ADVERTISEMENT

ಸೀತಾರಾಂ ಬೆಂಬಲಕ್ಕೆ ನಿಂತ ಬಲಿಜಿಗರು

ಜಿಲ್ಲೆಯ ಕಾಂಗ್ರೆಸ್‌ ಬಲಿಜ ಮುಖಂಡರು, ಶಾಸಕರಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:35 IST
Last Updated 5 ಜುಲೈ 2022, 4:35 IST
ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ನ ಬಲಿಜ ಸಮುದಾಯದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಈ ಸಂದರ್ಭದಲ್ಲಿ ಶಾಸಕ ಶಿವಶಂಕರರೆಡ್ಡಿ ಮಾತನಾಡಿದರು
ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ನ ಬಲಿಜ ಸಮುದಾಯದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಈ ಸಂದರ್ಭದಲ್ಲಿ ಶಾಸಕ ಶಿವಶಂಕರರೆಡ್ಡಿ ಮಾತನಾಡಿದರು   

ಚಿಕ್ಕಬಳ್ಳಾಪುರ: ಮುಖಂಡ ಎಂ.ಆರ್.ಸೀತಾರಾಂ ಅವರನ್ನು ಕಾಂಗ್ರೆಸ್‌ ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ನ ಬಲಿಜ ಸಮುದಾಯದ ಮುಖಂಡರುಧ್ವನಿ ಎತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕರಾದ ಶಿವಶಂಕರರೆಡ್ಡಿ, ಸುಬ್ಬಾರೆಡ್ಡಿ, ಮಾಜಿ ಶಾಸಕ ಸಂಪಂಗಿ ಮತ್ತಿತರರ ಜತೆ ಬಲಿಜ ಸಮುದಾಯದ ನಿಯೋಗ ಸೋಮವಾರ ವಿಧಾನಸಭೆ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಸಮುದಾಯದ ಪ್ರಬಲ ನಾಯಕರಾಗಿರುವ ಸೀತಾರಾಂ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು. ಅವರನ್ನು ಕರೆದು ಮಾತನಾಡಬೇಕು ಎಂದು ಈ ಇಬ್ಬರು ನಾಯಕರನ್ನುಕೋರಿದೆ.

ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ಹಾಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಬಲಿಜ ಸಮುದಾಯದ 250ಕ್ಕೂ ಹೆಚ್ಚು ಮುಖಂಡರು, ಕಾಂಗ್ರೆಸ್ ಪದಾಧಿಕಾರಿಗಳುಈ ನಿಯೋಗದಲ್ಲಿ ಇದ್ದರು.

ADVERTISEMENT

ಬೆಂಬಲಿಗರ ಜೊತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ, ‘ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಪಕ್ಷದಿಂದ ಬಲಿಜ ಸಮುದಾಯದ ಪ್ರತಿನಿಧಿಗಳಿಲ್ಲ. ಹೀಗಾಗಿ, ಸೀತಾರಾಮ್‌ ಅವರಿಗೆ ಪರಿಷತ್ ಸ್ಥಾನ ನೀಡುವಂತೆ ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದೆ. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ. 2018ರಲ್ಲಿ ವಿಧಾನಸಭಾ ಚುನಾವಣೆಗೆ ಮಲ್ಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದೆವು. ಕೊನೆಕ್ಷಣದಲ್ಲಿ ಅವರು ಒಲವು ತೋರಲಿಲ್ಲ’ ಎಂದರು.

‘ಈ ಹಿಂದೆ ಎರಡು ಬಾರಿ ಸೀತಾರಾಂ ಅವರನ್ನು ಕರೆದು ಮಾತನಾಡಿದ್ದೇನೆ. ಜೂ.24ರಂದು ಸಭೆ ನಡೆಸಬೇಡಿ ಎಂದು ಹೇಳಿದ್ದೆ. ಆದರೆ ಸಭೆಯ ದಿನಾಂಕ ಘೋಷಣೆ ಆಗಿದೆ ಎಂದಿದ್ದರು. ಪಕ್ಷ ಬಿಡುತ್ತೇನೆ ಎಂದು ಸೀತಾರಾಂ ಎಲ್ಲಿಯೂ ಹೇಳಿಲ್ಲ. ಈಗ ಮತ್ತೊಮ್ಮೆ ಅವರ ಜತೆ ಮಾತುಕತೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಮತ್ತು ಎಂ.ಆರ್.ಸೀತಾರಾಂ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಟಿಕೆಟ್ ನೀಡಲಾಗುವುದು. ಜು.9ರಂದು ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಆಗ ಸೀತಾರಾಂ ಅವರ ಜತೆ ಮಾತನಾಡುವೆ’ಎಂದು ಡಿ.ಕೆ.ಶಿವಕುಮಾರ್ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಲಿಜ ಸಮುದಾಯದ ಮತದಾರರು ಗಣನೀಯವಾಗಿ ಇದ್ದಾರೆ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರು ಎನಿಸಿದ್ದಾರೆ. ಗೌರಿಬಿದನೂರು ಮತ್ತು ಚಿಂತಾಮಣಿ ತಾಲ್ಲೂಕಿನಲ್ಲಿ ಸಮುದಾಯದವಿದೆ. ಎಂ.ಆರ್.ಸೀತಾರಾಂ ಅವರ ಕುಟುಂಬ ಜಿಲ್ಲೆಯಲ್ಲಿರುವ ಬಲಿಜ ಸಮುದಾಯದ ಮೇಲೆ ತನ್ನದೇ ಆದ ಪ್ರಭಾವ ಹೊಂದಿದೆ. ಸೀತಾರಾಂ ಕಾಂಗ್ರೆಸ್ ತೊರೆದರೆ ಆ ಪಕ್ಷಕ್ಕೆ ಜಿಲ್ಲೆಯಲ್ಲಿ ಹಿನ್ನಡೆ ಆಗುತ್ತದೆ ಎನ್ನುತ್ತಾರೆ ಕಾಂಗ್ರೆಸ್‌ನಲ್ಲಿರುವ ಬಲಿಜ ಸಮುದಾಯದನಾಯಕರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಗೌರಿಬಿದನೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇಣುಗೋಪಾಲ್, ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ದೀಪಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಮುಖಂಡ ರಾಜಶೇಖರ್, ನಾಯನಹಳ್ಳಿ ನಾರಾಯಣಸ್ವಾಮಿ, ಗ್ರಾ.ಪಂ ಸದಸ್ಯ ಶಂಕರ್ ನಿಯೋಗದಲ್ಲಿ ಇದ್ದರು.

ಎಂ.ಪಿ ಟಿಕೆಟ್: ದೊರೆಯದ ಭರವಸೆ: ಎಂ.ಆರ್.ಸೀತಾರಾಂ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆಯ ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಾಗಲೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ನಮ್ಮ ತಂದೆ ಆಸಕ್ತರಾಗಿದ್ದಾರೆ. ಟಿಕೆಟ್ ಭರವಸೆ ದೊರೆಯಬೇಕು ಎಂದಿದ್ದರು.

ಈ ವಿಚಾರವನ್ನು ಕಾಂಗ್ರೆಸ್ ನಿಯೋಗ ಡಿ.ಕೆ.ಶಿವಕುಮಾರ್ ಅವರ ಬಳಿಯೂ ಪ್ರಸ್ತಾಪಿಸಿದೆ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರಕ್ಕೆ ಹೈಕಮಾಂಡ್‌ನತ್ತ ಶಿವಕುಮಾರ್ ಕೈ ತೋರಿದ್ದಾರೆ ಎನ್ನಲಾಗುತ್ತಿದೆ.

‘2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಕಾಂಗ್ರೆಸ್ ನಾಯಕರು ಸೀತಾರಾಂ ಅವರಿಗೆ ಸೂಚಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಅವಕಾಶ ನಿರಾಕರಿಸಲಾಯಿತು. ಈ ವಿಚಾರವಾಗಿ ಇಂದಿಗೂ ಸೀತಾರಾಂ ಅವರಿಗೆ ಬೇಸರವಿದೆ.

ಚಿಕ್ಕಬಳ್ಳಾಪುರ ಟಿಕೆಟ್ ಭರವಸೆ: ‘ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಸೀತಾರಾಮ್‌ ಅವರಿಗೆ ಹೇಳಿದ್ದೇನೆ. ಮುಂದೆ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದೇನೆ. ಪುತ್ರ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದೇನೆ’ ಎಂದು ಬೆಂಬಲಿಗರಿಗೆ ಸಿದ್ದರಾಮಯ್ಯ ತಿಳಿಸಿದರು.

ಅವಕಾಶ ವಂಚಿತ ಸಮುದಾಯ: ಜಿಲ್ಲೆಯಲ್ಲಿ ಬಲಿಜ ಸಮುದಾಯ ಗಣನೀಯವಾಗಿ ಇದ್ದರೂ ರಾಜಕೀಯವಾಗಿ ಅವಕಾಶ ವಂಚಿತವಾಗಿದೆ. ನಿಗಮ ಮಂಡಳಿಗಳ ಸಣ್ಣ ಪುಟ್ಟ ಹುದ್ದೆಗಳಿಗೆ ಮಾತ್ರ ಸಮುದಾಯದ ರಾಜಕೀಯ ನಾಯಕರು ಸೀಮಿತವಾಗಿದ್ದಾರೆ.

ಸೀತಾರಾಂ ಅವರು ಜೂನ್‌ 24ರಂದು ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತಿಂಗಳಲ್ಲಿ ಮತ್ತೊಂದು ಸಭೆ ಕರೆದು ನಂತರ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದರು. ಈ ಬೆಳವಣಿಗೆಗಳು ಜಿಲ್ಲಾ ರಾಜಕಾರಣವನ್ನು ಕಾವೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.