ADVERTISEMENT

ರಸ್ತೆಯಲ್ಲೇ ಚೇಳೂರು ಸಂತೆ

ಕನಿಷ್ಠ ಸೌಲಭ್ಯಗಳೂ ಇಲ್ಲ; ಸಂತೆಗೆ 30 ಹಳ್ಳಿ ಜನರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:51 IST
Last Updated 8 ಅಕ್ಟೋಬರ್ 2025, 6:51 IST
ಚೇಳೂರು ಸಂತೆ
ಚೇಳೂರು ಸಂತೆ   

ಚೇಳೂರು: ಗ್ರಾಮವನ್ನು ತಾಲ್ಲೂಕು ಕೇಂದ್ರ ಎಂದು ಘೋಷಿಸಿ ವರ್ಷಗಳೇ ಕಳೆದಿವೆ. ಆದರೆ ಇಲ್ಲಿ ಹಲವು ವರ್ಷದಿಂದ ಸುಸಜ್ಜಿತ ಸಂತೆ ಮಾರುಕಟ್ಟೆ ಇಲ್ಲ. ವ್ಯಾಪಾರಿಗಳು ರಸ್ತೆಯನ್ನು ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸಂಚಾರಕ್ಕೆ ಸಂಚಕಾರ ಉಂಟಾದರೂ ಯಾರು ಕೇಳುವವರಿಲ್ಲ.

ಇಲ್ಲಿನ ಗ್ರಾಮ ಪಂಚಾಯಿತಿ ಮತ್ತು ಅಂಚೆ ಕಚೇರಿ ಸಂಪರ್ಕಿಸುವ ರಸ್ತೆ ಶುಕ್ರವಾರ ಸಂತೆ ಮಾರುಕಟ್ಟೆಗಾಗಿ ಪರಿವರ್ತನೆ ಆಗುತ್ತದೆ. ಇದರಿಂದ ಪಂಚಾಯಿತಿ ಮತ್ತು ಅಂಚೆ ಕಚೇರಿಗೆ ಬರುವವರಿಗೆ ಸಮಸ್ಯೆ ಉಂಟಾಗುತ್ತಿದೆ. ಪಂಚಾಯಿತಿ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಶುಕ್ರವಾರ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೇರೆ ದಾರಿ ಇಲ್ಲದೇ ವ್ಯಾಪಾರಿಗಳು ರಸ್ತೆಯ ಅಕ್ಕ ಪಕ್ಕದಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

ADVERTISEMENT

ಹಲವು ವರ್ಷಗಳಿಂದ ಚೇಳೂರಿನಲ್ಲಿ ಸಂತೆ ನಡೆಯುತ್ತದೆ. ಆದರೆ ವಹಿವಾಟು ನಡೆಸಲು ಪ್ರತ್ಯೇಕ ಸ್ಥಳವಿಲ್ಲ. ಮುಖ್ಯ ರಸ್ತೆಯಲ್ಲಿ ತರಕಾರಿ, ಬಟ್ಟೆ ಸಾಮಗ್ರಿ, ಕೃಷಿ ಉಪಕರಣ, ಕಿರಾಣಿ, ಧಾನ್ಯ, ಹಣ್ಣು ಮತ್ತಿತರ ವಸ್ತುಗಳ ವ್ಯಾಪಾರ ನಡೆಯುತ್ತಿದೆ.

25 ರಿಂದ 30ಕ್ಕೂ ಹೆಚ್ಚು ಗ್ರಾಮಸ್ಥರು ಸಂತೆಗೆ ಬರುತ್ತಾರೆ. ಅಂಧ್ರಪ್ರದೇಶದ ಕಡೆಯಿಂದಲೂ ವ್ಯಾಪಾರಕ್ಕಾಗಿ ಬರುತ್ತಾರೆ. ಮಳೆ ಹಾಗೂ ಬೇಸಿಗೆ ಕಾಲದಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರ ಸಮಸ್ಯೆ ಹೇಳತೀರದು.

ಸಂತೆ ನಡೆಸಲು ಪ್ರತ್ಯೇಕ ಮಾರುಕಟ್ಟೆ, ವಾಣಿಜ್ಯ ಮಳಿಗೆ ನಿರ್ಮಿಸಬೇಕು ಎಂದು ಸ್ಥಳೀಯರು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ  ಪ್ರಯೋಜನ ಆಗಿಲ್ಲ.  

ಗ್ರಾಮ ಪಂಚಾಯತಿಗೆ ಸಾಕಷ್ಟು ಆದಾಯ ಬರುತ್ತಿದ್ದರೂ ಮಾರುಕಟ್ಟೆ ನಿರ್ಮಿಸಲು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. 

ರಸ್ತೆಯಲ್ಲೇ ವಹಿವಾಟು ನಡೆಸುತ್ತಿದದೇವೆ. ಬಿಸಿಲು ಮಳೆಯಿಂದ ರಕ್ಷಣೆಗಾಗಿ ಪ್ಲಾಸ್ಟಿಕ್ ಟಾರ್ಪಲ್‌ ಬಳಸುತ್ತಿದ್ದೇವೆ.  ಸಂತೆಗೆ ಬರುವ ಜನರಿಗೆ ಸಾರ್ವಜನಿಕ ಶೌಚಾಲಯವಿಲ್ಲ. ಬಯಲನ್ನೇ ಆಶ್ರಯಿಸಬೇಕಿದೆ. ಕುಡಿಯುವ ನೀರಿಗೆ ಸಂಕಷ್ಟವಿದೆ. ಸ್ವಚ್ಛತೆಯೂ ಇಲ್ಲ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುವರು.

ಪಟ್ಟಣದಲ್ಲಿ ಸಂತೆ ಮಾರುಕಟ್ಟೆ ಇಲ್ಲದೆ ವ್ಯಾಪಾರಸ್ಥರು, ಗ್ರಾಹಕರು ಹರಸಾಹಸ ಪಡುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ನಡೆಯುವ ಸಂತೆ ದಿನ ವಾಹನಗಳ ದಟ್ಟಣೆಯಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವರು. 

‘ಜಾಗ ಗುರುತಿಸಿ ಸ್ಥಳಾಂತರ’

ಶೀಘ್ರದಲ್ಲಿ ಸೂಕ್ತ ಜಾಗ ಗುರುತಿಸಿ ಸಂತೆ ಮಾರುಕಟ್ಟೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು.      - ಗೌಸ್ ಪೀರ್ ಪಿಡಿಒ ಚೇಳೂರು *** ‘ಸೂಕ್ತ ಸ್ಥಳ ಒದಗಿಸಿ’ ರೈತರು ತಾವು ಬೆಳೆದ ಬೆಳೆಗಳನ್ನು ಸಂತೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಸೂಕ್ತ ಜಾಗ ಇಲ್ಲ. ಮುಖ್ಯ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವರು. ಸಂಬಂಧಪಟ್ಟ ಅಧಿಕಾರಿಗಳು ವ್ಯಾಪಾರಕ್ಕಾಗಿ ಸೂಕ್ತ ಜಾಗ ಒದಗಿಸಿಕೊಡಬೇಕು.  - ಎಂ.ಎಸ್.ನರಸಿಂಹಾರೆಡ್ಡಿ ರೈತ ಸಂಘದ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.