ADVERTISEMENT

ಚಿಕ್ಕಬಳ್ಳಾಪುರ: ಮಿತ ಸಂತಾನ ಆದ್ಯತೆ ಆಗಲಿ: ಬಿ. ಫೌಜಿಯಾ ತರನ್ನುಮ್

ಕುಟುಂಬ ಯೋಜನೆ ವಿಧಾನಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:01 IST
Last Updated 13 ಜುಲೈ 2020, 14:01 IST
ಜನಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಲಾಯಿತು.
ಜನಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಲಾಯಿತು.   

ಚಿಕ್ಕಬಳ್ಳಾಪುರ: ‘ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿಯೊಬ್ಬರೂ ಮಿತ ಸಂತಾನಕ್ಕೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.

ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ಕುಟುಂಬ ಯೋಜನೆ ವಿಧಾನಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಜನಸಂಖ್ಯೆ ಹೆಚ್ಚಾದಂತೆ ಸೌಲಭ್ಯಗಳ ಕೊರತೆ ಸಹ ಅಧಿಕವಾಗಿ ದೇಶದ ಅರ್ಥಿಕ ವ್ಯವಸ್ಥೆ ಹಾಗೂ ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇಂದಿನ ಯುವ ಜನತೆ ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು’ ಎಂದರು.

ADVERTISEMENT

‘ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಸೂತ್ರಗಳಿವೆ ಅವುಗಳನ್ನು ಪಾಲಿಸಬೇಕು. 21 ವರ್ಷ ತುಂಬಿದ ಗಂಡು ಮತ್ತು 18 ವರ್ಷ ದಾಟಿದ ಹೆಣ್ಣು ಮಕ್ಕಳಿಗೆ ಮಾತ್ರ ಮದುವೆ ಮಾಡಬೇಕು. ವಿವಾಹದ ನಂತರ ಕನಿಷ್ಠ ಮೂರು ವರ್ಷಗಳವರೆಗೆ ಮೊದಲನೇ ಮಗುವನ್ನು ಹೊಂದಬಾರದು. ಮಗುವಿನಿಂದ ಮಗುವಿಗೆ ಕನಿಷ್ಠ ನಾಲ್ಕು ವರ್ಷಗಳ ಅಂತರವಿರುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಪ್ರಸ್ತುತ ವಿಶ್ವದ ಜನಸಂಖ್ಯೆ 750 ಕೋಟಿ ತಲುಪಿದೆ. ಆ ಪೈಕಿ ಭಾರತದ ಜನಸಂಖ್ಯೆ 135 ಕೋಟಿ ಇದೆ. ಈ ಜನಸಂಖ್ಯಾ ಸ್ಫೋಟ ಕಡಿಮೆ ಮಾಡುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಚರಿಸಲಾಗುತ್ತದೆ. ಆದರೆ ಜನರು ಸಂತಾನ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಜ್ಞಾನ, ಅನಕ್ಷರತೆ ಹಾಗೂ ಮೂಢನಂಬಿಕೆಗಳೇ ಇಂದಿನ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಜನಸಂಖ್ಯೆಯ ಹೆಚ್ಚಳದಿಂದ ದೇಶದ ಆಹಾರ ಭದ್ರತೆ ಹಾಗೂ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ. ನೈಸರ್ಗಿಕ ಸಂಪನ್ಮೂಲಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.