
ಚಿಕ್ಕಬಳ್ಳಾಪುರ: ನಗರದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ನಡೆಯಿತು. ನಗರದ ಅಂಬೇಡ್ಕರ್ ಭವನದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡರು. ಕೋರೆಗಾಂವ್ ವಿಜಯಸ್ಥಂಭಕ್ಕೆ ಪುಷ್ಪಾರ್ಚನೆ ಮಾಡಿದರು. ಮಹರ್ ರೆಜಿಮೆಂಟಿನ ಯೋಧರ ಹೋರಾಟವನ್ನು ಸ್ಮರಿಸಲಾಯಿತು.
ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸು.ಧಾ.ವೆಂಕಟೇಶ್ ಮಾತನಾಡಿ, ‘ಕೋರೆಗಾಂವ್ ಘಟನೆಯು ಮಹರ್ ಸೈನಿಕರ ಹೋರಾಟವನ್ನು ಸ್ಮರಿಸುತ್ತದೆ. ಇತಿಹಾಸದಲ್ಲಿ ಹುದುಗಿದ್ದ ಮಹರ್ ಸೈನಿಕರ ಚರಿತ್ರೆಯನ್ನು ಅಂಬೇಡ್ಕರ್ ಅವರು ಅಧ್ಯಯನ ನಡೆಸಿ ಮುನ್ನಲೆಗೆ ತಂದರು’ ಎಂದು ಸ್ಮರಿಸಿದರು.
ಪೇಶ್ವೆ ಸೈನ್ಯದ ವಿರುದ್ಧ ದಲಿತ ಮಹರ್ ಸೈನಿಕರ ಗೆಲುವನ್ನು ಈ ವಿಜಯೋತ್ಸವವು ಸ್ಮರಿಸುತ್ತದೆ. ಈ ಹೋರಾಟವು ಇಂದಿಗೂ ದಲಿತ ಸಮುದಾಯಕ್ಕೆ ಮಾದರಿಯಾಗಿದೆ. ಆತ್ಮವಿಶ್ವಾಸವನ್ನು ತುಂಬಲಿದೆ ಎಂದು ಹೇಳಿದರು.
‘ದೇಶದಲ್ಲಿ ಕೆಲವರು ಜ.1ರಂದು ಹೊಸ ವರ್ಷವಾಗಿ ಸಂಭ್ರಮಿಸುವರು. ನಾವು ಪೇಶ್ವೆಗಳ ವಿರುದ್ಧ ಮಹರ್ ಸೈನಿಕರು ಹೋರಾಟ ನಡೆಸಿ ವಿಜಯ ಸಾಧಿಸಿದ ದಿನವಾಗಿ ಆಚರಿಸುತ್ತೇವೆ’ ಎಂದು ಹೇಳಿದರು.
ದಲಿತ ಸಮುದಾಯವನ್ನು ಅವಮಾನಿಸಿದ ಪೇಶ್ವೆಗಳ ವಿರುದ್ಧ ಆತ್ಮಗೌರವಕ್ಕಾಗಿ ಹೋರಾಡಿದ ದಿನವೇ ಕೋರೆಗಾಂವ್ ವಿಜಯೋತ್ಸವದ ದಿನವಾಗಿದೆ. ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಈ ವಿಚಾರವನ್ನು ಅಂಬೇಡ್ಕರ್ ಅವರು ಗುರುತಿಸಿದರು ಎಂದು ಹೇಳಿದರು.
ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ,‘ಭೀಮ ಕೋರೆಗಾಂವ್ ವಿಜಯೋತ್ಸವ ದೇಶದಾದ್ಯಂತ ನಡೆಯುತ್ತಿರುವ ಸ್ಮರಣೆ. 1818ರಲ್ಲಿ ದಲಿತ ಮಹರ್ ಸೈನಿಕರ ವಿಜಯವನ್ನು ಇದು ಸ್ಮರಿಸುತ್ತದೆ. ಸಂವಿಧಾನ ರಚನೆಯಾಗಿ ಇಷ್ಟು ವರ್ಷಗಳು ಸಂದರೂ ಜಾತಿಯ ತಾರತಮ್ಯಗಳು ನಮ್ಮಲ್ಲಿ ತೊಲಗಿಲ್ಲ. ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಲೇ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಮಾತನಾಡಿ, ‘ಅಂಬೇಡ್ಕರ್ ಅವರ ಸಮಾನತೆಯ ಆಶಯಗಳು ಇಂದಿಗೂ ಈಡೇರಿಲ್ಲ. ಜಾತಿಯ ತಾರತಮ್ಯಗಳು ನಮ್ಮ ಸಮಾಜವನ್ನು ಬಾಧಿಸುತ್ತಿವೆ. ಅಸಮಾನತೆ, ಅಸ್ಪೃಶ್ಯತೆ, ಕಂದಾಚಾರ ಸೇರಿದಂತೆ ಸಾಮಾಜಿಕ ಪಿಡುಗಳು ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಿವೆ’ ಎಂದು ಹೇಳಿದರು.
ಶ್ರೀನಿವಾಸಯ್ಯ, ಸುಲಿಕುಂಟೆ ವೆಂಕಟೇಶ್, ವೆಂಕಟರಾಮ್, ನಾಗರಾಜ್, ಮುನಿಕೃಷ್ಣ, ಕೃಷ್ಣಪ್ಪ, ನವಿಲುಗುರ್ಕಿ ಅಂಜಿ, ಶಂಕರ್, ನಂದೀಶ್, ವೆಂಕಟ್, ಗುಂಡಲಗುರ್ಕಿ ಅಂಜಿ, ಡೇವಿಡ್, ನರಸಿಂಹಪ್ಪ, ಶಿವರಂಜನಿ, ಶಿವು, ಆನಂದ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.