ADVERTISEMENT

ಶಿಡ್ಲಘಟ್ಟ: ಲಾಕ್‌ಡೌನ್‌ ಪರಿಣಾಮ ಗಿಡದಲ್ಲೇ ಹಣ್ಣಾಗುತ್ತಿವೆ ಕ್ಯಾಪ್ಸಿಕಮ್

ಸಾಗಾಣಿಕೆಗೆ ವಾಹನಗಳಿಲ್ಲದೆ, ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಂಗಾಲಾದ ರೈತರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:59 IST
Last Updated 8 ಏಪ್ರಿಲ್ 2020, 16:59 IST
ಕ್ಯಾಪ್ಸಿಕಮ್ ಬೆಳೆದ ರೈತ ಜಯರಾಮ್
ಕ್ಯಾಪ್ಸಿಕಮ್ ಬೆಳೆದ ರೈತ ಜಯರಾಮ್   

ಶಿಡ್ಲಘಟ್ಟ: ಲಾಕ್ ಡೌನ್‌ನಿಂದಾಗಿ ತಾಲ್ಲೂಕಿನಲ್ಲಿ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಪ್ಸಿಕಮ್ ಸಾಗಾಣಿಕೆಗೆ ವಾಹನಗಳಿಲ್ಲದೆ, ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ.

ಕೊರೊನಾ ಮಹಾಮಾರಿ ರೈತನನ್ನು ಬದುಕಿರುವಂತೆಯೇ ಕೊಂದುಹಾಕುತ್ತಿದೆ. ಅತ್ಯುತ್ತಮವಾಗಿ ಬೆಳೆ ಬೆಳೆದಿದ್ದರೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗದೇ, ಮಾರಲಾಗದೇ ಕಂಗಾಲಾಗಿದ್ದೇವೆ. ತನ್ನ ಶ್ರಮದ ಕೂಲಿ ಸಹ ರೈತನಿಗೆ ಈಗ ಸಿಗದಾಗಿದೆ. ನಮಗೆ ಪರಿಹಾರವಾಗಲೀ ಸಹಾಯಧನವಾಗಲೀ ಬೇಕಾಗಿಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟರೆ ಸಾಕು. ನಾವು ಹಾಕಿರುವ ಬಂಡವಾಳದ ಸ್ವಲ್ಪ ಭಾಗವನ್ನಾದರೂ ಹಿಂದಕ್ಕೆ ಪಡೆಯಬಹುದು ಎಂದು ರೈತರು ತಮ್ಮ ಅಳಲು ವ್ಯಕ್ತಪಡಿಸುತ್ತಿದ್ದಾರೆ.

ಕ್ಯಾಪ್ಸಿಕಮ್‌ ಬೆಳೆಯಲು ಹನಿ ನೀರಾವರಿ, ಕೂಲಿ, ರಸಗೊಬ್ಬರ, ಔಷಧಿ ಎಲ್ಲ ಸೇರಿ ಸುಮಾರು ₹15 ಲಕ್ಷ ಖರ್ಚಾಗಿದೆ. ಮೊದಲ ಬಾರಿ ಫಸಲನ್ನು ಕಿತ್ತು ಚೆನ್ನೈಗೆ ಕಳುಹಿಸಿದಾಗ ಕೆ.ಜಿ. ಗೆ ₹15 ರಿಂದ ₹20 ಬೆಲೆ ಇತ್ತು. ಈಗ ಕೇಳುವವರೇ ಇಲ್ಲವಾಗಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ತೋಟಕ್ಕೆ ಔಷಧಿ, ಗೊಬ್ಬರ ತರುವುದು ಕೂಡ ಕಷ್ಟವಾಗುತ್ತಿದೆ ಎಂದು ರೈತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ರೈತರ ಕಷ್ಟಕ್ಕೆ ನೆರವಾಗಿ: ಲಾಕ್ ಡೌನ್‌ನಿಂದ ತೊಂದರೆಗೊಳಗಾದ ಬಡ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅನೇಕ ದಾನಿಗಳು ನೆರವಾಗುತ್ತಿದ್ದಾರೆ. ಆ ದಾನಿಗಳು ನಮ್ಮಂತಹ ರೈತರ ಬೆಳೆಗಳನ್ನು ಕನಿಷ್ಠ ಬೆಲೆಯಾದರೂ ಕೊಟ್ಟು ಖರೀದಿಸಿದರೆ ರೈತರಿಗೂ ಅನುಕೂಲವಾಗುತ್ತದೆ ಎಂಬುದು ರೈತರ ಒತ್ತಾಯ.

ಹಣ್ಣಾಗಿ ಉದುರುತ್ತಿವೆ
‘ಮೂರು ಎಕರೆಯಲ್ಲಿ ಕ್ಯಾಪ್ಸಿಕಮ್ ಬೆಳೆದಿದ್ದು, ಒಂದು ವಾರಕ್ಕೆ ಹತ್ತು ಟನ್‌ನಷ್ಟು ಕ್ಯಾಪ್ಸಿಕಮ್ ಬೆಳೆ ಬರುತ್ತಿದೆ. ಎರಡು ಬಾರಿ ಕಿತ್ತು ಚೆನ್ನೈಗೆ ಕಳುಹಿಸಿದ್ದೇನೆ. ಮೂರನೇ ವಾರದ ಫಸಲು ಕಿತ್ತರೆ ಕೂಲಿ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಾಯಿಗಳನ್ನು ಕೊಯ್ಯದೆ ಗಿಡದಲ್ಲಿಯೇ ಬಿಟ್ಟಿದ್ದು, ಹಣ್ಣಾಗಿ ಉದುರುತ್ತಿವೆ’ ಎಂದು ಹಂಡಿಗನಾಳದ ರೈತ ಜಯರಾಮ್ ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.