ಬಾಗೇಪಲ್ಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ವಹಿವಾಟು ಮಾಡುವ ಸಮಯವನ್ನು ಬಹುತೇಕ ರೈತರ ಅಭಿಪ್ರಾಯದಂತೆ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ನಿಗದಿಪಡಿಸಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆಡಳಿತಾಧಿಕಾರಿ ಮನೀಷ್ ಎನ್.ಪತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರೈತರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಮಾರುಕಟ್ಟೆ ಪ್ರಾರಂಭವಾದಾಗಿನಿಂದಲೂ ತರಕಾರಿ ವ್ಯಾಪಾರ ವಹಿವಾಟು ಬೆಳಿಗ್ಗೆ ನಡೆಯುತ್ತಿದ್ದರೂ ಕೋವಿಡ್ ಸಂದರ್ಭದಲ್ಲಿ ಆದ ತಾತ್ಕಾಲಿಕ ಸಮಯ ಬದಲಾವಣೆ ಇಂದಿನವರೆಗೂ ಬಹುತೇಕ ರೈತರಿಗೆ ಸಮಸ್ಯೆ ತಂದಿತ್ತು. ಕೆಲ ಮಂಡಿ ವ್ಯಾಪಾರಸ್ಥರು ಮಾಡುವ ಸಮಯವೇ ವ್ಯಾಪಾರದ ಸಮಯವಾಗಿತ್ತು. ದಿನಕ್ಕೊಂದು ಸಮಯದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದರಿಂದ ರೈತರು ಗೊಂದಲದಲ್ಲಿ ಇರುವಂತೆ ಆಗಿತ್ತು. ಮಾರುಕಟ್ಟೆ ವ್ಯಾಪಾರ ವಹಿವಾಟಿನ ಸಮಯವನ್ನು ಮಂಡಿ ವ್ಯಾಪಾರಸ್ಥರು ತೀರ್ಮಾನ ಮಾಡುವ ಪರಿಸ್ಥಿತಿಗೆ ಹೋಗಿದ್ದು ರೈತರು ಸಮಸ್ಯೆಯ ಎದುರಿಸುವಂತಾಗಿತ್ತು. ಹೀಗಾಗಿ ಸೂಕ್ತ ಸಮಯ ನಿಗದಿಗಾಗಿ ಅಧಿಕಾರಿಗಳನ್ನು ರೈತರು ಒತ್ತಾಯಿಸಿದ್ದರು.
ಕೆಲ ದಿನಗಳ ಹಿಂದೆ ನಡೆದಿದ್ದ ಸಭೆಯಲ್ಲಿ ತರಕಾರಿ ವ್ಯಾಪಾರ ವಹಿವಾಟು ಸಮಯವನ್ನು ತಾತ್ಕಾಲಿಕವಾಗಿ 2 ಗಂಟೆಗೆ ನಿಗದಿಪಡಿಸಲಾಗಿತ್ತು. ಇದರಿಂದ ರೈತರಿಗೆ ಸಮಸ್ಯೆ ಹೆಚ್ಚಾಗಿದ್ದರಿಂದ ಸಮಯವ ಬದಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ತರಲಾಗಿತ್ತು. ಹೀಗಾಗಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ಕರೆಯಲಾಗಿತ್ತು.
ಸೂಕ್ತ ಸಮಯ ನಿಗದಿಪಡಿಸುವ ನಿಟ್ಟಿನಲ್ಲಿ ರೈತರ ಅನಿಸಿಕೆ-ಅಭಿಪ್ರಾಯ ಕೇಳಲಾಯಿತು. ಶೇ 80ಕ್ಕಿಂತ ಹೆಚ್ಚಿನ ರೈತರು ಬೆಳಿಗ್ಗಿನ ಸಮಯವೇ ತರಕಾರಿ ವ್ಯಾಪಾರ ವಹಿವಾಟಿಗೆ ಸೂಕ್ತ ಎಂದರು. ಬಹುಮತದ ರೈತರ ಅನಿಸಿಕೆಯಂತೆ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಮಾರುಕಟ್ಟೆಯಲ್ಲಿ ಸ್ವಚ್ಛತೆ ಮತ್ತು ಅಗತ್ಯ ಸೌಲಭ್ಯಗಳನ್ನು ರೈತರಿಗೆ ಕಲ್ಪಿಸುವ ನಿಟ್ಟಿನಲ್ಲಿ ಒಂದು ವಾರದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎರಡು ದಿನಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಸ್ವಚ್ಛತೆ ನಡೆಸಲಾಗುತ್ತದೆ ಎಂದು ತಹಶೀಲ್ದಾರ್ ಸಭೆಯಲ್ಲಿ ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ಅಂಜು, ಮುಖಂಡ ನರಸಿಂಹರೆಡ್ಡಿ, ಗೋವಿಂದರೆಡ್ಡಿ, ರಾಮನಾಥ್, ಚನ್ನರಾಯಪ್ಪ, ಈಶ್ವರ ರೆಡ್ಡಿ, ರಘುನಾಥ ರೆಡ್ಡಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.