
ಚೇಳೂರು: ತಾಲ್ಲೂಕು ಕೇಂದ್ರ ಚೇಳೂರು ಪ್ರಮುಖ ರಸ್ತೆಗಳಲ್ಲಿ ಅಸಮರ್ಪಕ ನಿರ್ವಹಣೆ ಮತ್ತು ವ್ಯಾಪಕ ಅತಿಕ್ರಮಣಗಳಿಂದಾಗಿ ಪಾದಚಾರಿ ಮಾರ್ಗಗಳು ಒತ್ತುವರಿಗೆ ಒಳಗಾಗಿವೆ.
ಇದರಿಂದ ಪಾದಚಾರಿಗಳಷ್ಟೇ ಅಲ್ಲದೆ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯ ರಸ್ತೆಗಳಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಒತ್ತುವರಿಯಾಗಿವೆ. ಸಾರ್ವಜನಿಕರು ರಸ್ತೆಯಲ್ಲೇ ನಡೆಯುವ ಅನಿವಾರ್ಯತೆ ಎದುರಾಗಿದೆ.
ಚೇಳೂರಿನ ಮುಖ್ಯರಸ್ತೆಯ ಎರಡೂ ಕಡೆ ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಮತ್ತು ಅಂಗಡಿಗಳವರು ಸಂಪೂರ್ಣವಾಗಿ ಅತಿಕ್ರಮಿಸಿದ್ದಾರೆ. ರಸ್ತೆ ವಿಭಜಕಗಳು, ಚರಂಡಿಗಳ ಮೇಲ್ಭಾಗ ಮತ್ತು ಫುಟ್‌ಪಾತ್‌ಗಳ ಮೇಲೆ ಬ್ಯಾನರ್‌ಗಳು ಹಾಗೂ ಅಂಗಡಿಗಳ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ.
ಕೆಲವು ಅಂಗಡಿ ಮಾಲೀಕರು ತಮ್ಮ ದ್ವಿಚಕ್ರ ವಾಹನಗಳನ್ನು ಚರಂಡಿಗಳ ಮೇಲೆ ನಿಲ್ಲಿಸುತ್ತಾರೆ. ಫುಟ್‌ಪಾತ್‌ಗಳ ಮೇಲೆ ಕಬ್ಬಿಣದ ಕಂಬಿಗಳನ್ನು ಅಳವಡಿಸಿ ಮೆಟ್ಟಿಲುಗಳನ್ನು ನಿರ್ಮಿಸಿಕೊಂಡಿರುವುದು ಶಾಶ್ವತ ಅತಿಕ್ರಮಣಕ್ಕೆ ಸಾಕ್ಷಿಯಾಗಿದೆ.
ಬಹುತೇಕ ಫುಟ್‌ಪಾತ್‌ಗಳು ಅಂಗಡಿಗಳ ಸರಕುಗಳ ಸಂಗ್ರಹ ಮತ್ತು ವಾಹನಗಳ ಅಡ್ಡಾದಿಡ್ಡಿ ನಿಲುಗಡೆಗೆ ಬಳಕೆ ಆಗುತ್ತಿವೆ. ಇದರಿಂದಾಗಿ ಪಾದಚಾರಿಗಳು ನಡೆದಾಡಲು ಜಾಗವೇ ಇಲ್ಲದಂತಾಗಿದೆ.
ಶಾಲೆ ಮಕ್ಕಳು, ವೃದ್ಧರಿಗೆ ಕಂಟಕ: ಫುಟ್‌ಪಾತ್‌ಗಳು ಇಲ್ಲದಿರುವುದರಿಂದ ವೃದ್ಧರು ಮತ್ತು ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡುವಂತಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸುವ ವಾಹನಗಳು ಮತ್ತು ಅವ್ಯವಸ್ಥಿತ ಪಾರ್ಕಿಂಗ್‌ನಿಂದಾಗಿ ಅಪಘಾತಗಳು ಸಂಭವಿಸುವ ಭೀತಿ ಹೆಚ್ಚಾಗಿದೆ.
ಪಾರ್ಕಿಂಗ್ ಕಿರಿಕಿರಿ: ಮುಖ್ಯ ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್, ಬೇಕರಿ, ಮದ್ಯದ ಅಂಗಡಿಗಳು ಮತ್ತು ಕೃಷಿ ಔಷಧಗಳ ಮಾರಾಟ ಮಳಿಗೆ ಮುಂಭಾಗ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಮನಬಂದಂತೆ ನಿಲ್ಲಿಸಲಾಗುತ್ತದೆ. ಸರಕುಗಳನ್ನು ಲೋಡ್ ಮತ್ತು ಅನ್‌ಲೋಡ್ ಮಾಡುವ ವಾಹನಗಳು ನೇರವಾಗಿ ಮುಖ್ಯ ರಸ್ತೆಯಲ್ಲೇ ನಿಲ್ಲುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಆಗುತ್ತಿದೆ.
ಪಟ್ಟಣದ ಚಿಂತಾಮಣಿ ರಸ್ತೆಯ ಬಸ್ ನಿಲ್ದಾಣದ ಬಳಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಆಸ್ಪತ್ರೆಗಳು ಮತ್ತು ಬೇಕರಿ, ಅಂಗಡಿಗಳು, ಚಿನ್ನಾಭರಣ ಮಾರಾಟ ಅಂಗಡಿಗಳು ಫುಟ್‌ಪಾತ್‌ಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿವೆ. ಅವರ ವಾಹನಗಳನ್ನು ಕೂಡ ಮುಖ್ಯ ರಸ್ತೆಯಲ್ಲೇ ಅಡ್ಡಾದಿಡ್ಡಿ ನಿಲುಗಡೆ ಮಾಡಲಾಗುತ್ತಿದೆ.
ಪ್ರತಿದಿನ ಇದೇ ರಸ್ತೆಯಲ್ಲಿ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಆಡಳಿತದ ಅಧಿಕಾರಿಗಳು ಸಂಚರಿಸುವರು. ಸಾರ್ವಜನಿಕರಿಗೆ ಕಂಟಕವಾಗಿರುವ ಈ ಅತಿಕ್ರಮಣ ಫಲಕಗಳನ್ನು ಮತ್ತು ಒತ್ತುವರಿಗಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ.
ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ತಪಾಸಣೆ ನಡೆಸುವ ಪೊಲೀಸರು ಸಹ, ಫುಟ್‌ಪಾತ್ ಒತ್ತುವರಿ ಮತ್ತು ಅಡ್ಡಾದಿಡ್ಡಿ ವಾಹನ ನಿಲುಗಡೆಯನ್ನು ಏಕೆ ತಡೆಗಟ್ಟುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಚೇಳೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ ರಸ್ತೆ ಹಾಗೂ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ನಿರ್ಲಕ್ಷ್ಯ ವಹಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಅತಿಕ್ರಮಣಗಳನ್ನು ತೆರವುಗೊಳಿಸಿ, ಪಾದಚಾರಿಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುವರು.
ಅಪಘಾತ ಸಂಭವಿಸಿದರೆ ಯಾರು ಹೊಣೆ?
ನೂರಾರು ವಾಹನಗಳು ಓಡಾಡುವ ಈ ಮುಖ್ಯ ರಸ್ತೆಯಲ್ಲಿ ಫುಟ್‌ಪಾತ್ ಇಲ್ಲದ ಕಾರಣ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂತಾಗಿದೆ. ಇಲ್ಲಿ ಅಪಘಾತವಾದರೆ ಯಾರು ಹೊಣೆ? ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. - ಹೆಸರು ಹೇಳಲು ಇಚ್ಛಿಸದ ನಿವೃತ್ತ ಸರ್ಕಾರಿ ನೌಕರ ಚೇಳೂರು *** ರಸ್ತೆಯಲ್ಲಿನ ನಡಿಗೆಯಿಂದ ಭಯ ನಾನು ಪ್ರತಿ ದಿನ ಶಾಲೆಗೆ ಇದೇ ರಸ್ತೆಯಲ್ಲಿ ಹೋಗಬೇಕು. ಅಂಗಡಿಯವರು ತಮ್ಮ ಸಾಮಗ್ರಿಗಳನ್ನು ಮತ್ತು ಜಾಹೀರಾತು ಫಲಕಗಳನ್ನು ಫುಟ್‌ಪಾತ್‌ನಲ್ಲೇ ಇಡುತ್ತಾರೆ. ನಾವು ಹೆದರಿ ರಸ್ತೆಯ ಮಧ್ಯದಲ್ಲಿ ಹೋಗುತ್ತೇವೆ. ಹಿಂಬದಿಯಿಂದ ವೇಗವಾಗಿ ಬರುವ ಬಸ್‌ಗಳು ಮತ್ತು ಕಾರುಗಳನ್ನು ನೋಡಿದರೆ ಭಯ ಆಗುತ್ತದೆ. ತಕ್ಷಣ ಫುಟ್‌ಪಾತ್ ಖಾಲಿ ಮಾಡಿಸಬೇಕು. - ಕಾವ್ಯ ವಿದ್ಯಾರ್ಥಿನಿ *** ಸಮಸ್ಯೆ ಪರಿಹರಿಸಿ ಅಕ್ರಮವಾಗಿ ಕಬ್ಬಿಣದ ಕಂಬಿ ಹಾಕಿ ಮೆಟ್ಟಿಲು ನಿರ್ಮಿಸಿದ್ದಾರೆ. ಪಂಚಾಯಿತಿಯವರು ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿದ್ದಾರೆ. ತೆರವು ಕಾರ್ಯಾಚರಣೆ ಮಾಡಲು ತಹಶೀಲ್ದಾರ್ ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ? ಹೊಸ ತಾಲ್ಲೂಕು ಆದರೂ ಮೂಲ ಸೌಕರ್ಯವಾದ ಫುಟ್‌ಪಾತ್ ಸಹ ಸಿಗದಿರುವುದು ದುರದೃಷ್ಟ. - ಮಂಜುನಾಥ್ ಚೇಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.