ADVERTISEMENT

ಬಾಗೇಪಲ್ಲಿ | ಚೀಟಿ ಪಡೆಯಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 5:49 IST
Last Updated 3 ಸೆಪ್ಟೆಂಬರ್ 2025, 5:49 IST
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಚೀಟಿ ವಿತರಣೆ ಮಾಡುವ ಕೌಂಟರ್‌ನ ಮುಂದೆ ಜನರ ಸಾಲು
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಚೀಟಿ ವಿತರಣೆ ಮಾಡುವ ಕೌಂಟರ್‌ನ ಮುಂದೆ ಜನರ ಸಾಲು   

ಬಾಗೇಪಲ್ಲಿ: ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಒಳ, ಹೊರ ರೋಗಿಗಳಿಗೆ ಆನ್‍ಲೈನ್ ಚೀಟಿ ವಿತರಿಸುವ ಇಬ್ಬರು ಸಿಬ್ಬಂದಿ ಇದ್ದಾರೆ. ಇದರಿಂದ ಕೌಂಟರ್ ಮುಂದೆ ರೋಗಿಗಳು ಪ್ರತಿದಿನ ಕಾಯುವ ಸ್ಥಿತಿ ಉಂಟಾಗುತ್ತಿದೆ.

ಕಸಬಾ, ಮಿಟ್ಟೇಮರಿ, ಗೂಳೂರು, ಪಾತಪಾಳ್ಯ ಹೋಬಳಿಗಳ ಗ್ರಾಮಗಳಿಂದ ನೂರಾರು ಜನರು ಚಿಕಿತ್ಸೆಗೆ ಬರುತ್ತಾರೆ. ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಲಾಗಿದೆ. 400 ರಿಂದ 500 ರೋಗಿಗಳಿಗೆ ಸರ್ಕಾರ ಕನಿಷ್ಠ 4 ನೌಕರರನ್ನು ನೇಮಕ ಮಾಡಬೇಕು. 4 ಮಂದಿಯಲ್ಲಿ ಇಬ್ಬರನ್ನು ವಿವಿಧ ಆರೋಗ್ಯ ಸೇವೆಗೆ ನಿಯೋಜನೆ ಮಾಡಲಾಗಿದೆ. ಇಬ್ಬರು ಆನ್‍ಲೈನ್ ಚೀಟಿ ನೀಡಲು ಇರುವುದರಿಂದ ರೋಗಿಗಳು ಚೀಟಿ ಪಡೆಯಲು ತೊಂದರೆ ಆಗಿದೆ.

ಜನರು ಬೆಳಗ್ಗೆ 9 ಗಂಟೆಗೆ ಆಗಮಿಸಿ ಕೌಂಟರ್ ಮುಂದೆ ಕಾಯುತ್ತಾರೆ. ದಿನನಿತ್ಯ ಚೀಟಿ ಪಡೆಯಲು ನೂಕುನುಗ್ಗಲು ಉಂಟಾಗುತ್ತಿದೆ. ತುರ್ತು ಚಿಕಿತ್ಸೆ, ಪರೀಕ್ಷೆ ಪಡೆಯಲು ಬರುವ ಗರ್ಭಿಣಿ, ಬಾಣಂತಿಯರು, ಮಕ್ಕಳು, ಹಿರಿಯನಾಗರಿಕರು ಸರತಿಸಾಲಿನಲ್ಲಿ ನಿಲ್ಲಲು ತೊಂದರೆ ಪಡುತ್ತಿದ್ದಾರೆ.

ADVERTISEMENT

ಮತ್ತೊಂದೆಡೆ ಚುಚ್ಚುಮದ್ದು, ಎಕ್ಸರೇ, ಆಯುಷ್ಮಾನ್ ಭಾರತ್ ಚೀಟಿ ವಿತರಣೆ, ನೊಂದಣಿ, ಶುಶ್ರೂಷಕ, ಶುಶ್ರೂಷಕಿಯರು, ಕಚೇರಿ ಸಿಬ್ಬಂದಿ, ಚಾಲಕರು ಸೇರಿದಂತೆ ಆರೋಗ್ಯ ಸೇವೆ ಮಾಡಿಸಲು ಸರ್ಕಾರ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ನೌಕರರಾಗಿ ಕೆಲಸ ಮಾಡಿಸುತ್ತಿದೆ. ಆದರೆ ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲ. ವೇತನ, ಸೇವಾ ಭದ್ರತೆ, ಪಿಎಫ್, ರಜೆ, ಪಿಂಚಣಿ ಇಲ್ಲ.

ನೂರಾರು ರೋಗಿಗಳು ಚೀಟಿ ಪಡೆಯುವ ಕೌಂಟರ್‌ನಲ್ಲಿ ಇಬ್ಬರು ಮಾತ್ರ ಚೀಟಿ ವಿತರಿಸಿದರೆ ಹೇಗೆ? ಎಂದು ಪಟ್ಟಣದ ನಿವಾಸಿ ದಸ್ತಗೀರ್ ಪ್ರಶ್ನಿಸಿದರು.

ಗುತ್ತಿಗೆ, ಹೊರಗುತ್ತಿಗೆ, ದಿನಕೂಲಿ ಪದ್ಧತಿ ಬೇಡ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಇಲಾಖಾವಾರು ಸಿ ಮತ್ತು ಡಿ ನೌಕರರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಬೀದಿಗಿಳಿದು ಸಿಐಟಿಯು ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸಿದೆ ಎಂದು ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ ಆರೋಪಿಸಿದರು.

ಸರ್ಕಾರ ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಸಬೇಕು. ಖಾಲಿ ಇರುವ ವೈದ್ಯ, ಸಿಬ್ಬಂದಿ ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಸಿಐಟಿಯು ಮುಖಂಡ ಕೆ.ಮುನಿಯಪ್ಪ ತಿಳಿಸಿದರು.

ಆರೋಗ್ಯ ರಕ್ಷಾ ಸಮಿತಿಯಲ್ಲಿ 5 ಸಿಬ್ಬಂದಿ ಇದ್ದಾರೆ. ಆದರೆ ಇಬ್ಬರನ್ನು ಬೇರೆ ಕೆಲಸಗಳಿಗೆ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಸರ್ಕಾರ ಅನುದಾನ ನೀಡುವುದಿಲ್ಲ. ಆಸ್ಪತ್ರೆಯ ಆಡಳಿತದ ಹಣದಲ್ಲಿ ವೇತನ ನೀಡಲು ಆಗಲ್ಲ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿನಯ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.