ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಸಮೀಕ್ಷಾ ಕಾರ್ಯ ಚುರುಕುಗೊಳಿಸಬೇಕು. ನಿತ್ಯದ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದರು.
ಸಮೀಕ್ಷಾ ಕಾರ್ಯಕ್ಕೆ ನಿಯೋಜನೆ ಆಗಿರುವ ಗಣತಿದಾರರು ಇಲ್ಲಿಯವರೆಗೆ ಸಮೀಕ್ಷಾ ಕಾರ್ಯವನ್ನು ಮಾಡದೆ ಇದ್ದರೆ ಅಂತಹವರ ಮಾಹಿತಿಯನ್ನು ಆನ್‌ಲೈನ್ ಮೂಲಕವೇ ಪಡೆದು ನೋಟಿಸ್ ಜಾರಿಮಾಡಬೇಕು. ಶಿಸ್ತುಕ್ರಮಕ್ಕೆ ಒಳಪಡಿಸಬೇಕು ಎಂದು ಸೂಚಿಸಿದರು.
ಸಮೀಕ್ಷಾ ಕಾರ್ಯಕ್ಕೆ ನಿಯೋಜನೆ ಆಗಿರುವ ಯಾವುದೇ ಅಧಿಕಾರಿಗಳು, ಸಮೀಕ್ಷಕರು ಅಥವಾ ಸಿಬ್ಬಂದಿ ಅಸಹಕಾರ ತೋರಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮಕ್ಕೆ ಒಳಪಡಿಸಬೇಕು. ಸಮೀಕ್ಷಾ ಕಾರ್ಯಕ್ಕೆ ಈವರೆಗೆ ಇದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಮುಂದೆ ಎದುರಾಗುವ ತಾಂತ್ರಿಕ ಅಡಚಣೆಗಳನ್ನು ಕಾಲೋಚಿತವಾಗಿ ಬಗೆಹರಿಸಲು ತಾಂತ್ರಿಕ ತಂಡಕ್ಕೆ ಸೂಚಿಸಲಾಗಿದೆ ಎಂದರು.
ಕ್ಷೇತ್ರ ಮಟ್ಟದಲ್ಲಿ ಯಾವುದೇ ರೀತಿಯ ತಾಂತ್ರಿಕ ಅಡಚಣೆಗಳು ಉಂಟಾದರೆ ತುರ್ತಾಗಿ ಮೇಲ್ವಿಚಾರಕರಿಗೆ ಸಮೀಕ್ಷಕರು ತಿಳಿಸಿದರೆ ತಾಂತ್ರಿಕ ಸಿಬ್ಬಂದಿ ಕೂಡಲೆ ಬಗೆಹರಿಸುವ ವ್ಯವಸ್ಥೆ ಮಾಡುವರು. ಯಾವುದೇ ನೆಪ ಹೇಳದೆ ತಮಗೆ ನಿಯೋಜಿತವಾಗಿರುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ನಿತ್ಯದ ಗುರಿ ಸಾಧಿಸಬೇಕು ಎಂದರು.
ಸಮೀಕ್ಷಾ ಕಾರ್ಯವನ್ನು ಅ. ರೊಳಗಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಅವರು ವಿಡಿಯೊ ಸಂವಾದ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯದ ಪ್ರಗತಿ ಈ ವರೆಗೆ ಆಶಾದಾಯಕವಾಗಿಲ್ಲ. ನಗರ ಪ್ರದೇಶ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಗ್ರಾಮಾಂತರ ಪ್ರದೇಶದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದಿನನಿತ್ಯ ಸಮೀಕ್ಷಾ ಕಾರ್ಯದ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.
ಸಮೀಕ್ಷಾ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದರೆ ತುರ್ತು ಕ್ರಮ ಕೈಗೊಂಡು ಚುರುಕುಗೊಳಿಸುವ ಕಾರ್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರ್ ತಾಲ್ಲೂಕು ಮಟ್ಟದಲ್ಲಿ ನಿಗಾವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಬೀಗ ಹಾಕಿದ್ದರೆ ಸ್ಟಿಕ್ಕರ್ ಅಂಟಿಸಿ
ಯಾವುದಾದರೂ ಮನೆಗಳು ಬೀಗ ಹಾಕಿದ್ದರೆ ಅಂತಹ ಮನೆಗಳ ಮುಂಭಾಗದಲ್ಲಿ ಸಮೀಕ್ಷಕರು ಬಂದು ಹೋಗಿದ್ದಾರೆ ಎಂಬುದನ್ನು ತಿಳಿಸಿಕೊಡಲು ಸ್ಟಿಕ್ಕರ್‌ಗಳನ್ನು ಅಂಟಿಸಿ ತಮ್ಮ ದೂರವಾಣಿ ವಿವರವನ್ನು ಸ್ಟಿಕ್ಕರ್ ಮೇಲೆ ಬರೆದು ಸಂಪರ್ಕಿಸಲು ತಿಳಿಸಬೇಕು. ಜಿಲ್ಲೆಯ 320882 ಮನೆಗಳ ಗಣತಿ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.