ADVERTISEMENT

ಬಾಗೇಪಲ್ಲಿ: ಕಸ ಹಾಕಿದ ಜಾಗದಲ್ಲಿ ರಂಗೋಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:55 IST
Last Updated 7 ಫೆಬ್ರುವರಿ 2026, 5:55 IST
ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆ ಪಕ್ಕದಲ್ಲಿ ಬೀಸಾಡಿದ್ದ ಕಸ, ತ್ಯಾಜ್ಯದ ಜಾಗಗಳಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಆರೋಗ್ಯ ಶಾಖೆ ಅಧಿಕಾರಿಗಳು, ರಂಗೋಲಿ ಬಿಡಿಸಿ, ಟೈರು, ಬಾಟಲಿಗಳನ್ನು ಹುವಿನ ಅಲಂಕಾರ ಮಾಡಿ ಜನಜಾಗೃತಿ ಮೂಡಿಸಿದರು.
ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆ ಪಕ್ಕದಲ್ಲಿ ಬೀಸಾಡಿದ್ದ ಕಸ, ತ್ಯಾಜ್ಯದ ಜಾಗಗಳಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಆರೋಗ್ಯ ಶಾಖೆ ಅಧಿಕಾರಿಗಳು, ರಂಗೋಲಿ ಬಿಡಿಸಿ, ಟೈರು, ಬಾಟಲಿಗಳನ್ನು ಹುವಿನ ಅಲಂಕಾರ ಮಾಡಿ ಜನಜಾಗೃತಿ ಮೂಡಿಸಿದರು.   

ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆ, ಡಾ.ಜಚನಿ (ಗೂಳೂರು) ರಸ್ತೆ, ನ್ಯಾಷನಲ್ ಕಾಲೇಜಿನ ರಸ್ತೆಗಳ ಪಕ್ಕ ಕಸ ಹಾಕಿದ ಸ್ಥಳಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಅರಳಿತ್ತು. ಜೊತೆಗೆ ಈ ಜಾಗದಲ್ಲಿ ಕಸ ಸುರಿಯಬಾರದು ಎಂಬ ನಾಮಫಲಕ ಅಳವಡಿಸಲಾಯಿತು. 

ಈ ಮೂಲಕ ಜನಸಾಮಾನ್ಯರು ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂಬ ಜಾಗೃತಿಯನ್ನು ಬಾಗೇಪಲ್ಲಿ ಪುರಸಭೆ ನಡೆಸಿಕೊಟ್ಟಿತು. 

ಕಸ ಸುರಿಯುವ ಜಾಗದಲ್ಲಿ ಪೌಡರ್ ಹಾಕಿ ಗಿಡ, ರೆಂಬೆ, ಟೈರುಗಳು ಮತ್ತು ಬಾಟಲಿಗಳಿಗೆ ಬಣ್ಣ ಬಳಿಯಲಾಗಿದೆ. ಕಸದ ರಾಶಿಯಿಂದ ದುರ್ನಾತ ಬೀರುತ್ತಿದ್ದ ಜಾಗದಲ್ಲಿ ಇದೀಗ ಬಣ್ಣಬಣ್ಣದ ರಂಗೋಲಿ ಚಿತ್ತಾರ ಮೂಡಿವೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ‘ಈವರೆಗೆ ಕಸ ತುಂಬಿದ ಜಾಗಗಳನ್ನು ಈಗ ಅಲಂಕರಿಸಲಾಗಿದೆ. ಕಸ, ತ್ಯಾಜ್ಯ ಹಾಕದಂತೆ ಜನಜಾಗೃತಿ ಬ್ಯಾನರ್ ಹಾಕಲಾಗಿದೆ. ಹೋಟೆಲ್, ಬೀದಿಬದಿ ವ್ಯಾಪಾರಸ್ಥರು ಈ ಜಾಗಗಳಲ್ಲಿ ಕಸ ಹಾಖಬಾರದು. ಹಸಿ, ಒಣ ಕಸ ಬೇರ್ಪಡಿಸಿ, ಮನೆಗಳು ಮತ್ತು ಅಂಗಡಿಗಳ ಮುಂದೆ ಬರುವ ಪೌರಕಾರ್ಮಿಕರಿಗೆ ಕಸದ ಡಬ್ಬಿಗಳನ್ನು ವಿತರಿಸಬೇಕು. ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಹಾಕಿದರೆ ಪರಿಸರಕ್ಕೆ ಧಕ್ಕೆ ಆಗಲಿದೆ. ಸಂಕ್ರಾಮಿಕ ರೋಗಗಳು ಹರಡುತ್ತವೆ. ಬೀದಿನಾಯಿಗಳ ಕಾಟ ಹೆಚ್ಚುತ್ತದೆ. ಸಾರ್ವಜನಿಕರು ಪಟ್ಟಣದ ಉತ್ತಮ ಪರಿಸರಕ್ಕೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಪರಿಸರ ಶಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಸಿ.ಕೆ. ಮಾರೇಗೌಡ ಮಾತನಾಡಿ, ‘ಪ್ರತಿದಿನ ಬೀದಿಬದಿ ಮತ್ತು ಅಂಗಡಿ ವ್ಯಾಪಾರಿಗಳು ಎಲ್ಲೆಂದರಲ್ಲಿ, ಪ್ಲಾಸ್ಟಿಕ್, ಕಸ, ತ್ಯಾಜ್ಯಗಳನ್ನು ಬೀಸಾಡಿದರೆ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಸಿದರು. 

ಆರೋಗ್ಯ ಶಾಖೆ ಮೇಲ್ವಿಚಾರಕ ಶಿವಪ್ಪ, ಚಿಕ್ಕಗಂಗರತ್ನಮ್ಮ, ನಂದಿನಿ ಕಮ್ಯೂನಿಟಿ ಅಧಿಕಾರಿಗಳಾದ ಗಂಗೋತ್ರಿ, ಮಂಜುಳ, ಆಯೇಷಾ, ಆಲಿಸಾಬ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.