ADVERTISEMENT

ಬಾಗೇಪಲ್ಲಿ | ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 5:31 IST
Last Updated 1 ಮಾರ್ಚ್ 2026, 5:31 IST
ಬಾಗೇಪಲ್ಲಿ ಪಟ್ಟಣದ ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು
ಬಾಗೇಪಲ್ಲಿ ಪಟ್ಟಣದ ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು   

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಶನಿವಾರ ಅನಿರೀಕ್ಷಿತ ಭೇಟಿ ನೀಡಿದರು. ರಾಗಿ ಖರೀದಿ ಮಾಡಿದ ಅಂಕಿ ಅಂಶಗಳು, ರಾಗಿ ದಾಸ್ತಾನು ಮತ್ತು ಸ್ಥಳೀಯ ರೈತರಿಂದ ಮಾಹಿತಿ ಪಡೆದರು.

ಖರೀದಿ ಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ರಾಗಿ ಚೀಲಗಳನ್ನು ತೆಗೆಸಿ, ರಾಗಿ ಗುಣಮಟ್ಟವನ್ನು ಪರಿಶೀಲಿಸಿದರು. 

ಈ ವೇಳೆ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಯನ್ನು ₹4,886ಗೆ ಖರೀದಿಸಲಾಗುವುದು. ಜಿಲ್ಲೆಯಲ್ಲಿ 7,400 ರೈತರು ನೋಂದಣಿ ಮಾಡಿಕೊಂಡಿದ್ದು, 1.58 ಲಕ್ಷ ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ರಾಗಿ ಬೆಳೆದ ರೈತರಿಗೆ ಉತ್ತಮ ಲಾಭ ನೀಡುವ ನಿಟ್ಟಿನಲ್ಲಿ ಬೆಂಬಲ ಬೆಲೆ ಘೋಷಿಸಲಾಗಿದೆ’ ಎಂದರು. 

ADVERTISEMENT

ಜಿಲ್ಲೆಯ ರಾಗಿ ಖರೀದಿ ಕೇಂದ್ರಗಳಲ್ಲಿ ಮಾರ್ಚ್ 31ರವರೆಗೆ ರಾಗಿ ಖರೀದಿಸಲಾಗುವುದು. ಖರೀದಿಯಲ್ಲಿ ಲೋಪಗಳು ಆಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ರೈತರಿಂದ ಯಾವುದೇ ದೂರುಗಳು ಬರಬಾರದು. ರೈತರಿಂದ ಖರೀದಿ ಮಾಡುವ ಆಹಾರ ಧಾನ್ಯಗಳು ಗುಣಮಟ್ಟದಿಂದ ಕೂಡಿರಬೇಕು. ತೂಕದಲ್ಲಿ ವ್ಯತ್ಯಾಸ ಇರಬಾರದು. ಸರ್ಕಾರದ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಮನೀಷಾ ಎನ್ ಪತ್ರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿದೇರ್ಶಕ ನಾಗರಾಜ ಕೆಳಗಿನಮನಿ, ವಿಜಯಕುಮಾರ್, ತಾಲ್ಲೂಕು ಆಹಾರ ಶಿರಸ್ತೇದಾರ್ ಪುಷ್ಪ, ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.