ADVERTISEMENT

ರಾಜಕೀಯ ಲಾಭಕ್ಕಾಗಿ ಸಿಎಎ ವಿರೋಧಿಸಲಾಗುತ್ತಿದೆ: ಡಿ.ಎಸ್.ವೀರಯ್ಯ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 12:12 IST
Last Updated 14 ಜನವರಿ 2020, 12:12 IST
ಡಿ.ಎಸ್.ವೀರಯ್ಯ
ಡಿ.ಎಸ್.ವೀರಯ್ಯ   

ಚಿಕ್ಕಬಳ್ಳಾಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತ, ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ಸಿಎಎದಿಂದ ದೇಶದಲ್ಲಿ ಒಬ್ಬೇ ಒಬ್ಬರಿಗೂ ತೊಂದರೆಯಾಗುವುದಿಲ್ಲ. ಯಾರು ಕೂಡ ವಿರೋಧ ಪಕ್ಷಗಳ ರಾಜಕೀಯ ದುರುದ್ದೇಶಕ್ಕೆ ಬಲಿಯಾಗಬಾರದು’ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಿ.ಎಸ್.ವೀರಯ್ಯ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಎಎ ಬಿಜೆಪಿ ಹೊಸದಾಗಿ ತಂದ ಕಾಯ್ದೆಯಲ್ಲ. ಹಿಂದೆ ಈ ಕಾಯ್ದೆಯನ್ನು ಕಾಂಗ್ರೆಸ್‌ ತಂದಿತ್ತು. ಅದನ್ನು ಈಗ ಬಿಜೆಪಿ ತಿದ್ದುಪಡಿ ಮಾಡಿದೆ. ಆದರೆ ಇವತ್ತು ಕಾಂಗ್ರೆಸ್‌ ಸಿಎಎ ಕುರಿತಂತೆ ಸುಳ್ಳು ಹೇಳುತ್ತ, ಜನ ಸಂಘರ್ಷ ಉಂಟು ಮಾಡುತ್ತಿದೆ. ಅಲ್ಪಸಂಖ್ಯಾತ ಮುಖಂಡರು, ವಿದ್ಯಾರ್ಥಿಗಳು ಹಾಗೂ ಯುವ ಜನರನ್ನು ಧರ್ಮ ಮತ್ತು ಕೋಮು ಆಧಾರದಲ್ಲಿ ಪ್ರಚೋದಿಸಿ, ಉಗ್ರಗಾಮಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ’ ಎಂದು ತಿಳಿಸಿದರು.

‘ಭಾರತದಲ್ಲಿ ಹುಟ್ಟಿದವರು ಸಹಜವಾಗಿ ಇಲ್ಲಿನ ಪೌರತ್ವ ಪಡೆಯುತ್ತಾರೆ. ಹೀಗಾಗಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಬೌದ್ಧ, ಸಿಖ್ಖರು, ಪಾರ್ಸಿ, ಜೈನರು ದೌರ್ಜನ್ಯ, ಅತ್ಯಾಚಾರಕ್ಕೆ ತುತ್ತಾಗಿ ಮನೆ, ಕುಟುಂಬ ಕಳೆದುಕೊಂಡು ಶರಣಾಗತಿಯ ಮೂಲಕ ಭಾರತಕ್ಕೆ ಬಂದವರಿಗೆ ಸಿಎಎ ಅನ್ವಯವಾಗುತ್ತದೆ. ಆದರೂ ಕಾಂಗ್ರೆಸ್ ಕುಮ್ಮಕ್ಕಿನಿಂದ ಪಿಎಫ್ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಯಾವ ಸಮುದಾಯದ ವಿರುದ್ಧವೂ ಅಲ್ಲ, ಅಂಬೇಡ್ಕರ್ ವಿರೋಧಿಯೂ ಅಲ್ಲ. ಸಂವಿಧಾನ ಅಥವಾ ದಲಿತ ವಿರೋಧಿಯೂ ಅಲ್ಲ, ಈ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೂ ಅನ್ಯಾಯವಾಗುವುದಿಲ್ಲ. ಆದರೆ, ಕಾಂಗ್ರೆಸ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ. ಈ ವಿಚಾರದಲ್ಲಿ ಯಾರೂ ಭಯಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಇದೇ 11 ರಿಂದ 17ರ ವರೆಗೆ ರಾಜದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಸಿಎಎ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿ, ಸಂವಾದ, ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚುವ ಕಾರ್ಯಕ್ರಮವೂ ಸೇರಿದಂತೆ ಹೋಬಳಿ ಹಾಗೂ ಬೂತ್ ಮಟ್ಟದಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ರಾಜ್ಯ ಘಟಕದ ಕಾರ್ಯದರ್ಶಿ ವಿಜಯಕುಮಾರ್, ಪದಾಧಿಕಾರಿಗಳಾದ ಕಳವಾರ ಶ್ರೀಧರ್, ವಂದೇ ಮಾತರಂ ಮುನಿರಾಜು, ಗಂಗಾಧರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.