ADVERTISEMENT

ಕಟ್ಟು ತೋಳ ಹಾವಿನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 9:55 IST
Last Updated 27 ಜುಲೈ 2019, 9:55 IST
ಕಟ್ಟು ತೋಳ ಹಾವು –ಚಿತ್ರ: ಡಿ.ಜಿ.ಮಲ್ಲಿಕಾರ್ಜುನ
ಕಟ್ಟು ತೋಳ ಹಾವು –ಚಿತ್ರ: ಡಿ.ಜಿ.ಮಲ್ಲಿಕಾರ್ಜುನ   

ಶಿಡ್ಲಘಟ್ಟ: ಅಪರೂಪದ ಕಟ್ಟು ತೋಳ ಹಾವು ತಾಲ್ಲೂಕಿನಲ್ಲಿ ಕಂಡುಬಂದಿದೆ. ತಾಲ್ಲೂಕಿನ ಕೊತ್ತನೂರಿನ ರಾಜು ಅವರ ಮನೆಯ ನೀರಿನ ಸಂಪಿನಲ್ಲಿ ಬಿದ್ದಿದ್ದ ಸಣ್ಣ ಗಾತ್ರದ ಹಾವನ್ನು ಕಂಡು ಮನೆಯವರು ಅದು ವಿಷಪೂರಿತ ಕಟ್ಲುಹಾವೆಂದು ಭಾವಿಸಿದ್ದರು. ಕೊತ್ತನೂರಿನ ಸ್ನೇಕ್ ನಾಗರಾಜ್ ಅದನ್ನು ರಕ್ಷಿಸಿ ಹೊರತೆಗೆದು ನಂತರ ಇದು ವಿಷರಹಿತ ಕಟ್ಟು ತೋಳ ಹಾವು ಎಂದು ತಿಳಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

‘ಈ ಹಾವುಗಳ ಬಣ್ಣ, ಬೆನ್ನಿನ ಮೇಲೆ ಬಿಳಿ ಅಡ್ಡಕಟ್ಟುಗಳಿರುವುದರಿಂದ ಹಾಗೂ ಬಾಯಿಯ ಮುಂಭಾಗದಲ್ಲಿ ಚೂಪಾದ ಉದ್ದನೆಯ ಹಲ್ಲುಗಳಿದ್ದು, ಅವು ‘ತೋಳ’ದ ಹಲ್ಲುಗಳನ್ನು ಹೋಲುವುದರಿಂದ ಇದನ್ನು ಕಟ್ಟು ತೋಳ ಹಾವು ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಬ್ಯಾಂಡೆಡ್ ವುಲ್ಫ್ ಸ್ನೇಕ್ ಎನ್ನುವ ಇದು ತೆಳುವಾದ ಶರೀರ ಹೊಂದಿದೆ. ಕುತ್ತಿಗೆಗಿಂತ ಅಗಲವಾದ ಮತ್ತು ಚಪ್ಪಟೆಯಾದ ತಲೆ ಹಾಗೂ ತುಸು ಹೊರಚಾಚಿದಂತಿರುವ ದುಂಡಗಿನ ಕಪ್ಪು ಕಣ್ಣುಗಳನ್ನು ಹೊಂದಿದೆ. ಇದರ ಶರೀರ ಬಣ್ಣವು ಕಪ್ಪು ನಸುಗಪ್ಪು ಬಣ್ಣದಿಂದ ಕೂಡಿದ್ದು, ಬೆನ್ನಿನ ಮೇಲೆ ತಲೆಯಿಂದ ಬಾಲದವರೆಗೆ ಸುಮಾರು 12– 20 ಬಿಳಿಯ ಅಡ್ಡ ಕಟ್ಟುಗಳಿರುತ್ತವೆ. ಶರೀರದ ತಳಭಾಗವು ಬಿಳುಪಾಗಿರುತ್ತದೆ.

ಮನೆಯ ಮಾಡು, ಬಾಗಿಲ ಸಂದಿನ ಬಿಲ ಅಥವಾ ಬಿರುಕು ಗೋಡೆಯ ಸಂದುಗಳಲ್ಲಿ ಸೇರಿಕೊಳ್ಳಬಲ್ಲ ಇವು ಒರಟಾದ ಗೋಡೆ ಮತ್ತು ಮರವನ್ನು ಸಹ ಹತ್ತಬಲ್ಲವು. ಹಲ್ಲಿ, ಓತಿಕ್ಯಾತ, ಕಪ್ಪೆಮರಿ, ಇಲಿ ಮರಿಗಳನ್ನು ತಿನ್ನುವ ಇವು ರಾತ್ರಿ ಸಂಚಾರಿಗಳು. ಈ ಹಾವುಗಳು ವಿಷಕಾರಿಯಾದ ಕಡಂಬಳ ಅಥವಾ ಕಟ್ಲಾವಿನಂತೆ ಕಾಣುವುದರಿಂದ ಜನರು ತಪ್ಪು ತಿಳಿದು ಕೊಲ್ಲುತ್ತಾರೆ. ನಮ್ಮ ತಾಲ್ಲೂಕಿನಲ್ಲಿ ಈ ಹಾವು ಅಪರೂಪವಾಗಿ ಕಾಣಸಿಗುತ್ತವೆ’ ಎಂದು ಸ್ನೇಕ್ ನಾಗರಾಜ್ ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.