ADVERTISEMENT

ಕೇಂದ್ರ ಭೂಸಾರಿಗೆ ಇಲಾಖೆ ಪ್ರಧಾನ ನಿರ್ದೇಶಕ ಬೈಪಾಸ್ ರಸ್ತೆ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:21 IST
Last Updated 12 ಜುಲೈ 2021, 4:21 IST
ಗೌರಿಬಿದನೂರು ನಗರ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯ ಕಾಮಗಾರಿ ಪರಿಶೀಲಿಸಿದ ಐ.ಕೆ. ಪಾಂಡೆ
ಗೌರಿಬಿದನೂರು ನಗರ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯ ಕಾಮಗಾರಿ ಪರಿಶೀಲಿಸಿದ ಐ.ಕೆ. ಪಾಂಡೆ   

ಗೌರಿಬಿದನೂರು: ನಗರ ಹೊರವಲಯದ ಗುಂಡಾಪುರ ಮಾರ್ಗವಾಗಿ ಹಿರೇಬಿದನೂರು ವರೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಮತ್ತು ಭೂ‌ಸಾರಿಗೆ ಸಚಿವಾಲಯದ ಪ್ರಧಾನ ನಿರ್ದೇಶಕ ಐ.ಕೆ. ಪಾಂಡೆ ಪರಿಶೀಲಿಸಿದರು.

ಇದೇ ವೇಳೆ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಬಹುದಿನಗಳ‌ ಕನಸಾಗಿದ್ದ ನಗರದ ವರ್ತುಲ ಬೈಪಾಸ್ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದ ಅಧಿಕಾರಿಗಳು ‌ಪರಿಶೀಲನೆ ನಡೆಸಿ ಅಭಿವೃದ್ಧಿಗೆ ಸಹಮತ ಸೂಚಿಸಿರುವುದು ಸಂತಸ ತಂದಿದೆ ಎಂದರು.

ಗೌರಿಬಿದನೂರು ಸಮೀಪ ಹಾದುಹೋಗುವ ಬೈಪಾಸ್ ರಸ್ತೆಯು ಎನ್.ಎಚ್. 7 ಮತ್ತು ಎನ್.ಎಚ್. 4 ಎರಡು ರಾಷ್ಟ್ರೀಯ ‌ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸಲಿದೆ. ಶಿರಾದಿಂದ ಮುಳಬಾಗಿಲುವರೆಗೆ ನಡೆಯುತ್ತಿರುವ ರಾಜ್ಯ ಹೆದ್ದಾರಿ 234 ಕಾಮಗಾರಿಯು ಜನರ ಸಂಪರ್ಕಕ್ಕೆ ಅತ್ಯಂತ ಹೆಚ್ಚು ಉಪಯುಕ್ತವಾಗಿದೆ. ಜತೆಗೆ ಚೆನ್ನೈ ಹಾಗೂ ಮುಂಬೈಗೆ ತೆರಳಲು ಹಾಗೂ ವಾಹನಗಳ ಸಾಗಾಟಕ್ಕೂ‌ ಅನುಕೂಲವಾಗಲಿದೆ. ಇದರ ಜತೆಗೆ ಈ ಭಾಗದಲ್ಲಿನ ರೈತರ ಭೂಮಿಗಳಿಗೆ ದುಪ್ಪಟ್ಟು ಬೆಲೆ ಬಂದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ರಸ್ತೆ ಕಾಮಗಾರಿಗೆ ಸೇರಿದ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಗುಂಡಾಪುರ, ಮಾದನಹಳ್ಳಿ, ಮೂರುಮನೆಹಳ್ಳಿ ಹಾಗೂ ಮಿಟ್ಟೇನಹಳ್ಳಿ ರೈತರ ಭೂಮಿಗೆ ಸಮಾನವಾದ ಪರಿಹಾರ ಸಿಗದಿರುವ ಬಗ್ಗೆ ಅಸಮಾಧಾನವಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ನ್ಯಾಯ ಒದಗಿಸಿಕೊಡಲಾಗುವುದು. ಇದಕ್ಕಾಗಿ ರೈತರು ಒಮ್ಮತದಿಂದ ಸಹಕಾರ ನೀಡಬೇಕಾಗಿದೆ. ತಾಲ್ಲೂಕಿನ ‌ಅಭಿವೃದ್ಧಿಗಾಗಿ ಎಲ್ಲರ ‌ಸಹಕಾರ‌ ಅಗತ್ಯ ಎಂದು ಹೇಳಿದರು.

ಮುಖಂಡರಾದ ‌ಎಚ್.ಎನ್. ಪ್ರಕಾಶರೆಡ್ಡಿ, ಗುಂಡಾಪುರ ಲೋಕೇಶ್ ಗೌಡ, ಪ್ರಕಾಶ್, ಶ್ರೀನಿವಾಸ್, ಕೃ಼ಷ್ಣಾರೆಡ್ಡಿ, ಸಹಾಯಕ‌ ಕಾರ್ಯಪಾಲಕ ಎಂಜಿನಿಯರ್‌ಗಳಾದ ಕುಮಾರಸ್ವಾಮಿ, ಹೇಮಲತಾ, ಎಇಇ ರವಿಕುಮಾರ್, ಮಲ್ಲಿಕಾರ್ಜುನ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.