ADVERTISEMENT

ಬೂತ್ ಮಟ್ಟದ ಅಧಿಕಾರಿಯಾಗಿ ನಿಯೋಜನೆ ಬೇಡ

ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:03 IST
Last Updated 12 ಜುಲೈ 2025, 4:03 IST
ಬಾಗೇಪಲ್ಲಿ ತಾಲ್ಲೂಕಿನ ಶಿಶು ಕಲ್ಯಾಣ ಅಧಿಕಾರಿ ರಾಮಚಂದ್ರ ಅವರಿಗೆ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು, ನೌಕರರು ಮನವಿ ಪತ್ರ ಸಲ್ಲಿಸಿದರು
ಬಾಗೇಪಲ್ಲಿ ತಾಲ್ಲೂಕಿನ ಶಿಶು ಕಲ್ಯಾಣ ಅಧಿಕಾರಿ ರಾಮಚಂದ್ರ ಅವರಿಗೆ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು, ನೌಕರರು ಮನವಿ ಪತ್ರ ಸಲ್ಲಿಸಿದರು   

ಬಾಗೇಪಲ್ಲಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಬಾರದು ಎಂದು ಒತ್ತಾಯಿಸಿ ತಾಲ್ಲೂಕು ಅಂಗನವಾಡಿ ನೌಕರರ ಸಂಘದ(ಸಿಐಟಿಯು) ನೇತೃತ್ವದಲ್ಲಿ ಮುಖಂಡರು ಗುರುವಾರ ಶಿರಸ್ತೇದಾರ್ ಮಂಜುನಾಥ್ ಹಾಗೂ ಶಿಶು ಕಲ್ಯಾಣ ಯೋಜನಾಧಿಕಾರಿ ರಾಮಚಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕಿನಲ್ಲಿ 75 ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕಾರ್ಯಗಳಿಗೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ನಮಗೆ ತೊಂದರೆ ಆಗಲಿದೆ ಎಂದು ತಿಳಿಸಿದರು.

ಆದರೆ ಚುನಾವಣಾ ಆಯೋಗದ ಸುತ್ತೋಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡುವ ಸಂಧರ್ಭದಲ್ಲಿ ಗ್ರೂಪ್ ಸಿ ದರ್ಜೆಯ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಕಾಯಂ ನೌಕರರನ್ನು ನೇಮಿಸಬೇಕು. ಒಂದು ವೇಳೆ ನೌಕರರು ಇಲ್ಲದಿದ್ದಲ್ಲಿ ಗುತ್ತಿಗೆ ಶಿಕ್ಷಕರು, ಕೇಂದ್ರ ಸರ್ಕಾರದ ನೌಕರರು ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಲು ನಿರ್ದೇಶನ ನೀಡಿದೆ. ಆದರೆ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಸಿ ನೌಕರರು, ಖಾಯಂ ಶಿಕ್ಷಕರನ್ನು ನೇಮಕ ಮಾಡದೇ, ಅಂಗನವಾಡಿ ನೌಕರರನ್ನು ನಿಯೋಜನೆ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ADVERTISEMENT

ಸರ್ಕಾರದ ಐಸಿಡಿಎಸ್ ಯೋಜನೆಗಳಲ್ಲಿ ಅಂಗನವಾಡಿ ಮಕ್ಕಳಿಗೆ ನಿರ್ಮಿಸಬೇಕಾದ ಶಾಲಾ ಪೂರ್ವ ಶಿಕ್ಷಣಕ್ಕೆ ಹಾಗೂ ಮಕ್ಕಳ ಲಾಲನೆ, ಪಾಲನೆಗಳು ಮಾಡಲು ತೊಂದರೆ ಆಗಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಕಾಲಕ್ಕೆ ಪೌಷ್ಠಿಕ ಆಹಾರ ಹಾಗೂ ಪ್ರತಿದಿನದ ಅಂಕಿ–ಅಂಶಗಳನ್ನು ಆನ್‍ಲೈನ್ ನಲ್ಲಿ ಕಳಿಸಲು ತೊಂದರೆ ಆಗಿದೆ. ಇದರಿಂದ ಅಂಗನವಾಡಿ ನೌಕರರನ್ನು ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿರುವುದನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಕೆ.ರತ್ನಮ್ಮ, ತಾಲ್ಲೂಕಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಅಂಗನವಾಡಿ ಕಾರ್ಯಕರ್ತೆಯರ ಪೈಕಿ ವಯಸ್ಸಾದ, ಅಂಗವಿಕಲರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಂಗನವಾಡಿ ನೌಕರರನ್ನು ನೇಮಿಸಲಾಗಿದೆ. ಇದರಿಂದ ನೌಕರರು ಮಾನಸಿಕ ಒತ್ತಡಕ್ಕೆ ಸಿಲುಕಿ, ಅನಾರೋಗ್ಯದಿಂದ ಬಳಲುವಂತೆ ಮಾಡಿದೆ. ಇದರಿಂದ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿರುವ ಅಂಗನವಾಡಿ ನೌಕರರನ್ನು ಬದಲಾಯಿಸಿ, ಗ್ರೂಪ್ ಸಿ ನೌಕರರನ್ನು ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಸಂಘಟನೆಯ ಕಾರ್ಯದರ್ಶಿ ಕೆ.ಗೀತಾ, ಖಜಾಂಚಿ ಶಿಲ್ಪ, ಎನ್.ಗಂಗರತ್ನ, ವಿಮಲ, ಈಶ್ವರಮ್ಮ, ಎಸ್.ಸುಜಾತ, ವಿ.ಮಂಜುಳ, ಎನ್.ವರಲಕ್ಷ್ಮೀ, ಡಿ.ಎಸ್.ಮಮತ, ಸಿ.ಎನ್.ಉಮಾದೇವಿ, ವಿ.ವರಲಕ್ಷ್ಮೀ, ಪಿ.ಎ.ವೀಣಾ, ಎಸ್.ಕವಿತ, ಎ.ಎನ್.ಪವಿತ್ರ ಅಂಗನವಾಡಿ ನೌಕರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.