
ಚೇಳೂರು: ತಾಲ್ಲೂಕಿನಾದ್ಯಂತ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಬಹುದೊಡ್ಡ ಸವಾಲಾಗಿದೆ. ಮಾಸಿಕ ಪಡಿತರ ಪಡೆಯಲು ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬ ಸದಸ್ಯರು ಬೆರಳಚ್ಚು ನೀಡಬೇಕು. ಆ ನಂತರ ಮಾತ್ರ ಪಡಿತರ ಪಡೆಯಲು ಸಾಧ್ಯವಾಗಲಿದೆ.
ಸರ್ಕಾರವು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಪಾರದರ್ಶಕವಾಗಿರಲು ಬಯೊಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿದೆ. ನಂತರ ಇನ್ನಷ್ಟು ಸುಲಭ ಹಾಗೂ ಜನಸ್ನೇಹಿಯಾಗಲು ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಆಧಾರಿತ ವ್ಯವಸ್ಥೆ ಜಾರಿಗೊಳಿಸಿದೆ. ಕಾಲ ಕ್ರಮೇಣ ಒಟಿಪಿ ಆಧಾರಿತ ವ್ಯವಸ್ಥೆ ನಿಲ್ಲಿಸಿ, ಕೇವಲ ಬಯೊಮೆಟ್ರಿಕ್ ಸೌಲಭ್ಯ ಮಾತ್ರ ಬಳಸಲು ತೀರ್ಮಾನಿಸಿದೆ.
ಒಟಿಪಿ ವ್ಯವಸ್ಥೆಯಡಿ ಫಲಾನುಭವಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ ಕಳುಹಿಸಿ, ಆ ಒಟಿಪಿ ಅನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೋಂದಾಯಿಸುವುದರ ಮೂಲಕ ಪಡಿತರ ಪಡೆಯಬಹುದಾಗಿತ್ತು. ಇದರಿಂದಾಗಿ ಪಡಿತರ ವಿತರಣೆಯಲ್ಲಿ ವಿಳಂಬ ಮತ್ತು ತೊಂದರೆಗಳು ಕಡಿಮೆಯಾಗಿತ್ತು. ವಿಶೇಷವಾಗಿ ವೃದ್ಧರು, ಅಂಗವಿಕಲರು ಈ ವ್ಯವಸ್ಥೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಿದ್ದರು.
ಆದರೆ ಬಯೊಮೆಟ್ರಿಕ್ ಕಡ್ಡಾಯ ವ್ಯವಸ್ಥೆಯಿಂದಾಗಿ ಪಡಿತರ ಪಡೆಯಲು ಈಗ ಬಹುದೊಡ್ಡ ಸವಾಲಾಗಿದೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ ಸರಿಯಾಗಿ ಲಭ್ಯವಿಲ್ಲ. ಆಹಾರ ಇಲಾಖೆಯ ಅಂತರ್ಜಾಲ ತಾಣ ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಬಯೊಮೆಟ್ರಿಕ್ ಯಂತ್ರಗಳು ಕೆಲಸ ಮಾಡದೆ ಫಲಾನುಭವಿಗಳು ಪಡಿತರ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಜೊತೆಗೆ ಸರ್ವರ್ ಸಿಗುವ ಸಂದರ್ಭದಲ್ಲೂ ವೃದ್ಧರು, ಕೂಲಿ ಕಾರ್ಮಿಕರು ಹಾಗೂ ಶಾರೀರಿಕ ಶ್ರಮ ಮಾಡುವವರ ಬೆರಳಚ್ಚು ಸ್ಪಷ್ಟವಾಗಿ ತಾಳೆಯಾಗದೆ ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ.
ವಿನಾಕಾರಣ ಸಾರ್ವಜನಿಕರು ತಮ್ಮ ಕೆಲಸಗಳನ್ನು ಬಿಟ್ಟು ಬೆಳಿಗ್ಗೆಯಿಂದಲೇ ಪಡಿತರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ದಿನವಿಡೀ ಕಾಯಬೇಕಾದ ಪರಿಸ್ಥಿತಿ ಇದೆ. ಕೂಲಿಯೂ ಇಲ್ಲ ಪಡಿತರವೂ ಇಲ್ಲದಂತಾಗಿದೆ. ನರಸಮ್ಮ ಶಿವಪುರ ನಿವಾಸಿ
20ರ ನಂತರ ಸಮಸ್ಯೆ: ರಾಜ್ಯಮಟ್ಟದ ಸಮಸ್ಯೆ ಇದೆ. ತಿಂಗಳ 19ನೇ ತಾರೀಕಿನೊಳಗೆ ಸರ್ವರ್ ಸಮಸ್ಯೆ ಇರುವುದಿಲ್ಲ. 20ನೇ ತಾರೀಕಿನ ಮೇಲೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಸರಿಪಡಿಸುವ ಕೆಲಸವೂ ಆಗುತ್ತಿದೆ. ನಿಯಮ ಉಲ್ಲಂಘನೆಗೆ ಮಾಡಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿ ಡೀಲರ್‌ಗಳಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಪುಷ್ಪಾ ಆಹಾರ ನಿರೀಕ್ಷಕರು ಬಾಗೇಪಲ್ಲಿ
ದಿನವಿಡೀ ಕಾಯುವ ಸ್ಥಿತಿ: ನಿತ್ಯ ಕೂಲಿ ಮಾಡಿ ಜೀವನ ಸಾಗಿಸುವ ನಾವು ಸರ್ವರ್ ಸಮಸ್ಯೆಯಿಂದ ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ನಮಗೆ ಕೂಲಿ ಹಾಗೂ ಪಡಿತರ ಎರಡೂ ಇಲ್ಲದಾಗಿದೆ.ನರಸಮ್ಮ ಶಿವಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.