ಶಿಡ್ಲಘಟ್ಟ: ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್ ಬಿ.ಎನ್. ಸ್ವಾಮಿ ಅಧ್ಯಕ್ಷತೆಯಲ್ಲಿ ಹಕ್ಕಿಜ್ವರ ಕುರಿತು ಪೂರ್ವಭಾವಿ ಸಭೆ ಆಯೋಜಿಸಲಾಯಿತು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ‘ಹಕ್ಕಿಜ್ವರ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕೋಳಿಮಾಂಸ ಹಾಗೂ ಮೊಟ್ಟೆ ಸೇವಿಸಲು ನಿರ್ಬಂಧ ಇಲ್ಲ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆ ಕೇಂದ್ರಗಳು, ಕೋಳಿಮಾಂಸ ಹಾಗೂ ಮೊಟ್ಟೆ ಅಂಗಡಿಗಳಿಗೆ ಹಕ್ಕಿಜ್ವರ ಕುರಿತು ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.
ಕೋಳಿಮಾಂಸ ಸೇವಿಸುವರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಬೇಕು. ಆಗ ವೈರಾಣು ನಾಶಗೊಳ್ಳುತ್ತದೆ. ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವಿಸಬೇಕು ಎಂದರು
ಹಕ್ಕಿಜ್ವರದ ಅರಿವಿಗೆ ನಿರ್ದೇಶನ: ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಳಿ ಸಾಕಣೆ ಕೇಂದ್ರಗಳ ಮಾಲೀಕರಿಗೆ ಕೋಳಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣ ಪಶುಪಾಲನಾ ಇಲಾಖೆಗೆ ತಿಳಿಸುವಂತೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿ ವಿಲೇವಾರಿ ಮಾಡಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆರೋಗ್ಯ ಇಲಾಖೆಯ ದೇವರಾಜ್, ಅಪೇಕ್ಷ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.