ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಬಳಿಯ ಚಿತ್ರಾವತಿ ಬ್ಯಾರೇಜು ಗುರುವಾರ ರಾತ್ರಿ ಕೋಡಿ ಹರಿಯಿತು. ಶುಕ್ರವಾರ ಸಂಜೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗಿನ ಅರ್ಪಿಸಿದರು.
ತಾಲ್ಲೂಕಿನ ಪರಗೋಡು ಸುತ್ತಮುತ್ತಲೂ ಕಳೆದ ಒಂದು ವಾರದಿಂದ ಬಿದ್ದ ಭಾರಿ ಮಳೆಗೆ ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಶುಕ್ರವಾರ ಬೆಳಿಗ್ಗೆ ಕೋಡಿ ಹರಿದಿದೆ. ಬ್ಯಾರೇಜಿನಲ್ಲಿ 0.7 ಟಿಎಂಸಿ ನೀರು ಸಂಗ್ರಹ ಆಗಿದೆ.
ತಾಲ್ಲೂಕಿನ ಗಡಿದಂ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಅರ್ಚಕ ಅಶ್ವತ್ಥಪ್ಪ ಚಿತ್ರಾವತಿ ಬ್ಯಾರೇಜಿನಲ್ಲಿ ಪೂಜೆ ಸಲ್ಲಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾನಾಯ್ಡು, ಪ್ರಶಾಂತ್ ವರ್ಣಿ, ಅಮೃತಸುಬ್ಬಾರೆಡ್ಡಿ, ನಾಗಮಣಿ ಸೇರಿದಂತೆ ಗಣ್ಯರು ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಅರಿಶಿಣ, ಕುಂಕುಮ, ಹೂವು, ಎಲೆ, ಅಡಿಕೆ, ಹಣ್ಣು ಸಮರ್ಪಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಪ್ರತಿ ವರ್ಷವು ಕ್ಷೇತ್ರದಲ್ಲಿ ಮಳೆ ಆಗಿ, ಕೆರೆ, ಕುಂಟೆಳು, ಕಾಲುವೆ ಹರಿಯುತ್ತಿವೆ. ಇದರಂತೆ ಚಿತ್ರಾವತಿ ಬ್ಯಾರೇಜಿನಲ್ಲಿ ಶುಕ್ರವಾರದ ದಿನ ಕೋಡಿ ಹರಿದಿರುವುದು ಈ ಭಾಗದ ಜನರಿಗೆ ಸಂತಸ ಮೂಡಿಸಿದೆ. ನೀರಿನ ಒಳಹರಿವಿನಿಂದ ಅಂತರ್ಜಲ ಮಟ್ಟ ಹೆಚ್ಚಿಸಿದೆ. ಪಟ್ಟಣಕ್ಕೆ 2 ವರ್ಷಗಳಷ್ಟು ಕುಡಿಯುವ ನೀರು ಕಲ್ಪಿಸಬಹುದು. ಶುದ್ಧಿಕರಣ ಘಟಕದಲ್ಲಿ ಕೆಲ ಪೈಪ್, ಪಂಪ್, ಮೋಟಾರ್‌ಗಳನ್ನು ದುರಸ್ತಿ ಮಾಡಿಸಿ, ಪಟ್ಟಣದ ಮನೆಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಬಿದ್ದ ಮಳೆಯಿಂದ ಕೆಲ ರಸ್ತೆ, ಮನೆಗಳು, ಶೆಡ್ ಹಾಗೂ ಬೆಳೆ ಹಾನಿ ಆಗಿದೆ. 3 ದಿನಗಳ ಒಳಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕಲ್ಪಿಸಲಾಗುವುದು. ಕುಸಿತವಾದ ಸೇತುವೆಗಳನ್ನು ರಿಪೇರಿ ಮಾಡಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.