ADVERTISEMENT

ಚೇಳೂರು | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:17 IST
Last Updated 17 ಡಿಸೆಂಬರ್ 2025, 5:17 IST
ದೊಡ್ಡಿವಾರಪಲ್ಲಿ ಗ್ರಾಮದ ಶುದ್ಧ ನೀರಿನ ಘಟಕದ ಸ್ಥಿತಿ 
ದೊಡ್ಡಿವಾರಪಲ್ಲಿ ಗ್ರಾಮದ ಶುದ್ಧ ನೀರಿನ ಘಟಕದ ಸ್ಥಿತಿ    

ಚೇಳೂರು: ಸರ್ಕಾರಗಳು ಲಕ್ಷಾಂತರ ರೂಪಾಯಿ ವ್ಯಯಿಸಿ ಸುರಕ್ಷಿತ ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಶುದ್ಧ ಘಟಕಗಳನ್ನು ಪ್ರಾರಂಭಿಸುತ್ತವೆ.

ಘಟಕಗಳು ಸಣ್ಣಪುಟ್ಟ ಸಮಸ್ಯೆಯಿಂದ ನಿಂತರೂ ವರ್ಷಗಳಿಂದ ದುರಸ್ತಿಗೆ  ಸಂಬಂಧಿಸಿದವರು ಮುಂದಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮೀಣ ಭಾಗದ ಜನರಲ್ಲಿ ಕಾಯಿಲೆಗಳು ಹರಡುವ ಭೀತಿಯೂ ಇದೆ.

ಚೇಳೂರು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳು ಇವೆ. ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದ್ದರೂ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇದರಿಂದ ಶುದ್ಧ ಕುಡಿಯುವ ನೀರಿಗಾಗಿ ಅಲೆಯುವ ಪರಿಸ್ಥಿತಿ ಇದೆ.

ADVERTISEMENT

ಬಹುತೇಕ ಗ್ರಾಮಗಳಲ್ಲಿ ನೀರಿನ ಘಟಕಗಳು ಕೆಟ್ಟಿರುವುದರಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ದೂರದ ಗ್ರಾಮ ಅಥವಾ ಪಟ್ಟಣ ಅವಲಂಬಿಸಬೇಕಾಗಿದೆ. ಹಲವು ಬಾರಿ ಕೆಲವು ಘಟಕಗಳು ಕೆಟ್ಟಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ ಎಂಬುದು ಸಾರ್ವಜನಿಕರ ದೂರು.

ಘಟಕಗಳನ್ನು ನಿರ್ವಹಿಸಬೇಕಾದ ‌ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಹದಗೆಟ್ಟು ವರ್ಷಗಳೇ ಕಳೆದರೂ ದುರಸ್ತಿಯ ಭಾಗ್ಯ ಇಲ್ಲವಾಗಿದೆ.

ಅನೇಕ ಗ್ರಾಮಗಳಲ್ಲಿ ಘಟಕಗಳ ಆವರಣಗಳನ್ನು ಹಸುಗಳ ಮತ್ತು ಕುರಿ, ಮೇಕೆಗಳ ಕೊಟ್ಟಿಗೆಗಳ ರೀತಿ ಬಳಸಿಕೊಳ್ಳಲಾಗುತ್ತಿದೆ. ಕೆಟ್ಟು ನಿಂತ ಘಟಕಗಳ ಸುತ್ತ ಗಿಡಗಂಟಿಗಳು ಬೆಳೆದಿವೆ. 

ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹುಡ್ಯ, ನಾರೇಮದ್ದೇಪಲ್ಲಿ  ವ್ಯಾಪ್ತಿಯ ಶಿವಪುರ ಮತ್ತು ದೊಡ್ಡಿವಾರಪಲ್ಲಿ, ಚಾಕವೇಲು ಪಂಚಾಯಿತಿ ವ್ಯಾಪ್ತಿಯ ದಿಗವ ಪ್ಯಾಯಲವಾರಿಪಲ್ಲಿ, ಸೋಮನಾಥಪುರ ವ್ಯಾಪ್ತಿಯ ರಾಚವಾರಿಪಲ್ಲಿ ಮತ್ತು ಚಿನ್ನಗಾನಪಲ್ಲಿ, ಪಾಳ್ಯಕರೆ ಪಂಚಾಯಿತಿ ವ್ಯಾಪ್ತಿಯ ರಾಮೋಜಿಪಲ್ಲಿ  ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದು  ಸುಮಾರು ವರ್ಷಗಳೇ ಆಗಿವೆ.

ಸರ್ಕಾರವು ಶುದ್ಧ ಕುಡಿಯುವ ನೀರಿಗಾಗಿ ರಾಜ್ಯದ ಎಲ್ಲ ಜಿಲ್ಲಾಡಳಿತಗಳ ಪ್ರತ್ಯೇಕ ಖಾತೆಗಳಲ್ಲಿ ಇಂತಿಷ್ಟು ಹಣ  ಮೀಸಲಿಡಲಾಗಿರುತ್ತದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಅನುಮೋದನೆಯಾದ ಘಟಕಗಳನ್ನು ನಿರ್ಮಿಸಿಲ್ಲ: ಹೊಸದಾಗಿ ಘಟಕಗಳನ್ನು ಅಳವಡಿಸಲು ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಸುಮಾರು ವರ್ಷಗಳೇ ಕಳೆದರೂ ಹಲವು ಗ್ರಾಮಗಳಲ್ಲಿ ಇದುವರೆಗೂ ಘಟಕ ನಿರ್ಮಾಣವಾಗಿಲ್ಲ.

ಕೆಲವು ಗ್ರಾಮಗಳಲ್ಲಿ ಹೊರಗಡೆಯ ಪ್ರೇಮ್ ಮಾತ್ರ ನಿರ್ಮಾಣ ಮಾಡಲಾಗಿದೆ. ಯಾವುದೇ ಯಂತ್ರಗಳನ್ನು ಅಳವಡಿಸಿಲ್ಲ. 

ಶಿವಪುರ ಗ್ರಾಮದ  ನೀರಿನ ಘಟಕದ ಸುತ್ತ ಗಿಡಗಂಟಿಗಳು
ಚಿನ್ನಗಾನಪಲ್ಲಿ ಗ್ರಾಮದ ನೀರಿನ ಘಟಕದಲ್ಲಿ ಯಂತ್ರೋಪಕರಣಗಳು ತುಕ್ಕು ಹಿಡಿದಿರುವುದು 
ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 3 ವರ್ಷ ಆಗಿದೆ. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ದೂರದ ಗ್ರಾಮಗಳಿಂದ ನೀರನ್ನು ತಂದು ಬಳಕೆ ಮಾಡಿಕೊಳ್ಳುತ್ತಿದ್ದೇವೆ.
- ಆದಿ, ಚಿನ್ನಗಾನಪಲ್ಲಿ  
ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದರಿಂದ ಬೇರೆ ಊರಿಂದ ಕುಡಿಯುವ ನೀರು ತರುತ್ತಿದ್ದೇವೆ. ದ್ವಿಚಕ್ರ ವಾಹನ ಹೊಂದಿರುವವರು ದೂರದ ಊರುಗಳಿಂದ ನೀರು ತರುತ್ತಾರೆ. ವಾಹನ ಇಲ್ಲದ ನಮ್ಮಂತವರ ಗತಿಯೇನು.
-ದೇವಿ, ರಾಮೋಜಿಪಲ್ಲಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.