ADVERTISEMENT

ಐತಿಹಾಸಿಕ ಸಂಗತಿಗಳತ್ತ ಹೆಮ್ಮೆ ಇರಲಿ

ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ಅರೇನಹಳ್ಳಿ ಮನವಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 1:44 IST
Last Updated 21 ಜನವರಿ 2021, 1:44 IST
ನಂದಿಬೆಟ್ಟದ ನೆಹರುಭವನದ ಮುಂದೆ ಇತಿಹಾಸತಜ್ಞ ಧರ್ಮೇಂದ್ರಕುಮಾರ್ ಅರೇನಹಳ್ಳಿ ಅವರು ವಿಡಿಯೊ ಚಿತ್ರೀಕರಿಸಿದರು
ನಂದಿಬೆಟ್ಟದ ನೆಹರುಭವನದ ಮುಂದೆ ಇತಿಹಾಸತಜ್ಞ ಧರ್ಮೇಂದ್ರಕುಮಾರ್ ಅರೇನಹಳ್ಳಿ ಅವರು ವಿಡಿಯೊ ಚಿತ್ರೀಕರಿಸಿದರು   

ಶಿಡ್ಲಘಟ್ಟ: ‘ಪ್ರತಿ ಊರಿಗೊಂದು ಚರಿತ್ರೆಯಿದೆ. ಈ ಚರಿತ್ರೆಯನ್ನು ತಿಳಿದು, ಆ ಆಕರಗಳನ್ನು ಸಂರಕ್ಷಿಸಬೇಕು. ನಮ್ಮಲ್ಲಿರುವ ಅಪರೂಪದ ಐತಿಹಾಸಿಕ ಸಂಗತಿಗಳ ಬಗ್ಗೆ ಹೆಮ್ಮೆ ಇರಬೇಕು ಮತ್ತು ಅವನ್ನು ಸಂರಕ್ಷಿಸಬೇಕು’ ಎಂದು ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ಅರೇನಹಳ್ಳಿ ತಿಳಿಸಿದರು.

ಜಿಲ್ಲೆಯ ನಂದಿಬೆಟ್ಟದಲ್ಲಿನ ಐತಿಹಾಸಿಕ ತಾಣಗಳ ಬಗ್ಗೆ ಅವರು ಬುಧವಾರ ಪ್ರವಾಸಿಗರಿಗೆ ವಿವರಿಸಿದರು.

‘ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ನೆನಪನ್ನು ಮಾತ್ರ ಹೊತ್ತುಕೊಂಡು ಹೋಗಿ. ಇಲ್ಲಿ ಸ್ವಚ್ಛ ಪರಿಸರವಿರಲು ನೆರವಾಗಿ, ತ್ಯಾಜ್ಯ ಬಿಸಾಡಬೇಡಿ’ ಎಂದು ಮನವಿ ಮಾಡಿದರು.

ADVERTISEMENT

‘ನಂದಿಬೆಟ್ಟದ ಬ್ಯಾಂಬೂ ಹೌಸ್ ಬಳಿಯ ಸೋಫಿಯಾ ಗ್ಯಾರೆಟ್ ಸಮಾಧಿ, ಸ್ಯಾಂಕಿ ರೂಮ್ಸ್, ಯೋಗನಂದೀಶ್ವರ ದೇವಾಲಯದಲ್ಲಿರುವ ಸಂಸ್ಕೃತ ಶಾಸನ, ಕಬ್ಬನ್ ಹೌಸ್, ಓಕ್ ಲ್ಯಾಂಡ್ಸ್ ಹೌಸ್, ಕುಪ್ಪೇಜ್ ಗಾರ್ಡನ್, ಅಂಚೆಕಚೇರಿಯ ಠಸ್ಸೆ ಮುಂತಾದ ಹತ್ತು ಹಲವು ಸ್ಥಳಗಳು ಇತಿಹಾಸವನ್ನು ತಮ್ಮೊಡಲಿನಲ್ಲಿ ಇರಿಸಿಕೊಂಡಿವೆ. ವಿಹಾರದ ಜೊತೆಯಲ್ಲಿ ಇತಿಹಾಸವನ್ನೂ ಅರಿತಾಗ ಸ್ಥಳದ ಬಗ್ಗೆ ಗೌರವ ಇಮ್ಮಡಿಸುತ್ತದೆ’ ಎಂದರು.

‘ಇತಿಹಾಸದ ಕೊಂಡಿಗಳು ಒಂದಕ್ಕೊಂದು ಬೆಸೆದಿವೆ. ಮೈಸೂರು, ಬೆಂಗಳೂರು ಇತಿಹಾಸದಲ್ಲಿ ನಂದಿಬೆಟ್ಟವೂ ಪ್ರಮುಖ ಪಾತ್ರಧಾರಿ. 1986 ರಲ್ಲಿ ಸಾರ್ಕ್ ರಾಷ್ಟ್ರಗಳ ಪ್ರಮುಖರೆಲ್ಲರೂ ನಂದಿಬೆಟ್ಟಕ್ಕೆ ಬಂದು, ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದರು. ಅಂತಾರಾಷ್ಟ್ರೀಯ ಅತಿಥಿಗಳು ನಂದಿಬೆಟ್ಟಕ್ಕೆ ಆಗಮಿಸಿದ್ದು ಅದೇನೂ ಮೊದಲಲ್ಲ. 1961 ರಲ್ಲಿ ರಾಣಿ ಎಲಿಜಬೆತ್ ಇಲ್ಲಿಗೆ ಬಂದಿದ್ದರು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ನಂದಿದುರ್ಗದ ಕೋಟೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ದುರ್ಗಮವೆನ್ನುವಂತೆ ಮಾಡಿ
ದ್ದರು. 18 ಮತ್ತು 19 ನೇ ಶತಮಾನದಲ್ಲಿ ಯೂರೋಪಿಯನ್ ಸೈನಿಕ ದಳದ ಮೆಚ್ಚಿನ ತಂಗುದಾಣವಾಗಿತ್ತು. ರಾಜರು, ನಾಯಕರು ಮತ್ತು ಆಡಳಿತಾಧಿಕಾರಿಗಳಿಗೂ ಇದು ಬೇಸಿಗೆಯ ತಂಗುದಾಣವಾಗಿತ್ತು. ಮಹಾತ್ಮಾ ಗಾಂಧೀಜಿಯವರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲೆಂದು ಎರಡು ಬಾರಿ ನಂದಿಬೆಟ್ಟದಲ್ಲಿ ಬಂದು ಉಳಿದಿದ್ದರು’ ಎಂದು ಅವರು ವಿವರಿಸಿದರು.

ನಂದಿಬೆಟ್ಟದ ತೋಟಗಾರಿಕೆ ವಿಶೇಷ ಅಧಿಕಾರಿ ಗೋಪಾಲ್, ಶಿವಸ್ವರೂಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.