ADVERTISEMENT

ಬಾಗೇಪಲ್ಲಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆಕ್ರೋಶ

ಗೃಹಬಳಕೆ ವಿದ್ಯುತ್‌ ಬಿಲ್ ಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:00 IST
Last Updated 29 ಜನವರಿ 2026, 6:00 IST
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಬಾಗೇಪಲ್ಲಿ ಬೆಸ್ಕಾಂ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಬಾಗೇಪಲ್ಲಿ ಬೆಸ್ಕಾಂ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು   

ಬಾಗೇಪಲ್ಲಿ: ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆ ತನಿಖೆಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ತಾಲ್ಲೂಕು ಸಮಿತಿ ಪದಾಧಿಕಾರಿಗಳು ಬುಧವಾರ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅನಧಿಕೃತ ವಿದ್ಯುತ್ ಸಂಪರ್ಕ ಕಲ್ಪಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗೃಹಬಳಕೆಯ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಬೇಕು. ಗೃಹಬಳಕೆ, ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕ್ರಮವನ್ನು ಈಗಲೇ ಕೈಬಿಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

ಪಟ್ಟಣದ ಸುಂದರಯ್ಯ ಭವನದಿಂದ ಪ್ರತಿಭಟನಕಾರರು ಕೆಂವು ಬಾವುಟಗಳನ್ನು ಹಿಡಿದು, ಮುಖ್ಯರಸ್ತೆಯಲ್ಲಿ ಸಂಚರಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ADVERTISEMENT

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕರು ಕೃಷಿಕೂಲಿ ಕಾರ್ಮಿಕರೇ ಆಗಿದ್ದಾರೆ.  ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಗೃಹಬಳಕೆಗಾಗಿ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿತ್ತು. ಆದರೆ, ಈಗ ಭಾಗ್ಯಜ್ಯೋತಿ, ಬೆಳಕು ಯೋಜನೆ ಫಲಾನುಭವಿಗಳಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ. ಕೃಷಿಕೂಲಿಕಾರ್ಮಿಕರು ಕಂಗಾಲಾಗಿದ್ದಾರೆ ಎಂದರು.

ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಸಿ. ಶ್ರೀನಿವಾಸ್ ಮಾತನಾಡಿ, ಕೃಷಿಕೂಲಿ ಕಾರ್ಮಿಕರಿಗೆ ಸಾವಿರಾರು ರೂಪಾಯಿ ಬಿಲ್‍ ಬಂದಿದೆ. ಗೃಹಬಳಕೆ ವಿದ್ಯುತ್ ಬಳಕೆಗೆ ಹೆಚ್ಚುವರಿ ಬಿಲ್‍ಗಳ ಲೋಪದ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ದೂರಿದರು.

ಸಂಘದ ತಾಲ್ಲೂಕು ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ ಮಾತನಾಡಿ, ರೈತರು ಕೊಳವೆಬಾವಿಗಳಿಗೆ ಸರ್ಕಾರವೇ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಆದರೆ ಇದೀಗ ಕೊಳವೆಬಾವಿ ವಿದ್ಯುತ್ ಸಂಪರ್ಕಕ್ಕೆ ₹5 ಲಕ್ಷ ವಿಧಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮಶೇಖರ್, ಸಹಾಯಕ ಎಂಜಿನಿಯರ್ ರಮೇಶ್, ಸುಕುಮಾರ್ ಆಗಮಿಸಿ, ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ಮೀಟರ್‍ ಲೋಪದೋಷಗಳನ್ನು ಸರಿಪಡಿಸಲಾಗುವುದು. ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ, ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ, ಹಗಲು ಹೊತ್ತಿನಲ್ಲಿ ನಿರಂತರವಾಗಿ 7 ಗಂಟೆ ವಿದ್ಯುತ್ ಸರಬರಾಜು ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕು ಎಂದು ತಿಳಿಸಿದರು. ನಂತರ ಪ್ರತಿಭಟನಕಾರರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಎಂ.ಎನ್.ರಘುರಾಮರೆಡ್ಡಿ, ಎಚ್.ಎ.ರಾಮಲಿಂಗಪ್ಪ, ಜಿ.ಕೃಷ್ಣಪ್ಪ, ವಾಲ್ಮೀಕಿ ಅಶ್ವಥ್ಥಪ್ಪ, ಚಿನ್ನಾಗಪ್ಪ, ನರಸಿಂಹರೆಡ್ಡಿ, ಪಿ.ಓಬಳರಾಜು, ಕೆ.ಮುನಿಯಪ್ಪ, ಜಿ.ಮುಸ್ತಾಫ, ಎ.ಸೋಮಶೇಖರ, ಅಬೂಬಕರ್, ಇಮ್ರಾನ್ ಖಾನ್, ರಾಮಾಂಜಿ, ಜಿ.ಸೋಮಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.