ADVERTISEMENT

Womens Day: ಧನಮಿಟ್ಟೇನಹಳ್ಳಿಗೆ ಬೆಳಕಾದ ಭೂಲಕ್ಷ್ಮಮ್ಮ

ಎಂ.ರಾಮಕೃಷ್ಣಪ್ಪ
Published 8 ಮಾರ್ಚ್ 2024, 6:44 IST
Last Updated 8 ಮಾರ್ಚ್ 2024, 6:44 IST
ಚಿಂತಾಮಣಿ ತಾಲ್ಲೂಕಿನ ಧನಮಿಟ್ಟೇನಹಳ್ಳಿಯ ಭೂಲಕ್ಷ್ಮಮ್ಮ
ಚಿಂತಾಮಣಿ ತಾಲ್ಲೂಕಿನ ಧನಮಿಟ್ಟೇನಹಳ್ಳಿಯ ಭೂಲಕ್ಷ್ಮಮ್ಮ   

ಹೆಸರು: ಭೂಲಕ್ಷ್ಮಮ್ಮ
ವೃತ್ತಿ: ಕೃಷಿ
ವಯಸ್ಸು: 46 ವರ್ಷ 
ಕ್ಷೇತ್ರ: ಮಹಿಳಾ ಸಬಲೀಕರಣ
ಗ್ರಾಮ: ಧನಮಿಟ್ಟೇನಹಳ್ಳಿ, ಚಿಂತಾಮಣಿ ತಾ.
ಜಿಲ್ಲೆ: ಚಿಕ್ಕಬಳ್ಳಾಪುರ

ತನ್ನಂತೆಯೇ ಇರುವ ಗುಡಿಸಲು ವಾಸಿಗಳನ್ನು ಮುಖ್ಯವಾಹಿನಿಗೆ ಬರಬೇಕು. ಕೂಲಿ ಕಾರ್ಮಿಕ ಮಹಿಳೆಯರು ಸ್ವಾಲಂಬಿ ಜೀವನ ನಡೆಸಬೇಕು ಎನ್ನುವ ಸದಾಶಯದಲ್ಲಿ ಚಿಂತಾಮಣಿ ತಾಲ್ಲೂಕಿನ ಧನಮಿಟ್ಟೇನಹಳ್ಳಿಗೆ ಭೂಲಕ್ಷ್ಮಮ್ಮ ಅವರು ಸ್ಥಾಪಿಸಿದ ‘ಬೆಳಕು ಸಂಘ’ ಇಂದು ಅಶಕ್ತ ಮಹಿಳೆಯರಿಗೆ ಶಕ್ತಿ ತುಂಬುತ್ತಿದೆ. ಕೃಷಿಕ ಮಹಿಳೆ ಭೂಲಕ್ಷ್ಮಮ್ಮ ಅವರ ಕಾರ್ಯಗಳು ಧನಮಿಟ್ಟೇನಹಳ್ಳಿಯ ಮಹಿಳೆಯರಿಗೆ ಬೆಳಕು ನೀಡಿದೆ.

ಹಳ್ಳಿಯ ಜನರು ನಗರದ ಮೀಟರ್ ಬಡ್ಡಿ, ಕಿರು ಸಾಲ ನೀಡುವ ಸಂಸ್ಥೆಗಳ ಬಡ್ಡಿ ದಂಧೆಗೆ ಬಲಿಯಾಗುತ್ತಿರುವುದನ್ನು ಕಂಡು, ತಾವೇ ಸ್ವತಃ ಒಂದು ಸಂಘ ಸ್ಥಾಪಿಸಿದರು. ಜನಪರ ಫೌಂಡೇಶನ್‌ ಬೆಂಬಲದೊಂದಿಗೆ ಈ ಸಂಘ ಸ್ಥಾಪನೆ ಆಯಿತು. ಜನರಿಗೆ ಸಾಲಸೌಲಭ್ಯ ಕಲ್ಪಿಸುವ ಜತೆಗೆ  ಸರ್ಕಾರಿ ಯೋಜನೆಗಳನ್ನು ತಲುಪಿ‌ಸುವುದು ಈ ಸಂಘದ ಮುಖ್ಯ ಗುರಿ. 

ADVERTISEMENT

ಭೂ ಲಕ್ಷ್ಮಮ್ಮ ತಮ್ಮ ಊರಿನಲ್ಲಿ ಹಳ್ಳಿ ಬೆಳಕು ಮಹಿಳಾ ಸಂಘ ಕಟ್ಟಿದರು. ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿದ್ದಾರೆ. ಬೆಂಗಳೂರಿಗೆ ವಲಸೆ ಹೋಗಿದ್ದ ಕುಟುಂಬವನ್ನು ವಾಪಸ್ ಕರೆಸಿ ಸಂಘದಿಂದ ಸಾಲ ನೀಡಿ, ಹೋಟೆಲ್‌ ಉದ್ಯಮ ಆರಂಭಿಸಲು ಸಹಕಾರ ನೀಡಿದ್ದಾರೆ. ತಮ್ಮೂರಿನ ಜನ ತಮ್ಮ ಊರಲ್ಲೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಶ್ರಮಿಸಿದ್ದಾರೆ. ಹೀಗೆ ಉದ್ಯೋಗ ಅರಸಿ ಊರು ಬಿಟ್ಟವರನ್ನು ಮತ್ತೆ ಹಳ್ಳಿಗೆ ಕರೆ ತಂದು ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಿದ್ದಾರೆ.

ಊರಿನ ಸಾಮೂಹಿಕ ಭೂಮಿ ಉಳಿಸಲು ಪಣತೊಟ್ಟು ಊರಿನ ಪಡಿಗಾನಕುಂಟೆಯ ಹೂಳೆತ್ತುವ ಕೆಲಸ, ಸೀಡ್ಸ್ ಸಂಸ್ಥೆ, ಐಐಟಿ ಸಹಕಾರ, ಗ್ರಾಮ ಪಂಚಾಯಿತಿ ಬೆಂಬಲದ ಮೂಲಕ ಊರಿನ ದೊಡ್ಡ ಕೆರೆ ಪುನಶ್ಚೇತನ ಮಾಡಿಸಿದ್ದಾರೆ.

ಕೆರೆಗೋಡು ಮಣ್ಣನ್ನು ರೈತರ ಜಮೀನುಗಳಿಗೆ ಹಾಕಿಸಿ ಸಾವಯವ ಕೃಷಿ ಕೈಗೊಳ್ಳುವಂತೆ ಮಾಡಿದ್ದಾರೆ. ಸುಮಾರು 40 ರೈತ ಮಹಿಳೆಯರು ಸುಸ್ಥಿರ ಸಾವಯವ ಕೃಷಿ ಕೈಗೊಳ್ಳಲು ಪ್ರೇರಣೆ ಆಗಿದ್ದಾರೆ. ಈ ಮೂಲಕ ಸಿರಿಧಾನ್ಯ ಕೃಷಿಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಇವರ ತಂಡ ಒಂದೂವರೆ ಟನ್‌ನಷ್ಟು ಸಿರಿಧಾನ್ಯ ಬೆಳೆದಿದೆ. ಬೆಳೆದ ಸಿರಿಧಾನ್ಯಗಳಿದ ಲಾಡು, ಚಕ್ಕುಲಿ, ಮಿಕ್ಸರ್ ಮುಂತಾದ ತಿನಿಸು ಹಾಗೂ ಸಾಂಬಾರು ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 

‘ಬೆಳಕು’ ಸಂಘದ ಜೊತೆಗೆ ಸಂಜೀವಿನಿ ಗ್ರಾಮ ಮಹಿಳಾ ಒಕ್ಕೂಟ ರಚಿಸಿದ್ದಾರೆ.  ಕೋನಪಲಿ ಗ್ರಾಮ ಪಂಚಾಯಿತಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ, ಜನಪರ ಫೌಂಡೇಶನ್ ಮಹಿಳಾ ಒಕ್ಕೂಟಕ್ಕೆ ಸಂಚಾಲಕಿ, ತಾಲ್ಲೂಕು ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಉಪಾಧ್ಯಕ್ಷೆ–ಹೀಗೆ ವಿವಿಧ ಹುದ್ದೆಗಳ ಮೂಲಕ ಸಾಮಾಜಿಕ ಚಟುವಟಿಕೆ, ಮಹಿಳಾ ಸಬಲೀಕರಣ, ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ನಾನು ಸಣ್ಣ ಹಳ್ಳಿಯಲ್ಲಿ ವಾಸವಿದ್ದೆ. ನನಗೆ ಸಂಘಟಿಸುವುದನ್ನು ಮತ್ತು ಕ್ರಿಯಾಶೀಲವಾಗಿ ಜನರೊಂದಿಗೆ ಕೆಲಸ ಮಾಡಲು ಜನಪರ ಫೌಂಡೇಶನ್‌ ಸಾಕಷ್ಟು ತರಬೇತಿ ನೀಡಿದೆ. ನಮ್ಮ ಗ್ರಾಮದ ಜನ ಅಭಿವೃದ್ಧಿಯಾಗಲು ಜನಪರ ಫೌಂಡೇಶನ್‌ ಮತ್ತು ಸಂಜೀವಿನಿ ನೆರವಾಗಿದೆ’  ಎನ್ನುತ್ತಾರೆ ಭೂಲಕ್ಷ್ಮಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.