ADVERTISEMENT

ಬಾಗೇಪಲ್ಲಿ | ರೆಡ್ಡಿಕೆರೆ ಕಟ್ಟೆ ಮೇಲೆ ಪ್ರಯಾಣ: ಅಪಘಾತಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:56 IST
Last Updated 4 ಜನವರಿ 2026, 6:56 IST
ಬಾಗೇಪಲ್ಲಿ ಹೊರವಲಯದ ಗೂಳೂರು ರಸ್ತೆಯ ರೆಡ್ಡಿಕೆರೆ ಕಟ್ಟೆ ಮೇಲೆ ವಾಹನ ಸವಾರರು ಸಂಚರಿಸುತ್ತಿರುವುದು
ಬಾಗೇಪಲ್ಲಿ ಹೊರವಲಯದ ಗೂಳೂರು ರಸ್ತೆಯ ರೆಡ್ಡಿಕೆರೆ ಕಟ್ಟೆ ಮೇಲೆ ವಾಹನ ಸವಾರರು ಸಂಚರಿಸುತ್ತಿರುವುದು   

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಗೂಳೂರು ರಸ್ತೆಯ ಮಾರ್ಗದ ರೆಡ್ಡಿಕೆರೆ ಕಟ್ಟೆಗೆ ತಡೆಗೋಡೆ ಇರದೇ ಇರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಪಟ್ಟಣದಿಂದ ಗೂಳೂರು, ಮಾರ್ಗಾನುಕುಂಟೆ, ತಿಮ್ಮಂಪಲ್ಲಿ, ಬಿಳ್ಳೂರು ಸೇರಿದಂತೆ ಆಂಧ್ರಪ್ರದೇಶದ ಕದಿರಿ, ಕಡಪ, ಪುಲಿವೆಂದುಲ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಪ್ರತಿದಿನ ಗ್ರಾಮಗಳಿಂದ, ವಿವಿಧ ಕಡೆಗಳಿಂದ ದ್ವಿಚಕ್ರ ವಾಹನ, ಕಾರು, ಟೆಂಪೊ, ಲಾರಿ ಸೇರಿದಂತೆ ಅನೇಕ ವಾಹನಗಳು ಇದೇ ಕೆರೆ ಕಟ್ಟೆ ಮೇಲೆ ಸಂಚರಿಸುತ್ತವೆ.

ಕೆರೆ ಕಟ್ಟೆಯು ತಿರುವಿನ ಆಕಾರದಲ್ಲಿದೆ. ಒಂದು ಕಡೆ ಕೆರೆ ಅಂಗಳ ಇದೆ. ಮತ್ತೊಂದು ಕಡೆ ಆಳವಾದ ಕಂದಕಗಳ ಜಾಗದಲ್ಲಿ ರೈತರು ಭತ್ತ, ಮುಸುಕಿನಜೋಳ  ಬೆಳೆದಿದ್ದಾರೆ. ಎರಡೂ ಕಡೆ ಸಂಚರಿಸಲು ಅಗಲವಾದ ರಸ್ತೆ ಇದೆ. ಆದರೆ ತಡೆಗೋಡೆಗೆ ರಾಡು, ಕಂಬ ಹಾಕಿಲ್ಲ. ಇದರಿಂದ ವಾಹನ ಸವಾರರು ರಸ್ತೆ ಮೇಲಿನ ಸಂಚಾರ ಆಯ ತಪ್ಪಿದರೆ, ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂತೆ ಇದೆ.

ADVERTISEMENT

ಕೆರೆ ಕಟ್ಟೆ ಮೇಲೆ ತಡೆಗೋಡೆ ಇಲ್ಲದೇ ಇರುವುದರಿಂದ ಈ ಹಿಂದೆ ಅತಿ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ್ದರಿಂದ ವಾಹನ ಸವಾರರೊಬ್ಬರು ಹಾಗೂ ಕೋಳಿ ಸಾಗಿಸುವ ಟೆಂಪೊ ಆಯತಪ್ಪಿ ಕೆರೆಗೆ ಬಿದ್ದಿತ್ತು.

ಶಾಲಾ ಬಸ್‍, ಸಾರಿಗೆ ಬಸ್, ಟ್ರ್ಯಾಕ್ಟರ್, ಆಟೊಗಳಲ್ಲಿ ಪ್ರತಿದಿನ ಶಾಲಾ ಮಕ್ಕಳು, ಗ್ರಾಮಸ್ಥರು ಸಂಚರಿಸುತ್ತಾರೆ. ತಿರುವಿನಲ್ಲಿ ಸೂಚನಾ ಫಲಕ ಹಾಕಿದ್ದಾರೆ. ರಸ್ತೆ ನಿರ್ಮಾಣದ ನಂತರ ಕೆರೆಕಟ್ಟೆ ಮೇಲೆ ಎರಡು ಬದಿಗಳಲ್ಲಿ ತಡೆಗೋಡೆ ಮಾಡಿಸುವುದು ಅಧಿಕಾರಿಗಳ ಕರ್ತವ್ಯ. ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸಿದರೂ, ಕಣ್ಣಿದ್ದು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಪೋತೇಪಲ್ಲಿ ಗ್ರಾಮದ ಗ್ರಾಮಸ್ಥ ಎ.ವೆಂಕಟರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.