ADVERTISEMENT

ಚಿಕ್ಕಬಳ್ಳಾಪುರ: 26ರಂದು ಚದುಲಪುರ ಹೆದ್ದಾರಿ ತಡೆ

ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಒಂದು ವರ್ಷ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 3:51 IST
Last Updated 17 ನವೆಂಬರ್ 2021, 3:51 IST

ಚಿಕ್ಕಬಳ್ಳಾಪುರ: ನವದೆಹಲಿಯಲ್ಲಿಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಒಂದು ವರ್ಷವಾಗುವ ಪ್ರಯುಕ್ತ ನ.26ರಂದು ಚದುಲಪುರ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಪ್ರಧಾನಿ ಸೌಜನ್ಯಕ್ಕಾದರೂ ರೈತರ ಜತೆ ಮಾತುಕತೆ ನಡೆಸುವ ಕಾಳಜಿ ತೋರಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿವೆ ಎಂದು ಹೇಳಿದರು.

ADVERTISEMENT

ಕಾರ್ಮಿಕರು, ಕನ್ನಡ ಸಂಘಟನೆಗಳು, ಹಿಂದುಳಿದ ವರ್ಗಗಳ ಸಂಘಟನೆಗಳು ಸಹಸಂಯುಕ್ತ ಹೋರಾಟ ಸಮಿತಿ ಹಮ್ಮಿಕೊಂಡಿರುವ ಈ ರಸ್ತೆ ತಡೆಯಲ್ಲಿ ಭಾಗವಹಿಸಲಿವೆ. ಅಂದು ನವದೆಹಲಿಯಲ್ಲಿ 500 ಸಂಘಟನೆಗಳು ಹೋರಾಟ ಹಮ್ಮಿಕೊಂಡಿವೆ. ಆ ಭಾಗವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುತ್ತೇವೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ವಿವಿಧ ಸಂಘಟನೆಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ಅಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹೋರಾಟ ನಡೆಸುತ್ತೇವೆ. ಕೃಷಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಹೆದ್ದಾರಿಯಲ್ಲಿ ಇಡುತ್ತೇವೆ. ನಮ್ಮ ಈ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ ಎಂದು ಹೇಳಿದರು.

ಸಿಐಟಿಯು ಮುಖಂಡ ಸಿದ್ದಗಂಗಪ್ಪ ಮಾತನಾಡಿ, ನವದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ 600ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಚಳಿ, ಮಳೆ,ಬಿಸಿಲನ್ನು ಲೆಕ್ಕಿಸದೆ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ. ಆದಾನಿ ಸೇರಿದಂತೆ ಕಾರ್ಪೊರೇಟ್ ಕಂಪನಿಗಳ ಹಿತ ಕಾಪಾಡಲು ರೈತರ ಹಿತವನ್ನು ಬಲಿಕೊಡುತ್ತಿದೆ ಎಂದು ದೂರಿದರು.

ಚದುಲಪುರ ಕ್ರಾಸ್‌ನಲ್ಲಿ ಎಲ್ಲ ಸಂಘಟನೆಗಳು ಸೇರಿ ಹೋರಾಟ ನಡೆಸುತ್ತೇವೆ. ಹೆಚ್ಚು ಜನರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಜಾ ಸಂಘರ್ಷ ಸಮಿತಿಯ ಚನ್ನರಾಯಪ್ಪ ಮಾತನಾಡಿ, ಈ ಹೋರಾಟ ಯಾವುದೇ ಸಂಘಟನೆ ಹೆಸರಿಗಾಗಿ ಮಾಡುತ್ತಿಲ್ಲ. ರೈತರು ಉಳಿದರೆ ಮಾತ್ರ ದೇಶದ ಉಳಿವು ಸಾಧ್ಯ. ಜಾತ್ಯತೀತ ಮತ್ತು ಪಕ್ಷಾತೀತವಾಗಿ ಈ ಹೋರಾಟ ನಡೆಯಲಿದೆ ಎಂದರು.

ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷಮುನಿಕೃಷ್ಣಪ್ಪ, ರೈತ ಸಂಘದ ವೆಂಕಟಸ್ವಾಮಿ, ಮುನಿಕೆಂ‍ಪಣ್ಣ, ರವಿಕುಮಾರ್, ಲೋಕೇಶ್‌ಗೌಡ, ರಾಮಾಂಜನಪ್ಪ, ಮುನಿನಂಜ‍ಪ್ಪ, ನಾರಾಯಣಸ್ವಾಮಿ, ರಾಮೇಗೌಡ, ಉದಯ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.