ADVERTISEMENT

ಬಕ್ರೀದ್: ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 15:26 IST
Last Updated 7 ಜೂನ್ 2025, 15:26 IST
ಬಾಗೇಪಲ್ಲಿ ಪಟ್ಟಣದ ಹೊರವಲಯದ ಈದ್ಗಾ ಮೈದಾನದಲ್ಲಿ ಮೌಲಾನಾ ರಿಜ್ವಾನ್ ಅಹಮದ್ ಧರ್ಮ ಸಂದೇಶ ಸಾರಿದರು
ಬಾಗೇಪಲ್ಲಿ ಪಟ್ಟಣದ ಹೊರವಲಯದ ಈದ್ಗಾ ಮೈದಾನದಲ್ಲಿ ಮೌಲಾನಾ ರಿಜ್ವಾನ್ ಅಹಮದ್ ಧರ್ಮ ಸಂದೇಶ ಸಾರಿದರು   

ಬಾಗೇಪಲ್ಲಿ: ಬಕ್ರೀದ್ ಹಬ್ಬದ ಪ್ರಯುಕ್ತ ಶನಿವಾರ ಪಟ್ಟಣ ಸೇರಿದಂತೆ ತಾಲ್ಲೂಕಿನ ಹೊರವಲಯದ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಜಾಮೀಯಾ ಮಸೀದಿ ಸೇರಿದಂತೆ 16ಕ್ಕೂ ಹೆಚ್ಚಿನ ಮಸೀದಿಗಳಿಂದ ಮುಸ್ಲಿಮರು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಕೊಡಿಕೊಂಡ ರಸ್ತೆಯಲ್ಲಿ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಗ್ಗೆ 7.30ಕ್ಕೆ ಜಮಾಯಿಸಿದರು. ಕಿರಿಯರು, ಹಿರಿಯರು ಸರತಿಸಾಲಿನಲ್ಲಿ ನಿಂತು ಪ್ರಾರ್ಥನೆ ಮಾಡಿದರು. ಪಟ್ಟಣದ ಧರ್ಮಗುರು ಮೌಲಾನಾ ರಿಜ್ವಾನ್ ಅಹಮದ್‍ರವರು ಪ್ರಾರ್ಥನೆ ನೆರವೇರಿಸಿದರು.

ಮೌಲಾನಾ ರಿಜ್ವಾನ್ ಅಹಮದ್ ಸಂದೇಶ ನೀಡಿ, ಮುಸ್ಲಿಂ ಸಮುದಾಯದವರು ನಮಾಜು, ಹಜ್, ರೋಜಾ, ಜಕಾತ್, ಸಿತ್ರಾ ಈ ಪಂಚಸೂತ್ರಗಳನ್ನು ಮಾಡಬೇಕು. ಇದರಿಂದ ಅಲ್ಲಾಹುನಿಗೆ ಕೃಪೆ ಪಾತ್ರರಾಗಬಹುದು. ದೇಶದಲ್ಲಿ ಸರ್ವಧರ್ಮಿಯರು ಇದ್ದಾರೆ. ಅವರವರ ಧರ್ಮದ ಆಚಾರ ವಿಚಾರಗಳನ್ನು ಪಾಲನೆ ಮಾಡುತ್ತಾರೆ. ಆದರೆ ಎಲ್ಲಾ ದೇವರು ಶಾಂತಿ, ನೆಮ್ಮದಿಯ ವಾತಾವರಣದ ಬದುಕಿನಿಂದ ಇರಲು ಸಂದೇಶ ಸಾರಿದ್ದಾರೆ. ದೇಶ, ಧರ್ಮ, ಮಾನವ ಕುಲಕ್ಕೆ ತನ್ನ ಸರ್ವಸ್ವವೂ ತ್ಯಾಗ ಮಾಡುವುದು ಬಕ್ರೀದ್ ಹಬ್ಬದ ವಿಶೇಷ ಎಂದರು.

ADVERTISEMENT

ಹಬ್ಬದ ಪ್ರಯುಕ್ತ ಹೊಸ ತೊಡುಗೆ ಧರಿಸಿದ್ದರು. ಮಹಿಳೆಯರು, ಹೆಣ್ಣುಮಕ್ಕಳು ಕೈಗಳಿಗೆ ಮೆಹಂದಿ ಹಚ್ಚಿದ್ದರು. ಸಂಬಂಧಿಕರ, ನೆರೆಹೊರೆಯವರ ಮನೆಗಳಿಗೆ ಭೇಟಿ ಮಾಡಿದರು. ಮನೆಗಳಲ್ಲಿ ಹಬ್ಬದ ಊಟ, ಸಿಹಿ, ವಿಶೇಷ ಖಾದ್ಯ ತಯಾರಿಸಿದರು. ಕುರ್ಬಾನಿ ಮಾಡಿದ ಮಾಂಸವನ್ನು 3 ಭಾಗಗಳಾಗಿ ಮಾಡಿ, ತಮ್ಮ ಮನೆಗೆ, ಸಂಬಂಧಿಕರಿಗೆ, ಬಡಜನರಿಗೆ ಹಂಚಿದರು.

ಅಗಲಿದ ಹಿರಿಯರಿಗೆ ಪ್ರಾರ್ಥನೆ: ಪಟ್ಟಣದ ಹೊರವಲಯದ ಈದ್ಗಾ ಮೈದಾನದ ಪಕ್ಕದ ಹಾಗೂ ಗ್ರಾಮಗಳಲ್ಲಿನ ಸ್ಮಶಾನಗಳಿಗೆ ತಮ್ಮನ್ನು ಅಗಲಿದ ಕುಟುಂಬಸ್ಥರ ಸಮಾಧಿಗಳ ಸುತ್ತಲೂ ಬೆಳೆದ ಕಳೆ, ಮುಳ್ಳಿನ ಗಿಡಗಳನ್ನು ತೆರವು ಮಾಡಿ ಸ್ವಚ್ಛಗೊಳಿಸಿದರು. ಸಮಾಧಿಗಳಿಗೆ ಹೂವು ಇಟ್ಟು, ಸುಗಂಧದ್ರವ್ಯ ಹಾಕಿ, ದೀಪ ಬೆಳಗಿಸಿದರು. ಸಮಾಧಿಗಳ ಮುಂದೆ ಪ್ರಾರ್ಥನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.