ADVERTISEMENT

ತೂಕದಲ್ಲಿ ಮೋಸ; ₹ 6.8ಲಕ್ಷ ದಂಡ ಸಂಗ್ರಹ

ಕಾನೂನು ಮಾಪನ ಇಲಾಖೆ; ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಪ್ರಕರಣಗಳ ಸಂಖ್ಯೆ

ಡಿ.ಎಂ.ಕುರ್ಕೆ ಪ್ರಶಾಂತ
Published 18 ಆಗಸ್ಟ್ 2021, 3:21 IST
Last Updated 18 ಆಗಸ್ಟ್ 2021, 3:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ತೂಕ ಮತ್ತು ಅಳತೆಯಲ್ಲಿನ ಮೋಸದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2020–21ನೇ ಸಾಲಿನಲ್ಲಿ ಒಟ್ಟು ₹6.08 ಲಕ್ಷ ದಂಡವನ್ನು ಜಿಲ್ಲೆಯ ಕಾನೂನು ಮಾಪನ ಇಲಾಖೆ ಸಂಗ್ರಹಿಸಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ದಂಡ ವಸೂಲಿಯೂ ಏರುಮುಖವಾಗಿದೆ.

ಪ್ರತಿ ವರ್ಷ ಇಂತಿಷ್ಟು ಗುರಿ ಸಾಧನೆ ಮಾಡಬೇಕು ಎಂದು ಇಲಾಖೆಯ ಸಹಾಯಕ ನಿಯಂತ್ರಕರ ಕಚೇರಿಗೆ ಸರ್ಕಾರವು ಗುರಿ ನಿಗದಿಗೊಳಿಸುತ್ತದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಗುರಿಯೂ ಹೆಚ್ಚಿದೆ. ಪ್ರಕರಣ ಮತ್ತು ದಂಡ ವಸೂಲಿಯೂ ಅಧಿಕವಾಗಿದೆ.

2018–19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ₹ 5.50 ಲಕ್ಷ, 2019–20ರಲ್ಲಿ ₹5.09 ಲಕ್ಷ ಹಾಗೂ 2020–21ರಲ್ಲಿ ಇಲ್ಲಿಯವರೆಗೆ ₹ 6.08 ಲಕ್ಷ ದಂಡ ಸಂಗ್ರಹವಾಗಿದೆ.

ADVERTISEMENT

ಪಡಿತರ ವಿತರಣೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಕರ್ನಾಟಕ ಉಗ್ರಾಣ ನಿಗಮ, ಸಗಟು ವ್ಯಾಪಾರಿಗಳು, ಪೆಟ್ರೋಲ್ ಬಂಕ್, ಸಂತೆ, ಹೂವಿನ ವ್ಯಾಪಾರಿಗಳು ಸೇರಿದಂತೆ ವಿವಿಧ ವಲಯಗಳಲ್ಲಿ ವ್ಯಾಪಾರ ನಿರತರು ಕಾನೂನು ಮಾಪನ ಇಲಾಖೆಯ ವ್ಯಾಪ್ತಿಗೆ ಒಳಪಡುವರು. ವ್ಯಾಪಾರಿಗಳು ಬಳಸುವ ಸ್ಕೇಲ್ (ತೂಕದ ಪಟ್ಟಿ)ಗಳನ್ನು ಎರಡು ವರ್ಷಕ್ಕೆ ಒಮ್ಮೆ ಸತ್ಯಾಪನೆಗೆ ಒಳಪಡಿಸಬೇಕು. ವ್ಯಾಪಾರಿಗಳು ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದರೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ 125 ಪ್ರಕರಣಗಳ ಗುರಿಯನ್ನು ಇಲಾಖೆಯು ನಿಗದಿಗೊಳಿಸಿತ್ತು. ಆದರೆ 300 ಪ್ರಕರಣಗಳು ದಾಖಲಾಗಿವೆ. 2019–20ರಲ್ಲಿ 300 ಪ್ರಕರಣಗಳ ಗುರಿ ನಿಗದಿಗೊಳಿಸಲಾಗಿದ್ದು 532 ಪ್ರಕರಣಗಳನ್ನು ಅಧಿಕಾರಿಗಳು ದಾಖಲಿಸಿದ್ದಾರೆ. 2020–21ರಲ್ಲಿ 400 ‍ಪ್ರಕರಣಗಳನ್ನು ದಾಖಲಿಸಬೇಕು ಎನ್ನುವ ಗುರಿಯನ್ನು ಇಲಾಖೆ ನೀಡಿದೆ. ಈಗಾಗಲೇ 457 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ತೂಕ ಮತ್ತು ಅಳತೆಯಲ್ಲಿ ಮೋಸ ಕಂಡು ಬಂದರೆ ಅಥವಾ ಇಲಾಖೆಯ ನಿಯಮಗಳ ಉಲ್ಲಂಘನೆ ಕಂಡರೆ ಗರಿಷ್ಠ ₹ 10ಸಾವಿರದವರೆಗೆ ದಂಡ ವಿಧಿಸುವ ಅವಕಾಶ ಅಧಿಕಾರಿಗಳಿಗೆ ಇದೆ.

ತೂಕ ಮತ್ತು ಅಳತೆಯ ಮಾಪನ ಪಟ್ಟಿ (ಸ್ಕೇಲ್‌)ಗಳನ್ನು ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಯಾವುದೇ ಒಂದು ಸ್ಕೇಲ್ ಅನ್ನು ಎರಡು ವರ್ಷಗಳಿಗೆ ಒಮ್ಮೆ ಸತ್ಯಾಪನೆಗೆ ಒಳಪಡಿಸಬೇಕು. ಸ್ಕೇಲ್‌ನ ಪ್ರಮಾಣ ಆಧಾರಿಸಿ ಇದಕ್ಕೆ ವ್ಯಾಪಾರಿಗಳು ಸತ್ಯಾಪನ ಶುಲ್ಕವನ್ನು ಪಾವತಿಸಬೇಕು. ಈ ಸತ್ಯಾಪನ ಶುಲ್ಕವೇ ಇಲಾಖೆಯು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆದಾಯ ಆಗಿರುತ್ತದೆ. ಇವುಗಳು ಜಿಲ್ಲೆಯಲ್ಲಿ ವ್ಯಾಪಾರಿಗಳ ಸಂಖ್ಯೆಯನ್ನೂ ತೋರಗೊಡುತ್ತದೆ.

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಸತ್ಯಾಪನ ಶುಲ್ಕ ಹೆಚ್ಚಿನದಾಗಿಯೇ ಸಂಗ್ರಹವಾಗುತ್ತಿದೆ. ಪ್ರಸಕ್ತ ವರ್ಷ ಈಗಾಗಲೇ ₹ 69 ಲಕ್ಷ ಸತ್ಯಾಪನ ಶುಲ್ಕ ಸಂಗ್ರಹವಾಗಿದೆ.

ದೂರು ನೀಡುವವರೂ ಇಲ್ಲ: ಕೆಲವು ಜಿಲ್ಲೆಗಳಲ್ಲಿ ತೂಕ ಮತ್ತು ಅಳತೆಯ ವಿಚಾರವಾಗಿ ವ್ಯಾಪಾರಿಗಳು ಮೋಸ ಮಾಡಿದರೆ ಕಾನೂನು ಮಾಪನ ಇಲಾಖೆಗೆ ಸಾರ್ವಜನಿಕರು ದೂರು ನೀಡುವರು. ಆದರೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರುಗಳು ಸಹ ದಾಖಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.