ADVERTISEMENT

ಚಿಕ್ಕಬಳ್ಳಾಪುರ | ದಿಕ್ಕುತಪ್ಪಿದ ಮತದಾರ: ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:00 IST
Last Updated 16 ಸೆಪ್ಟೆಂಬರ್ 2025, 5:00 IST
ಚಿಕ್ಕಬಳ್ಳಾಪುರದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ರ‍್ಯಾಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು
ಚಿಕ್ಕಬಳ್ಳಾಪುರದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ರ‍್ಯಾಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು   

ಚಿಕ್ಕಬಳ್ಳಾಪುರ: ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ‘ಅಂತರರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ’ ಅಂಗವಾಗಿ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ‘ನನ್ನ ಮತ ನನ್ನ ಹಕ್ಕು’ ಶೀರ್ಷಿಕೆಯೊಂದಿಗೆ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸೈಕಲ್ ರ‍್ಯಾಲಿ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ದೇಶದ ಎಲ್ಲ ನಾಗರಿಕರಿಗೂ ಸಮಾನ ಅವಕಾಶ, ಹಕ್ಕುಗಳು, ನ್ಯಾಯ, ಸಮಾನತೆ ದೊರೆಯಬೇಕು ಎಂದು ಸಂವಿಧಾನ ರಚಿಸಿದರು. ಇಲ್ಲವಾದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ತಾರತಮ್ಯ, ಮೇಲು ಕೀಳುಗಳು ಹೆಚ್ಚಾಗಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಸರಿಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು 18 ವರ್ಷ ಮೇಲ್ಪಟ್ಟ ಎಲ್ಲರ ಹಕ್ಕು. ದೇಶದ ಅಭಿವೃದ್ಧಿಗೆ ನಮ್ಮ ಮತ ನಮ್ಮ ಹಕ್ಕು ನಮ್ಮ ಸಾಂವಿಧಾನಿಕ ಕರ್ತವ್ಯ ಕೂಡ ಎಂದರು.

ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ ಪಾರದರ್ಶಕವಾಗಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ದೇಶವನ್ನು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಉತ್ತಮ ಜನಪ್ರತಿನಿಧಿಗಳನ್ನು ಚುನಾಯಿಸುವ ನಿಟ್ಟಿನಲ್ಲಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಬಿ.ಆರ್.ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಯ ಮಹತ್ವದ ಆಶಯಗಳೊಂದಿಗೆ ನೀಡಿದ್ದ ‘ನನ್ನ ಮತ ನನ್ನ ಹಕ್ಕು’ ಎಂಬ ಘೋಷ ವಾಕ್ಯ ಭಾರತದ ಪ್ರಜಾಪ್ರಭುತ್ವದಲ್ಲಿ ಮತದಾರರ ಹಲವು ಆಸೆ ಆಮಿಷಗಳಿಗೆ ಒಳಗಾಗಿ ಅರ್ಥ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮತದಾನದ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಜವಾಬ್ದಾರಿಯನ್ನು ಮತದಾರರಿಗೆ ಸಂವಿಧಾನಕರ್ತರು ನೀಡಿದ್ದರೂ ಈ ಬಗ್ಗೆ ಮತದಾರರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮತದಾನದ ಮಹತ್ವ ಅರಿಯದೆ ದಿಕ್ಕುತಪ್ಪುತ್ತಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳಿಗೆ ತಕ್ಕಪಾಠವನ್ನು ಮತದಾರರೇ ಕಲಿಸಲು ಮುಂದಾಗಬೇಕು ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಲಾ 10 ಮಂದಿ ಬೈಕ್‌ ಸವಾರರು ಬೈಕ್‌ ಜಾಥಾದಲ್ಲಿ ಭಾಗವಹಿಸಿ ಬೆಂಗಳೂರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು. 

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದರೆಡ್ಡಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. 

‘ಈಡೇರದ ಜನತಂತ್ರದ ಆಶಯ’

ರಾಜಕೀಯ ವ್ಯವಸ್ಥೆಯಲ್ಲಿ ಮತದಾರರು ಹಲವು ಆಸೆ ಆಮಿಷಗಳಿಗೆ ಒಳಗಾಗುತ್ತಿರುವ ಕಾರಣ ಜನತಂತ್ರದ ಆಶಯ ಈಡೇರುತ್ತಿಲ್ಲ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಬೇಸರ ವ್ಯಕ್ತಪಡಿಸಿದರು. ಮತದಾರರು ದೇಶಕ್ಕೆ ಏನು ಬೇಕೆಂಬುದನ್ನು ಗ್ರಹಿಸಲು ವಿಫಲರಾಗುತ್ತಿದ್ದಾರೆ. ಸುಳ್ಳು ಭರವಸೆ ಅಪಪ್ರಚಾರಗಳಿಗೆ ಒಳಗಾಗಿ ಅವುಗಳಿಗೇ ಹೆಚ್ಚಿನ ಮಹತ್ವ ನೀಡಿ ಪ್ರಜಾಪ್ರಭುತ್ವದ ಅರ್ಥ ದಕ್ಕೆ ತರುತ್ತಿದ್ದಾರೆ ಎಂದರು. 

ಸೈಕಲ್ ರ‍್ಯಾಲಿ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಸೈಕಲ್ ರ‍್ಯಾಲಿ  ನಗರದ ಜಿಲ್ಲಾಡಳಿತ ಭವನದಿಂದ ಬೆಳಿಗ್ಗೆ 9ಕ್ಕೆ ಪ್ರಾರಂಭಗೊಂಡಿತು. ಶಿಡ್ಲಘಟ್ಟ ವೃತ್ತದಿಂದ ಕನ್ನಡ ಭವನವರೆಗೆ ಸಾಗಿ ಅಲ್ಲಿ ತಿರುವು ಪಡೆದು ಬಿಬಿ ರಸ್ತೆ ಮೂಲಕ ಮತ್ತೆ ಜಿಲ್ಲಾಡಳಿತ ಭವನ ತಲುಪಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.