ಬಾಗೇಪಲ್ಲಿ: ತಾಲ್ಲೂಕಿನಿಂದ 20 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ದೇಮಕೇತೆಪಲ್ಲಿ ಗ್ರಾಮಕ್ಕೆ ಕೃಷ್ಣಾ ನದಿಯ ನೀರನ್ನು ಕಾಲುವೆ ಮೂಲಕ ಹರಿಸಲಾಗಿದೆ. ಕೃಷ್ಣಾ ನದಿಯ ಬಿ ಯೋಜನೆಯಡಿ ಇದೇ ನೀರನ್ನು ತಾಲ್ಲೂಕಿಗೆ ಹರಿಸಿದಲ್ಲಿ, ಇಲ್ಲಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಜನರು, ಜಾನುವಾರಿಗಳ ಬಾಯಾರಿಕೆಯ ದಾಹ ನೀಗಲಿದೆ. ಅಲ್ಲದೆ, ಕೃಷಿ ಕ್ಷೇತ್ರಕ್ಕೂ ಸಾಕಷ್ಟು ಸಹಾಯವಾಗಲಿದೆ.
ರಾಜ್ಯದ ಕಟ್ಟಕಡೆಯ ಹಾಗೂ ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿರುವ ಬಾಗೇಪಲ್ಲಿ ತಾಲ್ಲೂಕು ಅತಿ ಹಿಂದುಳಿದ ತಾಲ್ಲೂಕು ಆಗಿದ್ದು, ನೀರಿನ ಮೂಲಗಳೇ ಇಲ್ಲವಾಗಿದೆ. ಇದರಿಂದಾಗಿ ಈ ಭಾಗದ ಜನರು ಮಳೆ ಹಾಗೂ ಕೊಳವೆ ಬಾವಿಗಳನ್ನೇ ನಂಬಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ, ನದಿ ತಿರುವು ಅಥವಾ ಜಲಾಶಯ ನಿರ್ಮಾಣ ಮಾಡುವ ಮೂಲಕ ತಾಲ್ಲೂಕಿಗೆ ಶಾಶ್ವತವಾದ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬುದು ಈ ಭಾಗದ ಜನರ ಆಗ್ರಹ.
ಬಾಗೇಪಲ್ಲಿ, ಚೇಳೂರು ಹಾಗೂ ಗುಡಿಬಂಡೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳ ರೈತರು ಕೃಷಿ, ತರಕಾರಿ, ಹೂವು, ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಉತ್ತಮ ಮಳೆಯಾದರೆ, ಜನರು ಮತ್ತು ಜಾನುವಾರುಗಳಿಗೆ ನೀರು ಸಿಗಲಿದೆ. ಕೆರೆ, ಕುಂಟೆ, ಕಾಲುವೆಗಳು, ಚಿತ್ರಾವತಿ ಮತ್ತು ವಂಡಮಾನ್ ಜಲಾಶಯಗಳು ಭರ್ತಿಯಾಗಲಿವೆ. ಆದರೆ, ಮಳೆಯ ಅನಿಶ್ಚಿತತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಕೃಷ್ಣಾ ನದಿಯಿಂದ 420 ಕಿ. ಮೀ ದೂರದಲ್ಲಿರುವ ಸತ್ಯಸಾಯಿ ಜಿಲ್ಲೆಯ ದೇಮೆಕೇತೆಪಲ್ಲಿ ಗ್ರಾಮದವರೆಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಅದೇ ರೀತಿ ಕೃಷ್ಣಾ ನದಿ ನೀರನ್ನು ಬಯಲುಸೀಮೆ ತಾಲ್ಲೂಕು ಬಾಗೇಪಲ್ಲಿಗೂ ಹರಿಸಿದರೆ, ರೈತರ ಸಂಕಷ್ಟಗಳು ದೂರವಾಗಲಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ಯೋಜನೆ ಕೈಗೆತ್ತಿಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಕೃಷ್ಣಾ ನದಿ ನೀರಿನಲ್ಲಿ ರಾಜ್ಯದ ಪಾಲು ಇದ್ದರೂ, ಅದರ ಸದ್ಬಳಕೆಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಆಂಧ್ರಪ್ರದೇಶದ ಸರ್ಕಾರದ ಜೊತೆ ಕೃಷ್ಣಾ ನದಿಯ ‘ಬಿ’ ಯೋಜನೆ ಪಾಲು ಬಗ್ಗೆ ರಾಜ್ಯ ಸರ್ಕಾರ ಈವರೆಗೆ ಚರ್ಚೆ ಮಾಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆ ಪ್ರದೇಶವು ಕೃಷ್ಣಾ, ಪೆನ್ನಾರ್ ಕಣಿವೆ ವ್ಯಾಪ್ತಿಗೆ ಒಳಪಟ್ಟಿದೆ. ನದಿ, ನಾಲೆ ಇಲ್ಲದ ತಾಲ್ಲೂಕಿಗೆ ಕೃಷ್ಣಾ ನದಿ ನೀರು ಹರಿಸಬೇಕು. ಇದರಿಂದ ರೈತರು ಸಮೃದ್ಧವಾದ ಬೆಳೆ ಬೆಳೆಯಬಹುದು. ಜನ, ಜಾನುವಾರುಗಳಿಗೆ ಫ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಜಿಲಕರಪಲ್ಲಿ ಗ್ರಾಮದ ರೈತ ಶಿವಪ್ಪ ಒತ್ತಾಯಿಸಿದರು.
ಬಯಲುಸೀಮೆ ತಾಲ್ಲೂಕಿಗೆ ಮುಖ್ಯವಾಗಿ ಎಚ್.ಎನ್.ವ್ಯಾಲಿ ಅಥವಾ ಎತ್ತಿನಹೊಳೆಯಿಂದ ನೀರು ಹರಿಸಿದರೆ ಕೆರೆ, ಕುಂಟೆ, ಕಾಲುವೆಗಳನ್ನು ತುಂಬಿಸಬಹುದು. ಆದರೆ, ಈ ಯೋಜನೆಗಳಿಂದ ಶಾಶ್ವತ ನೀರಾವರಿ ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡಲೇ ಆಂಧ್ರಪ್ರದೇಶ ಸರ್ಕಾರದ ಜೊತೆ ಚರ್ಚಿಸಬೇಕು. ಕಡಿಮೆ ದೂರದಲ್ಲಿ ಹರಿಯು ಕೃಷ್ಣಾ ನದಿ ನೀರನ್ನು ತಾಲ್ಲೂಕಿಗೆ ಕಾಲುವೆಗಳ ಮೂಲಕ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸಹಕಾರ್ಯದರ್ಶಿ ಬಿಳ್ಳೂರುನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.