ADVERTISEMENT

ಸಿರಿಗೌರಿಗೆ ಬಾಗಿನ ಅರ್ಪಣೆ

ಚಿಂತಾಮಣಿ ತಾಲ್ಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ದೀಪಾವಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 4:57 IST
Last Updated 16 ನವೆಂಬರ್ 2020, 4:57 IST
ಚಿಂತಾಮಣಿಯ ನಾಗನಾಥೇಶ್ವರಸ್ವಾಮಿ ದೇವಾಲಯದಲ್ಲಿ ಕೇದಾರೇಶ್ವರ ಕಥೆ ಕೇಳುತ್ತಿರುವ ಮಹಿಳೆಯರು
ಚಿಂತಾಮಣಿಯ ನಾಗನಾಥೇಶ್ವರಸ್ವಾಮಿ ದೇವಾಲಯದಲ್ಲಿ ಕೇದಾರೇಶ್ವರ ಕಥೆ ಕೇಳುತ್ತಿರುವ ಮಹಿಳೆಯರು   

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಭಾನುವಾರ ಜನರು ದೀಪಾವಳಿ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.

ದೀಪಾವಳಿಯನ್ನು ನರಕ ಚತುರ್ದಶಿ, ದೀಪಾವಳಿ, ಬಲಿಪಾಡ್ಯಮಿ ಎಂದು ಮೂರು ದಿನ ಆಚರಿಸಿದರೂ ಬಹುತೇಕ ಸಮುದಾಯದವರು ಮಧ್ಯದ ಕೇದಾರೇಶ್ವರ ವ್ರತದ ದಿನವೇ ಹಬ್ಬ ಆಚರಿಸುವುದು ರೂಢಿಯಾಗಿದೆ. ದೀಪಗಳ ಹಬ್ಬ ದೀಪಾವಳಿಯಂದು ಮಹಿಳೆಯರು ಹಾಗೂ ಮಕ್ಕಳು ವಿಶೇಷವಾಗಿ ಸಂಭ್ರಮಿಸಿದರು.

ಮನೆ ಮನೆಯಲ್ಲೂ ಕಜ್ಜಾಯದ ಘಮಲು, ಪಟಾಕಿಯ ಕಮಟು ವಾಸನೆ ಸಾಮಾನ್ಯವಾಗಿತ್ತು. ಮಹಿಳೆಯರು ಬೆಳಗಿನಿಂದಲೇ ಮನೆಗಳ ಮುಂದೆ ಸಗಣಿಯಿಂದ ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕುವುದರೊಂದಿಗೆ ಹಬ್ಬಕ್ಕೆ ಮುನ್ನುಡಿ ಬರೆದರು. ಮನೆಗೆ ತಳಿರುತೋರಣ ಕಟ್ಟಿ ಶೃಂಗರಿಸಿದರು. ನಂತರ ಮಡಿಯಲ್ಲಿ, ಉಪವಾಸವಿದ್ದು ಕಜ್ಜಾಯಗಳನ್ನು ಮಾಡುವುದು, ಹೊಸ ಬಟ್ಟೆ ತೊಟ್ಟು ಮೊರದಲ್ಲಿ ಬಾಗಿನ ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದರು.

ADVERTISEMENT

ಮಧ್ಯಾಹ್ನ ಶುಚಿಭೂತರಾಗಿ ಕಜ್ಜಾಯ, ಬಟ್ಟಲಡಿಕೆ, ಎಲೆ-ಅಡಿಕೆ, ಅರಿಸಿನ ಕೊಂಬು, ಹೂ, ಹಣ್ಣು ಹಿಂದಿನ ವರ್ಷದ ಹಾಗೂ ಈ ವರ್ಷದ ಹೊಸ ನೋಮುದಾರಗಳನ್ನು ತೆಗೆದುಕೊಂಡು ದೇವಾಲಯಗಳಲ್ಲಿ, ಸಿರಿಗೌರಿ ಪ್ರತಿಷ್ಠಾಪಿಸಿದ್ದ ಮನೆಗಳಿಗೆ ತೆರಳಿ ಬಾಗಿನ ಅರ್ಪಿಸಿದರು. ಮೊರದಲ್ಲಿ ಬಾಗಿನ ತೆಗೆದುಕೊಂಡು ಹೋಗಿರುವ ಪದಾರ್ಥಗಳನ್ನು ತಟ್ಟೆ ಹಾಗೂ ಬಾಳೆ ಎಲೆಯಲ್ಲಿ ದೇವಿಯ ಮುಂದಿಟ್ಟು ಪೂಜೆ ಸಲ್ಲಿಸಿದರು.

ಪುರೋಹಿತರು ಕೇದಾರೇಶ್ವರ ಕಥೆಯನ್ನು ಹೇಳುತ್ತಾರೆ. ನಂತರ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮುಗಿಸಿಕೊಂಡು ಮನೆಗಳಿಗೆ ವಾಪಸ್ ತೆರಳುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ನಗರದ ನಾಗನಾಥೇಶ್ವರಸ್ವಾಮಿ ದೇವಾಲಯ, ನಾರಸಿಂಹಪೇಟೆಯ ಗಂಗಾಭವಾನಿ ದೇವಾಲಯ, ಕನಂಪಲ್ಲಿ ಆಂಜನೇಯಸ್ವಾಮಿ ದೇವಾಲಯ, ಆಜಾದ್ ಚೌಕದ ಹರಿಹರೇಶ್ವರಸ್ವಾಮಿ ದೇವಾಲಯಗಳಿಗೆ ಮಹಿಳೆಯರು ಹೆಚ್ಚಾಗಿ ಎಡತಾಕುತ್ತಿದ್ದರು.

ಪೂಜೆ ಸಮರ್ಪಣೆಯಾದ ಮೇಲೆ ಅವರವರ ಮನೆಗಳಲ್ಲಿ ನೋಮುದಾರಗಳನ್ನು ಕಟ್ಟಿಕೊಂಡು ಕಜ್ಜಾಯ, ಬಾಳೆಹಣ್ಣನ್ನು ಪ್ರಸಾದವಾಗಿ ಸ್ವೀಕರಿಸಿ ಊಟ ಮಾಡುತ್ತಾರೆ. ಸಂಜೆ ಮನೆಯ ಹೊಸ್ತಿಲಿಗೆ ಪೂಜೆ ಸಲ್ಲಿಸಿದರು. ರಾತ್ರಿ ಮನೆ ಮಂದಿಯೆಲ್ಲ ಸೇರಿಕೊಂಡು ಮನೆಯ ಬಾಗಿಲು, ಆವರಣದ ಸುತ್ತಲೂ ಹಣತೆಗಳನ್ನು ಹಚ್ಚಿದ್ದರು. ಕೊರೊನಾ ಹಿನ್ನೆಲೆಯಲ್ಲಿ ರಾತ್ರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.