ADVERTISEMENT

ಜಿಲೆಟಿನ್ ಸ್ಫೋಟ ಪ್ರಕರಣ: 13 ಮಂದಿ ವಿರುದ್ಧ ದೋಷಾರೋಪ ಪಟ್ಟಿ

ಹಿರೇನಾಗವಲ್ಲಿ ಸ್ಫೋಟ ಪ್ರಕರಣ; ಸಿಐಡಿ ವಿಶೇಷ ತನಿಖಾ ತಂಡದಿಂದ ನ್ಯಾಯಾಲಯಕ್ಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:53 IST
Last Updated 10 ಜೂನ್ 2021, 14:53 IST
ರವಿಶಂಕರ್
ರವಿಶಂಕರ್   

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿ ಫೆ.23ರಂದು ನಡೆದ ಜಿಲೆಟಿನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನ್ಯಾಯಾಲಯಕ್ಕೆ ಸಿಐಡಿ ವಿಶೇಷ ತನಿಖಾ ತಂಡದ ಅಧಿಕಾರಿಗಳು 200 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಶ್ರೀಸಾಯಿ ಶಿರಡಿ ಕ್ವಾರಿ ಮಾಲೀಕರು ಮತ್ತು ವ್ಯವಸ್ಥಾಪಕರು ಹಾಗೂ ಆರು ಮಂದಿ ಮೃತರು ಸೇರಿ 13 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಬಂಧಿತ ಆರೋಪಿಗಳಾದ ಕ್ವಾರಿ ಮಾಲೀಕ ಜಿ.ಎಸ್.ನಾಗರಾಜ್ ಮತ್ತು ಪಾಲುದಾರರಾದ ರಾಘವೇಂದ್ರ ರೆಡ್ಡಿ, ವೆಂಕಟಶಿವ ರೆಡ್ಡಿ, ಮಧುಸೂದನ್ ರೆಡ್ಡಿ ಮತ್ತು ವ್ಯವಸ್ಥಾಪಕ ಪ್ರವೀಣ್ ಕುಮಾರ್, ದೇವನಹಳ್ಳಿಯ ಇಮ್ತಿಯಾಜ್ ವಿರುದ್ಧ ನಿರ್ಲಕ್ಷ್ಯ ಮತ್ತು ಸ್ಫೋಟಕ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಕೆಯಾಗಿದೆ.

ಸ್ಫೋಟಕ ಸಾಗಿಸಿದ ಟಾಟಾ ಏಸ್ ವಾಹನದ ಚಾಲಕ ಮೊಹಮ್ಮದ್ ರಿಯಾಜ್ ಅನ್ಸಾರಿಯನ್ನು ಸಹ ಬಂಧಿಸಲಾಗಿತ್ತು. ಇವರನ್ನು ಪ್ರತ್ಯಕ್ಷದರ್ಶಿ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯ ಪೊಲೀಸರು ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ.

ADVERTISEMENT

ಫೆ. 7ರಂದು ಕ್ವಾರಿ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದರು. ಫೆ.22ರ ಸಂಜೆ ಮತ್ತೆ ಪೊಲೀಸರು ಭೇಟಿ ನೀಡಿ ಡ್ರಿಲ್ಲರ್ ಯಂತ್ರವನ್ನು ವಶಪಡಿಸಿಕೊಂಡಿದ್ದರು. ಕ್ವಾರಿಯಲ್ಲಿ ರಹಸ್ಯವಾಗಿ ಇರಿಸಲಾಗಿದ್ದ ಬಳಕೆಯಾಗದ ಸ್ಫೋಟಕ ವಿಲೇವಾರಿ ಮಾಡುವಂತೆ ಕ್ವಾರಿ ಮಾಲೀಕರು ಸಿಬ್ಬಂದಿಗೆ ಸೂಚಿಸಿದ್ದರು.

ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ಪ್ರಾಥಮಿಕ ಪರೀಕ್ಷೆಯಲ್ಲಿ ಘಟನೆಯ ಸ್ಥಳದಲ್ಲಿ ಜಿಲೆಟಿನ್, ಪೆಟ್ರೋಲಿಯಂ ಜೆಲ್ ಮತ್ತು ಅಮೋನಿಯಂ ನೈಟ್ರೇಟ್‌ನ ಕುರುಹು ಇತ್ತು. ಎಂಜಿನಿಯರ್ ಉಮಾಮಹೇಶ್ ನೇತೃತ್ವದಲ್ಲಿ ಸಿಬ್ಬಂದಿ ಬಳಕೆಯಾಗದ ಸ್ಫೋಟಕಗಳನ್ನು ವಾಹನದಲ್ಲಿರಿಸಿ ನಾಶಮಾಡಲು ಪ್ರಯತ್ನಿಸುತ್ತಿದ್ದರು ಎಂದು ದೋಷಾರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಫೆ. 23ರಂದು ನಡೆದ ಹಿರೇನಾಗವಲ್ಲಿ ಸ್ಫೋಟದಲ್ಲಿ ಗಂಗಾಧರ್ ಬಾಬು, ಅಭಿಲಾಶ್ ನಾಯಕ್, ಮುರಳಿಕೃಷ್ಣ, ಮಹೇಶ್ ಸಿಂಗ್ ಬೋರಾ, ಉಮಾಮಹೇಶ್ ಮತ್ತು ಕ್ವಾರಿ ಮೇಲ್ವಿಚಾರಕ ರಾಮು ಮೃತಪಟ್ಟಿದ್ದರು. ಈ ದುರ್ಘಟನೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು.

***

ಹೆಚ್ಚುವರಿ ತನಿಖೆಗೆ ಅನುಮತಿ

ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಹೆಚ್ಚುವರಿ ತನಿಖೆಗೆ ನ್ಯಾಯಾಲಯದಿಂದ ಅನುಮತಿ ಸಹ ಪಡೆದಿದ್ದಾರೆ. 200 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಿದ ಕ್ವಾರಿ ಮಾಲೀಕರನ್ನು ಪ್ರಮುಖ ಆರೋಪಿಗಳನ್ನಾಗಿಸಲಾಗಿದೆ ಎಂದು ಡಿವೈಎಸ್‌ಪಿ ರವಿಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.