಕ್ರಮ ಆಯೋಜಿಸಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಲು ಮುಂದಾಗಿದ್ದಾರೆ. ನಾಚಿಕೆ ಆಗಬೇಕು ಅವರಿಗೆ’ ಎಂದು ಕಿಡಿಕಾರಿದರು.

‘ನನ್ನ ಅವಧಿಯಲ್ಲಿ ಜಿಲ್ಲಾ ಕ್ರೀಡಾಂಗಣ, ಈಜುಕೊಳ, ಜಕ್ಕಲಮಡುಗು ಜಲಾಶಯ, ಜಿಲ್ಲಾಸ್ಪತ್ರೆ, ಆರ್‌ಡಿಒ, ಉದ್ಯಾನ, ಗ್ರಂಥಾಲಯ ಸೇರಿ ಬಹುತೇಕ ಕಚೇರಿಗಳ ಕಟ್ಟಡಗಳ ನಿರ್ಮಾಣವಾದವು. ಆದರೆ ಸಚಿವ ಸುಧಾಕರ್ ಕೊಳಚೆ ನೀರು ತಂದು ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರಲು ಕಾರಣಕರ್ತರಾಗಿದ್ದಾರೆ. ಈ ಬಗ್ಗೆ ತಾವೆಲ್ಲಾರೂ ಯೋಚನೆ ಮಾಡಬೇಕು’ ಎಂದರು.

ಚಿಕ್ಕಬಳ್ಳಾಪುರವನ್ನು ಸಿಂಗಪುರ ಮಾಡುತ್ತೇವೆ ಎಂದಿದ್ದರು. ಆದರೆ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚಿಕ್ಕಬಳ್ಳಾಪುರ ಉತ್ಸವ ಮಾಡಿ ಕೋಟ್ಯಂತರ ರೂಪಾಯಿ ಹಣ ವ್ಯರ್ಥವಾಯಿತು. ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಮಳೆಯಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ವಿದ್ಯುತ್ ದೀಪಗಳ ಕೊರತೆ ಇರುವಾಗ ಚಿಕ್ಕಬಳ್ಳಾಪುರವನ್ನು ತಾತ್ಕಾಲಿಕವಾಗಿ ಝಗಮಗಿಸುವಂತೆ ಮಾಡಲಾಗಿತ್ತು. ಇಂತಹ ಉತ್ಸವ ಬೇಕಿತ್ತಾ ಎಂದು
ಪ್ರಶ್ನಿಸಿದರು.

ಮಕ್ಕಳಿಗೆ ಶೂ, ಸಮವಸ್ತ್ರ ನೀಡದೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಇಂತಹ ಸರ್ಕಾರ ಬೇಕಾ ಎಂಬುದು ಮಹಿಳೆಯರು ತೀರ್ಮಾನಿಸಬೇಕು. ಇವರನ್ನು ಮನೆಗೆ ಕಳುಸುವ ಶಕ್ತಿ ನಿಮ್ಮಲ್ಲಿದೆ. ನಾರಿ ಮುನಿದರೆ ಏನು ಬೇಕಾದರೂ ಮಾಡಬಹುದು. ದುಷ್ಟ ಶಕ್ತಿಗಳನ್ನು ತೊಲಗಿಸಲು ಚಾಮುಂಡಿ ಆಗಬೇಕು. ಗ್ಯಾಸ್ ಸ್ಟೌ, ಸೀರೆ, ದೇವಸ್ಥಾನದ ಪ್ರವಾಸಕ್ಕೆ ನೀಡುವ ಹಣ ನಮ್ಮ ತೆರಿಗೆಯ ಹಣ. ಇದನ್ನು ಪಡೆದರೂ ಪ್ರಾಮಾಣಿಕರನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ. ಮುನೇಗೌಡ, ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಜಿ. ಪಂ ಮಾಜಿ ಸದಸ್ಯ ಕೆ.ಸಿ. ರಾಜಾಕಾಂತ್, ತಾಲ್ಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಕೆ.ಪಿ. ಶ್ರೀನಿವಾಸಮೂರ್ತಿ, ಪ್ರಭಾ ನಾರಾಯಣಗೌಡ, ಚದಲುಪುರ ನಾರಾಯಣಸ್ವಾಮಿ, ಮಂಡಿಕಲ್ ರಾಜಣ್ಣ, ಬಾಲಕುಂಟಹಳ್ಳಿ ಮುನಿಯಪ್ಪ, ನಾರಾಯಣಗೌಡ, ಕವಿತಾ ರೆಡ್ಡಿ, ವೀಣಾ, ಅಣ್ಣಪ್ಪ, ನಂದಿ ಮೂರ್ತಿ, ವೆಂಕಟೇಶ್ ಇತರರು ಇದ್ದರು.

ಪಕ್ಷಾಂತರ ಮಾಡಿದ್ದರೆ ಸಚಿವನಾಗಿರುತ್ತಿದ್ದೆ

‘ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಭ್ರಷ್ಟ ಕ್ಷೇತ್ರ ಚಿಕ್ಕಬಳ್ಳಾಪುರವಾಗಿದೆ ಎಂದು ಹೇಳಿಕೊಳ್ಳಲು ಬೇಸರವಾಗುತ್ತದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರವೊಂದು ಬಿಟ್ಟರೆ, ಅಭಿವೃದ್ಧಿಯೆಂಬುದೇ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯಿಲ್ಲ. ಅಪರೇಷನ್ ಕಮಲಕ್ಕೆ ಒಳಗಾಗಿ ನಾನೇನಾದರೂ ಪಕ್ಷಾಂತರ ಮಾಡಿದ್ದರೆ, ಈ ಸುಧಾಕರ್‌ಗಿಂತ ಮುಂಚೆ ನಾನು ಸಚಿವನಾಗುತ್ತಿದ್ದೆ. ನೀವು ಕೊಟ್ಟ ಮತಕ್ಕೆ ಮೋಸ ಬಗೆದಿಲ್ಲ. ತಾಯಿಯಂತ ಪಕ್ಷಕ್ಕೆ ನಾನೆಂದೂ ದ್ರೋಹ ಬಗೆದಿಲ್ಲ. ಮೂರು ಪಕ್ಷಗಳಿಂದ ಪಕ್ಷಾಂತರ ಮಾಡಿದವರಿಗೆ ಛೀಮಾರಿ ಹಾಕುವ ಕೆಲಸ ಎಲ್ಲರೂ ಮಾಡಬೇಕು’ ಎಂದು ಬಚ್ಚೇಗೌಡ ಹೇಳಿದರು.

ಪ್ರೇತಾತ್ಮಗಳಿಗೆ ಮುಕ್ತಿ ನೀಡಿ!

‘ನನಗಿಂತ ಅರ್ಹ, ಪ್ರಾಮಾಣಿಕವಾದ ವ್ಯಕ್ತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಅವರಿಗೆ ಮತ ಕೊಡಿ. ನಾನು ನನ್ನ ಮಟ್ಟಿಗೆ ಪ್ರಾಮಾಣಿಕನಾಗಿದ್ದೇನೆ. 5 ವರ್ಷದ ನನ್ನ ಶಾಸಕನ ಅವಧಿಯಲ್ಲಿ ಮಾಡಿದ ಕಾರ್ಯಕ್ರಮಗಳು ನನಗೆ ತೃಪ್ತಿಕೊಟ್ಟಿದೆ. ಮಾಡಿರುವ ಕೆಲಸದ ಬಗ್ಗೆ ಪ್ರಚಾರ ತೆಗೆದುಕೊಂಡಿಲ್ಲ. ಮತ ಕೊಡುವಾಗ ಯೋಚನೆ ಮಾಡಿ, ಅವರು ಕೊಡುವ ಹಣ ಕೋವಿಡ್ ಹೆಣಗಳ ಮೇಲೆ ಸಂಪಾದಿಸಿದ ಹಣ. ಆ ಹಣವನ್ನು ಪಡೆದು ನೀವು ಮತ ಹಾಕಿದರೆ ಪ್ರೇತಾತ್ಮಗಳು ನಿಮ್ಮನ್ನು ಕಾಡುತ್ತವೆ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕು. ಆಗ ಪ್ರೇತಾತ್ಮಗಳಿಗೆ ಶಾಂತಿ ಸಿಗುತ್ತದೆ’ ಎಂದು ಕೆ.ಪಿ.ಬಚ್ಚೇಗೌಡ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.