
ಶಿಡ್ಲಘಟ್ಟ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ನಡುವೆ ಅಭಿವೃದ್ಧಿ ವಿಚಾರವಾಗಿ ಪೈಪೋಟಿ ನಡೆಯಬೇಕೆ ವಿನಹ ಬೇರೆ ಬೇರೆ ವಿಚಾರಕ್ಕೆ ಪೈಪೋಟಿ ಇರಬಾರದು ಎಂದು ಶಾಸಕ ಬಿ.ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗುಟ್ಟದ ಮೇಲಿನ ಬ್ಯಾಟರಾಯ ದೇವಾಲಯ ಬಳಕೆಗೆಂದು ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿತ ಸದಸ್ಯರು ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿ ಮೋಟಾರು ಪಂಪ್ ಅಳವಡಿಸಿದ್ದು ಅದನ್ನು ದೇವಸ್ಥಾನ ಅಭಿವೃದ್ಧಿ ಸಮಿತಿಗೆ ಮಂಗಳವಾರ ಹಸ್ತಾಂತರಿಸಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರು, ಸಂಸದರ ನಡುವೆ ಜಾತಿ, ಪಕ್ಷ, ಭಾಷೆ ಇನ್ನಿತರೆ ವಿಷಯಗಳಿಗಾಗಿ ಪೈಪೋಟಿ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಮರೆತು ಪರಸ್ಪರ ನಿಂದನೆ, ಆರೋಪ ಪ್ರತ್ಯಾರೋಪ ಹೆಚ್ಚುತ್ತವೆಯೆ ಹೊರತು ನಮ್ಮ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ. ಜತೆಗೆ ಇದು ಜನರ ನಡುವೆಯೂ ಗುಂಪುಗಾರಿಕೆ, ವೈಷಮ್ಯ ಬೆಳೆಯಲು ಕಾರಣವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಈ ನಾಡಿನ ಮತದಾರರ ಮತದಿಂದ ಗೆದ್ದಿರುತ್ತೇವೆ. ನಾವು ಇತರೆ ಎಲ್ಲರಿಗೂ ಮಾದರಿಯಾಗಿ ಜಾತಿ ಮತ ಪಕ್ಷವನ್ನು ಮೀರಿ ಜನ ಸಾಮಾನ್ಯರ ಹಿತ ಕಾಯ್ದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ ಎಂದು ಆಶಿಸಿದರು.
ಬ್ಯಾಟರಾಯ ದೇವಾಲಯದಲ್ಲಿ ರಥೋತ್ಸವದ ವೇಳೆ ಇಲ್ಲಿನ ಕಲ್ಯಾಣಿಯಲ್ಲಿ ನೀರು ಇಲ್ಲದ ಕಾರಣ ತೆಪ್ಪೋತ್ಸವ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಜೆಡಿಎಸ್ ಸದಸ್ಯರೆಲ್ಲರೂ ಸೇರಿ ಸ್ವಂತ ಹಣದಿಂದ ಕೊಳವೆಬಾವಿ ಕೊರೆಸಿದ್ದು ನೀರು ಸಿಕ್ಕದೆ. ಈ ನೀರನ್ನು ಕಲ್ಯಾಣಿಗೆ ಹರಿಸುತ್ತಿದ್ದು ಈ ಬಾರಿ ತೆಪ್ಪೋತ್ಸವ ನಡೆಸಲು ಅನುಕೂಲ ಆಗಲಿದೆ ಎಂದರು.
ಬ್ಯಾಟರಾಯ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ ಮಾತನಾಡಿದರು. ಪಿಡಿಒ ಶೈಲಜ, ತಾದೂರು ರಘು, ಜಯಲಕ್ಷ್ಮಿ ಮುನಿರಾಜು, ಉಮಾರಾಮದಾಸ್, ಮುನಿರಾಜು, ನಾಗರಾಜ್, ನಾಗೇಶ್, ಎಂ.ಸಿ.ರಾಜಶೇಖರ್, ಆನಂದ್ ಕುಮಾರ್, ನವೀನ್ ಕುಮಾರ್, ಪಿಳ್ಳೇಗೌಡ, ಪ್ರಭಾಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.