ADVERTISEMENT

ಬಾಗೇಪಲ್ಲಿ | ಬತ್ತಿದ ಅಂತರ್ಜಲ: ನೀರಿಗೆ ಹಾಹಾಕಾರ

ಪಿ.ಎಸ್.ರಾಜೇಶ್
Published 20 ಜುಲೈ 2025, 7:08 IST
Last Updated 20 ಜುಲೈ 2025, 7:08 IST
<div class="paragraphs"><p>ಬಾಗೇಪಲ್ಲಿ ತಾಲ್ಲೂಕಿನಲ್ಲಿ ರೆಡ್ಡಿಕೆರೆಯಲ್ಲಿ ಕಳೆ, ಮುಳ್ಳಿನ ಗಿಡಗಂಟಿಗಳು ಬೆಳೆದಿರುವುದು&nbsp;</p></div>

ಬಾಗೇಪಲ್ಲಿ ತಾಲ್ಲೂಕಿನಲ್ಲಿ ರೆಡ್ಡಿಕೆರೆಯಲ್ಲಿ ಕಳೆ, ಮುಳ್ಳಿನ ಗಿಡಗಂಟಿಗಳು ಬೆಳೆದಿರುವುದು 

   

ಬಾಗೇಪಲ್ಲಿ: ಯಾವುದೇ ನದಿ, ನಾಲೆ ಇಲ್ಲದ ಬಯಲುಸೀಮೆ ತಾಲ್ಲೂಕಿನಲ್ಲಿ ಕೆರೆಗಳೇ ಜಲಮೂಲಗಳಾಗಿವೆ. ಕೆರಗಳ ಅಭಿವೃದ್ಧಿ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಗಳನ್ನು ರೂಪಿಸಲು ಸರ್ಕಾರದ ಮತ್ತು ಜನಪ್ರತಿನಿಧಿಗಳು ಮುಂದಾಗದ ಕಾರಣ ತಾಲ್ಲೂಕಿನಲ್ಲಿ ಅಂತರ್ಜಲ ಮತ್ತಷ್ಟು ಕುಸಿತವಾಗಿದೆ. 

ಇದರಿಂದ ಕೃಷಿ, ಜನ ಮತ್ತು ಜಾನುವಾರುಗಳಿಗೆ ನೀರಿನ ಹಾಹಾಕಾರ ಎದುರಾಗಿದೆ. 

ADVERTISEMENT

ಪರಗೋಡು ಚಿತ್ರಾವತಿ, ಬಿಳ್ಳೂರಿನ ವಂಡಮಾನ್ ಬ್ಯಾರೇಜುಗಳಿವೆ. ಪಟ್ಟಣದ ಮೂಲಕ ಚಿತ್ರಾವತಿ ಬ್ಯಾರೇಜ್ ನೀರು ಆಂಧ್ರಪ್ರದೇಶದ ಬುಕ್ಕಪಟ್ಟಣಂ ಕೆರೆಗೆ ಹರಿಯುತ್ತದೆ. ಬಿಳ್ಳೂರಿನ ವಂಡಮಾನ್ ಬ್ಯಾರೇಜ್‌ನಿಂದ ಆಂಧ್ರಪ್ರದೇಶದ ಕಡೆಗೆ ಹರಿಯಲಿದೆ. ಈ ಎರಡು ಬ್ಯಾರೇಜುಗಳಿಂದ ನೀರು ಹರಿಯುವ ಇಕ್ಕೆಲಗಳಲ್ಲಿ ಸಣ್ಣ ಕಾಲುವೆಗಳು, ಚೆಕ್ ಡ್ಯಾಂಗಳು, ಡೈಕ್‌ಗಳನ್ನು ನಿರ್ಮಿಸಿದ್ದರೆ, ಸಾಕಷ್ಟು ನೀರನ್ನು ಸಂಗ್ರಹಿಸಬಹುದಿತ್ತು. ಆದರೆ, ಈ ಕೆಲಸ ಆಗಿಲ್ಲ. 

ಇದರಿಂದಾಗಿ ಕೆರೆ, ಕುಂಟೆ, ಕಾಲುವೆಗಳು, ಸಣ್ಣ ಕಾಲುವೆಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವೇ ಇಲ್ಲವಾಗಿದ್ದು, ಅಂತರ್ಜಲದ ಮಟ್ಟ ಕುಸಿತ ಕಂಡಿದೆ. 

ಮಳೆ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಗುವ ಜಡಿ ಮಳೆಯೇ ಕೆರೆ, ಕಾಲುವೆಗಳು, ರಾಜಕಾಲುವೆಗಳ ನೀರಿನ ಮೂಲವಾಗಿದೆ. ತಾಲ್ಲೂಕಿನಲ್ಲಿ 400ಕ್ಕೂ ಹೆಚ್ಚು ಕೆರೆಗಳಿವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 360 ಕೆರೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 31 ಕೆರೆಗಳ ಪೈಕಿ ಕಸಬಾ-9, ಪಾತಪಾಳ್ಯ-9, ಗೂಳೂರು 6 ಹಾಗೂ ಚೇಳೂರು 5 ಕೆರೆಗಳಿವೆ. ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಕಳೆ, ಮುಳ್ಳುಗಳ ಗಿಡಗಂಟಿಗಳು ಬೆಳೆದಿವೆ.

ತುಂಡು ಗುತ್ತಿಗೆ ಕಾಮಗಾರಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಆದರೆ, ಕೃಷಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಮಾತ್ರ ಅನುದಾನವೇ ಬಿಡುಗಡೆ ಮಾಡಲ್ಲ. ಇದರಿಂದ ಕೆರೆಗಳು ಈ ದುಃಸ್ಥಿತಿಗೆ ತಲುಪಿವೆ ಎನ್ನುತ್ತಾರೆ ಗ್ರಾಮಸ್ಥರು. 

ಒತ್ತುವರಿ ತೆರವಿಗೆ ಕ್ರಮ: ‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಕೆರೆಗಳನ್ನು ಹಂತ ಹಂತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮತ್ತಷ್ಟು ಅಭಿವೃದ್ಧಿ ಹಾಗೂ ಸೂಕ್ತ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಎಲ್ಲಾ ಕೆರೆಗಳಲ್ಲಿನ ಹೂಳು, ಕಳೆ, ಮುಳ್ಳಿನ ಗಿಡಗಳನ್ನು ತೆರವು ಮಾಡಲಾಗುವುದು. ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುನೀಲ್ ತಿಳಿಸಿದ್ದಾರೆ.

ಕ್ರಿಕೆಟ್ ವಾಲಿಬಾಲ್ ಮೈದಾನವಾದ ಕೆರೆಗಳು!

ಅಂತರ್ಜಲ ಮಟ್ಟ ಮತ್ತು ನೀರಿನ ಸಾಮರ್ಥ್ಯ ಹೆಚ್ಚಿಸಲು 360 ವರ್ಷ ಆಳ್ವಿಕೆ ಮಾಡಿದ ಪಾಳೆಗಾರರು ಗುಮ್ಮನಾಯಕನಪಾಳ್ಯ ತುಂಗೇಟಿದಿನ್ನೆ ಸೇರಿ ಅನೇಕ ಕೆರೆಗಳನ್ನು ನಿರ್ಮಿಸಿದ್ದರು. ಕೆರೆಗಳಿಂದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು.  ರಾಜಮಹಾರಾಜರು ಪೂರ್ವಿಕರು ನಿರ್ಮಿಸಿದ ಕೆರೆಗಳಲ್ಲಿ ಮಣ್ಣನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ. ಕೆರೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ. ಕೆರೆಯಲ್ಲಿ ನೀರು ಇಲ್ಲದೆ ಕುಡಿಯುವ ನೀರಿಗೆ ಕೃಷಿಗೆ ನೀರು ಸಿಗುತ್ತಿಲ್ಲ. ಕೆರೆ ಪಾತ್ರಗಳು ಇದೀಗ ಅಕ್ಷರಶಃ ಕ್ರಿಕೆಟ್ ವಾಲಿಬಾಲ್ ಆಟಗಳ ಮೈದಾನಗಳು ಆಗಿವೆ. ಕೆರೆಗಳ ಮಣ್ಣನ್ನು ಅಕ್ರಮವಾಗಿ ಸಾಗಿಸಿ ಇಟ್ಟಿಗೆ ಗೂಡುಗಳನ್ನು ನಿರ್ಮಿಸಲಾಗುತ್ತಿದೆ.  ಕೊರ್ಲಕುಂಟೆ ಕೆರೆ ಕಲುಷಿತ ತಾಣ ಆಗಿದೆ. ಕಳೆ ಮುಳ್ಳುಗಳು ಬೆಳೆದಿವೆ. ಕೆರೆ ಸುತ್ತಲಿನ ಪ್ರದೇಶವು ಒತ್ತುವರಿಯಾಗಿದೆ. ಪಟ್ಟಣದ ಹೊರವಲಯದ ರೆಡ್ಡಿಕೆರೆ ಬಾಲಾಜಿ ಬಾಜಿರಾಯನ ಕೆರೆಗಳು ಸೇರಿದಂತೆ ತಾಲ್ಲೂಕಿನ ಕೆರೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ. 

ಕೆರೆ ಕುಂಟೆಗಳಿಂದ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಕೆರೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ. ಅನೇಕ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಕೆರೆಗಳ ಒತ್ತುವರಿ ನಿಲ್ಲಬೇಕು.
ಶಿವಪ್ಪ, ರೈತ
ಕೆರೆಗಳ ಅಚ್ಚುಕಟ್ಟು ಪ್ರದೇಶ ಮತ್ತು ಕೆರೆ ಪಾತ್ರಗಳಲ್ಲಿ ಕಳೆ ಮತ್ತು ಮುಳ್ಳಿನ ಗಿಡ ತೆರವು ಮಾಡಬೇಕು. ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು. ಡೈಕ್‍ಗಳು ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು.
ಟಿ.ರಘುನಾಥರೆಡ್ಡಿ, ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.