ADVERTISEMENT

ಚಿಂತಾಮಣಿ: ರೇಷ್ಮೆ ಗೂಡಿಗೆ ಬಂಪರ್ ಬೆಲೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 5:11 IST
Last Updated 22 ಫೆಬ್ರುವರಿ 2026, 5:11 IST
ರೇಷ್ಮೆ ಗೂಡು
ರೇಷ್ಮೆ ಗೂಡು   

ಚಿಂತಾಮಣಿ: ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದೆ. ಚಳಿಗಾಲವಾಗಿದ್ದು ರೇಷ್ಮೆ ಹುಳು ಆಹಾರ ಹಿಪ್ಪುನೇರಳೆ ಸೊಪ್ಪು ಇಳುವರಿ ಕಡಿಮೆ ಆಗಿರುವುದು ಹಾಗೂ ಸುಣ್ಣಕಟ್ಟು ರೋಗ ಕಾಣಿಸಿಕೊಳ್ಳುವುದರಿಂದ ರೇಷ್ಮೆ ಗೂಡಿನ ಆವಕ ಕಡಿಮೆಯಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ತಾಲ್ಲೂಕಿನಲ್ಲಿ ಬಹುತೇಕ ರೈತರು ರೇಷ್ಮೆ ಮತ್ತು ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೇಷ್ಮೆ ಗೂಡಿನ ಬೆಲೆ ಕುಸಿತದಿಂತ ಸಂಕಷ್ಟಕ್ಕೆ ಈಡಾಗಿ ರೇಷ್ಮೆ ಕೃಷಿಯಿಂದಲೇ ಹಿಂದೆ ಸರಿಯುತ್ತಿದ್ದ ರೈತರ ಪಾಲಿಗೆ ಗೂಡಿನ ಬೆಲೆ ಏರಿಕೆಯಾಗುತ್ತಿರುವುದು ವರದಾನವಾಗಿದೆ. ಶನಿವಾರ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಕೆ.ಜಿಗೆ ₹752ಕ್ಕೆ ಮಾರಾಟವಾಗಿದೆ.

ಚಿಂತಾಮಣಿ ತಾಲ್ಲೂಕಿನಲ್ಲಿ 4,845 ಸಾವಿರ ರೇಷ್ಮೆ ಬೆಳೆಗಾರರಿದ್ದಾರೆ. 6,498 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ತೋಟವಿದೆ. ಬೆಳೆಗಾರರು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಸಾವಿರಾರು ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರೇಷ್ಮೆ ಕೃಷಿಯಿಂದ ಸುಧಾರಿತ ಜೀವನ ರೂಪಿಸಿಕೊಂಡಿದ್ದಾರೆ.

ADVERTISEMENT

ಚಿಂತಾಮಣಿಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ 15-20 ಲಾಟ್ ಗೂಡುಗಳು ಮಾತ್ರ ಆವಕವಾಗುತ್ತಿವೆ. ತಾಲ್ಲೂಕಿನ ನಾಗದೇನಹಳ್ಳಿ ರೈತ ಶಿವಾರೆಡ್ಡಿ ಅವರು ತಂದಿದ್ದ ರೇಷ್ಮೆ ಗೂಡು ಶನಿವಾರ ₹752ಕ್ಕೆ ಹರಾಜಾಗಿದೆ. ಕೆ.ಜಿಗೆ ಕನಿಷ್ಠ ₹600, ಗರಿಷ್ಠ ₹800, ಸರಾಸರಿ ₹700ಕ್ಕೆ ಮಾರಾಟವಾಗಿದೆ ಎಂದು ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರುಕಟ್ಟೆಗೆ ಗೂಡು ತರುವವರ ಸಂಖ್ಯೆ ಕಡಿಮೆಯಾಗಿದ್ದು ಮಾರುಕಟ್ಟೆಯ ಆದಾಯವೂ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರೇಷ್ಮೆ ಮಾರುಕಟ್ಟೆ ಮುಚ್ಚಬೇಕಾಗುತ್ತದೆ. ರೀಲರುಗಳು ಖಾಸಗಿಯಾಗಿ ಗೂಡನ್ನು ಖರೀದಿಸುತ್ತಿರುವ ಪರಿಣಾಮ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತಲೂ ಹೆಚ್ಚಿನ ದರ ನೀಡಿ ರೈತರಿಂದ ಗೂಡು ಖರೀದಿ ಮಾಡಲಾಗುತ್ತಿದೆ. ಈ ಕಾರಣದಿಂದಲೂ ಮಾರುಕಟ್ಟೆಗೆ ಗೂಡಿನ ಆವಕದ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ಶ್ರೀಮಂತ ರೀಲರುಗಳು ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿರುವ ರೈತರ ಬಳಿಗೆ ತೆರಳುತ್ತಾರೆ. 4ನೇ ಜ್ವರ ಚೆನ್ನಾಗಿ ಯಶಸ್ವಿಯಾಗಿದ್ದರೆ ಮುಂಗಡ ಹಣ ನೀಡಿ, ಗೂಡು ಬೆಳೆದ ನಂತರ ನಮಗೆ ಮಾರಾಟ ಮಾಡಬೇಕು ಎಂದು ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ. ರೈತರು ಚಂದ್ರಿಕೆಗಳಿಂದ ಗೂಡು ಬಿಡಿಸುತ್ತಿದ್ದಂತೆ ತಕ್ಕಡಿ ಸಮೇತವಾಗಿ ತೆರಳಿ ತೂಕ ಹಾಕಿಕೊಂಡು ಹಣ ನೀಡುತ್ತಿದ್ದಾರೆ. ಮನೆಯಲ್ಲೇ ಮಾರಾಟ ಮಾಡಿ ಹಣ ಪಡೆಯುವುದರಿಂದ ರೈತರಿಗೂ ಸಾಗಾಟದ ತೊಂದರೆ ಇಲ್ಲ ಎಂದು ಕೆಲ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.