
ಬಾಗೇಪಲ್ಲಿ: ‘ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಅಲ್ಲದೆ, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ನಮ್ಮ ಕೋರಿಕೆಗಳಿಗೆ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ, ಮೂಲಸೌಲಭ್ಯಕ್ಕಾಗಿ ನಾವೇ ದೇಣಿಗೆ ಸಂಗ್ರಹಿಸುತ್ತಿದ್ದೇವೆ’ ಎಂದು ರೈತರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರೈತರು, ಮಂಡಿ ಮಾಲೀಕರು, ವ್ಯಾಪಾರಸ್ತರು ಮಂಗಳವಾರ ದೇಣಿಗೆ ಸಂಗ್ರಹಿಸಿದರು. ಸಂಗ್ರಹವಾದ ದೇಣಿಗೆ ಹಣದಿಂದ ಮಾರುಕಟ್ಟೆಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಮಾಡಿಕೊಳ್ಳುತ್ತೇವೆ ಎಂದು ರೈತರು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ರೈತರು ಟೊಮೆಟೊ ಸೇರಿದಂತೆ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಾರೆ. ಅಲ್ಲದೆ ಪಕ್ಕದ ಗುಡಿಬಂಡೆ, ಚೇಳೂರು ತಾಲ್ಲೂಕುಗಳಿಂದ ನೆರೆಯ ಆಂಧ್ರಪ್ರದೇಶದ ಹಿಂದೂಪೂರ, ಲೇಪಾಕ್ಷಿ, ಚಿಲಮತ್ತೂರು, ಗೊರಂಟ್ಲ ಸೇರಿದಂತೆ ವಿವಿಧ ಕಡೆಯ ರೈತರು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗೆ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಟೊಮೆಟೊ ವ್ಯಾಪಾರ ವಹಿವಾಟಿಗೆ ತೊಂದರೆ ಆಗಿದೆ. ಹೀಗಾಗಿ, ಪಕ್ಕದ ಕೆಎಚ್‍ಬಿ ಕಾಲೊನಿಯಲ್ಲಿ ಟೊಮೆಟೊ ವ್ಯಾಪಾರ ಮಾಡಲಾಗುತ್ತಿದೆ. ಟೊಮೆಟೊ ಮಂಡಿಗಳನ್ನು ನಿರ್ಮಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರತಿದಿನ ನೂರಾರು ರೈತರು, ತರಕಾರಿ ವ್ಯಾಪಾರಸ್ಥರು, ಗ್ರಾಹಕರು ತರಕಾರಿ ಖರೀದಿ ಹಾಗೂ ಮಾರಾಟ ಮಾಡಲು ಬರುತ್ತಾರೆ. ಕೊಳೆತ, ಗುಣಮಟ್ಟರಹಿತ ತರಕಾರಿಗಳನ್ನು ಎಲ್ಲೆಂದರಲ್ಲಿ ಬೀಸಾಡಲಾಗಿದೆ. ಮಾರುಕಟ್ಟೆಯ ರಸ್ತೆಗಳು ಕೆಮ್ಮಣ್ಣಿನಿಂದ ಕೂಡಿವೆ. ಮಳೆ ನೀರಿನಲ್ಲಿ ಮಣ್ಣು ಸೇರಿಕೊಂಡು ಕೆಸರು ಗದ್ದೆಯಂತೆ ಭಾಸವಾಗುತ್ತಿದೆ. ರೈತರು, ವ್ಯಾಪಾರಸ್ಥರು, ಗ್ರಾಹಕರು, ಮಂಡಿ ಮಾಲೀಕರು ಕೆಸರಿನ ಮಣ್ಣಿನಲ್ಲೇ ವ್ಯಾಪಾರ, ವಹಿವಾಟು ನಡೆಸುವಂತಾಗಿದೆ. ನೊಣ, ಸೊಳ್ಳೆ, ಇಲಿ, ಹೆಗ್ಗಣ, ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಕಸ, ತರಕಾರಿ ತ್ಯಾಜ್ಯಗಳು ರಾಶಿಗಟ್ಟಲೇ ಇದೆ ಎಂದು ರೈತರು ದೂರಿದರು.
ಇದರಿಂದ ಎಪಿಎಂಸಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹೆಚ್ಚಾಗಿರುವುದರಿಂದ, ರೈತರು, ಮಂಡಿಮಾಲೀಕರು, ವ್ಯಾಪಾರಸ್ಥರು ದೇಣಿಗೆ ವಸೂಲಿ ಮಾಡಲು ಮುಂದಾಗಿದ್ದಾರೆ. ನಮ್ಮ ಎಪಿಎಂಸಿಗೆ ಅಧಿಕಾರಿಗಳು ಸೌಲಭ್ಯಗಳು ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವುದರಿಂದ, ನಾವೇ ಸ್ವಚ್ಛತೆ ಮಾಡಲು, ನೀರು, ಶೌಚಾಲಯಗಳ ಸ್ವಚ್ಛತೆಯ ನಿರ್ವಹಣೆ ಮಾಡಲು ದೇಣಿಗೆ ವಸೂಲಿ ಮಾಡಿದ್ದಾರೆ.
"ಎಪಿಎಂಸಿ ಸ್ವಚ್ಛತೆಗಾಗಿ ₹70 ಸಾವಿರ ಹಣ ಪಡೆಯಲಾಗಿದೆ. ಆದರೆ ಸ್ವಚ್ಛತೆ ಮಾತ್ರ ಮಾಡಿಲ್ಲ. ಕೆಸರಿನ, ಕೊಳೆತ ಮಣ್ಣಿನಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಕುಡಿಯುವ ನೀರಿನ ಘಟಕ, ಕ್ಯಾಂಟೀನ್ ಇಲ್ಲ. ರೈತರಿಗೆ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ. ಕನಿಷ್ಠ ಸೌಲಭ್ಯ ಮಾಡಿಕೊಳ್ಳಲು ದೇಣಿಗೆ ಸಂಗ್ರಹಿಸಲಾಗಿದೆ ಎಂದು ಮಂಡಿ ಮಾಲೀಕ ನಂಜುಂಡ ತಿಳಿಸಿದರು.
ಎಸ್.ಎ.ಶಂಕರಪ್ಪ, ಸುರೇಶ, ಶ್ರೀನಿವಾಸ್, ಮಾಕಿರೆಡ್ಡಿ, ಆದಿರೆಡ್ಡಿ, ನಂಜುಂಡಪ್ಪ ಸೇರಿದಂತೆ ರೈತರು, ಮಂಡಿಮಾಲೀಕರು, ವ್ಯಾಪಾರಸ್ತರು ಇದ್ದರು.
ದುರಸ್ತಿಯಾಗದ ಆರ್‌ಒ ಪ್ಲಾಂಟ್
ಪ್ರತಿ ಶುಕ್ರವಾರ ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮಾಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಅನೇಕ ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ಅದನ್ನು ಈವರೆಗೆ ದುರಸ್ತಿ ಮಾಡಿಸಿಲ್ಲ. ಶೌಚಾಲಯಗಳು ಸಮರ್ಪಕವಾಗಿ ಇಲ್ಲ. ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗುವ ಲಕ್ಷಣವಿದೆ. ಕನಿಷ್ಠ ಮೂಲ ಸೌಲಭ್ಯಗಳನ್ನು ಸ್ಥಳೀಯ ಎಪಿಎಂಸಿ ಕಾರ್ಯದರ್ಶಿಗಳು ಅಧಿಕಾರಿಗಳು ಕಲ್ಪಿಸಿಲ್ಲ. ಮುಖ್ಯವಾಗಿ ಎಪಿಎಂಸಿಯಲ್ಲಿ ಕಾಯಂ ಅಧಿಕಾರಿಗಳು ಸಿಬ್ಬಂದಿಯವರು ಇಲ್ಲ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.