
ಬಾಗೇಪಲ್ಲಿ: ಕದಿರಿ ಹುಣ್ಣಿಮೆ ಪ್ರಯುಕ್ತ ಪರಿಶಿಷ್ಟರ ಕಾಲೊನಿಗಳಲ್ಲಿ ಹೆಣ್ಣುಮಕ್ಕಳು ಮನೆಗಳ ಮುಂದೆ ಚಂದಿರಮ್ಮನ ರಂಗೋಲಿ ಬಿಡಿಸಿ, ಚಂದ್ರಮ್ಮನನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಆಚರಣೆ ಮಾಡಲಾಯಿತು.
ಆಂಧ್ರಪ್ರದೇಶದ ಕದಿರಿ ಲಕ್ಷ್ಮಿನರಸಿಂಹ ದೇವರ ರಥೋತ್ಸವ ದಿನಗಳಲ್ಲಿ ಈ ಚಂದಿರಮ್ಮನ ಪೂಜೆ ಮಾಡುವುದು ಸಂಪ್ರದಾಯ. ರಥೋತ್ಸವಕ್ಕೆ ಹೋಗದ ಮಹಿಳೆಯರು, ಹೆಣ್ಣುಮಕ್ಕಳು ಈ ವಿಶಿಷ್ಠ ಆಚರಣೆ ಮಾಡುತ್ತಾರೆ. ಕದಿರಿ ಹುಣ್ಣಿಮೆ ದಿನ ಚಂದ್ರ ಬೆಳದಿಂಗಳು ಚೆಲ್ಲುತ್ತಾನೆ.
ಪರಿಶಿಷ್ಟರ ಪ್ರಕಾರ ಚಂದ್ರಮ್ಮ, ದಲಿತರ ಮನೆ ಹೆಣ್ಣುಮಗಳು. ವರ್ಷಕ್ಕೆ ಒಮ್ಮೆ ಆಕೆಯನ್ನು ಮನೆ ತುಂಬಿಸಿಕೊಳ್ಳುವುದೇ ಚಂದಿರಮ್ಮ ಆಚರಣೆ. ಕದಿರಿ ಹುಣ್ಣಿಮೆ ಅಸುಪಾಸಿನಲ್ಲಿ ಪಟ್ಟಣ ಸೇರಿ ತಾಲ್ಲೂಕಿನ ವಾಲ್ಮೀಕಿ ಮತ್ತು ಅಂಬೇಡ್ಕರ್ ನಗರಗಳಲ್ಲಿ ವಾಸ ಮಾಡುವ ಮಹಿಳೆಯರು, ಹೆಣ್ಣುಮಕ್ಕಳು ಮನೆಗಳಲ್ಲಿ, ಮನಗಳಲ್ಲಿ ‘ಚಂದ್ರಮ್ಮ’ನ ಆರಾಧನೆ ನಡೆಯುತ್ತದೆ.
ಹುಣ್ಣಿಮೆ ಹಿಂದೆ ಮತ್ತು ಮುಂದಿನ ದಿನಗಳು ಮನೆಗಳಲ್ಲಿ ದೇವರಿಗೆ ದೀಪ ಬೆಳಗಿಸುತ್ತಾರೆ. ಹೂವು, ಹಣ್ಣು, ನೈವೇದ್ಯ ಸಮರ್ಪಿಸುತ್ತಾರೆ. ಮನೆಗಳ ಮುಂದೆ ಸಗಣಿಯಿಂದ ಸಾರಿಸಿ, ಅದರ ಮೇಲೆ ರಂಗೋಲಿ ಬಿಡಿಸಿದ್ದಾರೆ. ಕೆಲವರು ರಥದ ಮಾದರಿಯಲ್ಲಿ ರಂಗೋಲಿ ಬಿಡಿಸಿ, ಅರಿಶಿಣ, ಕುಂಕುಮ, ಹೂವು, ಹಣ್ಣು, ಪ್ರಸಾದ ಇಟ್ಟು ಪೂಜೆ ಮಾಡಿದರು. ರಂಗೋಲಿಯಲ್ಲಿ ಚಂದ್ರಮ್ಮನ ಚಿತ್ರ ಬರೆದರು. ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕಾರ ಮಾಡಿದರು. ದಲಿತ ಸಮುದಾಯಗಳ ಶ್ರಮಿಕರ ಪ್ರತೀಕಗಳಾದ ಕುಡುಗೋಲು, ಹಾರೆ, ಮೊರ, ಪೊರಕೆ, ರಾಗಿ ಮುದ್ದೆ ಮಾಡುವ ಕೋಲು, ಮುದ್ದೆ ತೆಗೆಯುವ ಬಿಲ್ಲೆಯ ಚಿತ್ರಗಳನ್ನು ಬಿಡಿಸಲಾಗಿದೆ.
ರಂಗೋಲಿ ಮಧ್ಯೆ ಹೊಸದಾದ ಕನ್ನಡಿ ಇರಿಸಿದರು. ಮಹಿಳೆಯರು, ಹೆಣ್ಣುಮಕ್ಕಳು ರಂಗೋಲಿ ಸುತ್ತ ಕುಳಿತು ಹಾಡುಗಳನ್ನು ಹಾಡಿದರು. ಇದು ತಡರಾತ್ರಿಯವರಿಗೂ ಮುಂದುವರಿದಿದೆ. ಅರಿಶಿಣ, ಕುಂಕುಮ, ಹೂವು, ಹಣ್ಣು ಇಟ್ಟು ಪೂಜಿಸಿದರು. ಚಂದ್ರಮ್ಮ ಕನ್ನಡಿಯಲ್ಲಿ ಕಾಣಿಸುವವರೆಗೆ ಚಂದಿರಮ್ಮನ ಪೂಜೆ ನಡೆಯಲಿದೆ. ಕನ್ನಡಿಯಲ್ಲಿ ಚಂದ್ರ ಕಾಣಿಸಿದ ನಂತರ ಮನೆ ಮಂದಿಯೆಲ್ಲಾ ಸೇರಿ ಪ್ರಸಾದ ಸೇವಿಸುತ್ತಾರೆ.
‘ಚಂದ್ರಮ್ಮನ ಆರಾಧನೆ, ಪೂಜೆ ಇದು ಆಚರಣೆಯಲ್ಲ. ಬದಲಿಗೆ ದಲಿತರ ಸಮುದಾಯದ ಬದುಕಿನ ಅನಾವರಣ’ ಎಂದು ಪಟ್ಟಣದ ಸಂಸ್ಕೃತಿ ಚಿಂತಕ ಡಾ.ಕೆ.ಎಂ.ನಯಾಜ್ ಅಹಮದ್ ತಿಳಿಸಿದರು.
ದಲಿತ ಸಮುದಾಯದ ನೋವು, ನಲಿವುಗಳ ಜೊತೆಗೆ ಶ್ರಮಜೀವಿಗಳ ಬೆವರಿನ ಬದುಕು ಮತ್ತು ನೆಲಮೂಲದ ಸಂಸ್ಕೃತಿಯು ಈ ಚಂದಿರಮ್ಮ ಪೂಜೆ ಅನಾವರಣ ಮಾಡಿದೆ.
- ಚಂದ್ರಮ್ಮ ಮನೆ ಹೆಣ್ಣುಮಗಳು
ನಮ್ಮ ಮನೆ ಮುಂದೆ ಕದಿರಿ ಹುಣ್ಣಿಮೆಯ ದಿನಗಳಲ್ಲಿ ಚಂದಿರಮ್ಮ ಪೂಜೆ ಮಾಡುವುದು ಸಂಪ್ರದಾಯ. ಪರಿಶಿಷ್ಟರ ಮನೆಗಳಲ್ಲಿ ಈ ಆಚರಣೆಯನ್ನು ಇಂದಿಗೂ ಉಳಿಸಿ ಬೆಳಿಸಿದ್ದೇವೆ. ಚಂದ್ರಮ್ಮ ನಮ್ಮ ಮನೆಯ ಹೆಣ್ಣುಮಗಳು. ಆಕೆಯನ್ನು ಮನೆಗೆ ಬರಮಾಡಿಕೊಂಡು ಆತಿಥ್ಯ ನೀಡುವ ಸಂಪ್ರದಾಯವಿದು. ಚಂದ್ರಮ್ಮನ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿದ್ದೇವೆ ಎಂದು ಪಟ್ಟಣದ ವಾಲ್ಮೀಕಿ ನಗರದ ಹಿರಿಯ ಮಹಿಳೆ ಆಂಜಿನಮ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.