
ಗೌರಿಬಿದನೂರು: ಖಗೋಳಶಾಸ್ತ್ರವು ತಂತ್ರಜ್ಞಾನ ನವೀನತೆ ಮತ್ತು ಸ್ಥಿರ ಭವಿಷ್ಯವನ್ನು ಹೇಗೆ ರೂಪಿಸುತ್ತದೆ ಎನ್ನುವುದರ ಕುರಿತ ಕಾರ್ಯಕ್ರಮ ಕ್ರಿ ಆಕ್ಟಿವ್ ತಂಡದಿಂದ ನಗರದಲ್ಲಿ ಭಾನುವಾರ ನಡೆಯಿತು.
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ನಿರ್ದೇಶಕಿ ಪ್ರೊ. ಅನ್ನಪೂರ್ಣಿ ಸುಬ್ರಹ್ಮಣ್ಯಂ ಮಾತನಾಡಿ, ಖಗೋಳ ಶಾಸ್ತ್ರವು ಮಾನವಕುಲದ ಸ್ಥಿರ ಭವಿಷ್ಯದಲ್ಲಿ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ವಹಿಸುತ್ತಿರುವ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಬ್ರಹ್ಮಾಂಡದ ರಚನೆ, ನಕ್ಷತ್ರ, ಆಕಾಶಗಂಗೆಗಳ ರಚನೆ ಮತ್ತು ವಿಕಾಸವನ್ನು ಖಗೋಳ ಶಾಸ್ತ್ರದಿಂದ ಅರ್ಥ ಮಾಡಿಕೊಳ್ಳಬಹುದು. ಖಗೋಳ ಶಾಸ್ತ್ರದ ಸಂವೇದಕ, ಚಿತ್ರಣ ವ್ಯವಸ್ಥೆ, ಡೇಟಾ ವಿಶ್ಲೇಷಣಾ ವಿಧಾನ ಮತ್ತು ಉಪಗ್ರಹ ತಂತ್ರಜ್ಞಾನ ಜತೆಗೆ, ವೈಜ್ಞಾನಿಕ ಕುತೂಹಲ, ತಾರ್ಕಿಕ ಚಿಂತನೆ ಮತ್ತು ಸಂಶೋಧನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಖಗೋಳ ಸಂಶೋಧನೆಯಲ್ಲಿ ದೇಶಕ್ಕೆ ಅನೇಕ ಕೊಡುಗೆ ನೀಡುತ್ತಿದೆ. ಈ ಕ್ಷೇತ್ರದಲ್ಲಿ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆವಿಷ್ಕಾರಿಸಲಾಗುತ್ತಿದೆ. ವಿದ್ಯಾರ್ಥಿಗಳು ಖಗೋಳ ಮತ್ತು ಖಗೋಳ ಭೌತಶಾಸ್ತ್ರದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿ ಜೀವನ ಪ್ರಾರಂಭ ಮಾಡಲು ಇರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಗೂಗಲ್‌ನಲ್ಲಿ ತಪ್ಪಿರುವ ತಾಲ್ಲೂಕಿನ ಸ್ಥಳಗಳ ಹೆಸರು ತಿದ್ದುಪಡಿ ಮಾಡಿ, ಮತ್ತೆ ಸರಿಯಾಗಿ ನವೀಕರಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಕ್ರಿ ಆಕ್ಟಿವ್ ನಾಲೆಡ್ಜ್ ಹಬ್ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಉತ್ತಮವಾಗಿ ಕಾರ್ಯನಿರ್ವಹಿಸಿದ ನಾಲ್ಕು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 100ಕ್ಕೂ ಹೆಚ್ಚು ತಪ್ಪುಗಳನ್ನು ಗುರುತಿಸಿದ ಪ್ರತೀಕ್ಷಾ ಗೌಡ ಪ್ರಥಮ ಬಹುಮಾನ ಪಡೆದರು.
ಕೆಪಿಜೆ ರೆಡ್ಡಿ, ಇಸ್ರೋ ವಿಜ್ಞಾನಿ ಶ್ರೀನಾಥ್, ರತ್ನ ಕುಮಾರ್, ಕ್ರಿ ಆಕ್ಟಿವ್ ಸದಸ್ಯರಾದ ಸುಪ್ರಿಯಾ ನಾಯಕ, ಮಂಜುಳಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.