ADVERTISEMENT

ನಗರದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಕೇಂದ್ರ ಸರ್ಕಾರದಿಂದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 13:41 IST
Last Updated 5 ಆಗಸ್ಟ್ 2019, 13:41 IST
ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.   

ಚಿಕ್ಕಬಳ್ಳಾಪುರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.

ನಗರದ ಎಂ.ಜಿ ರಸ್ತೆಯ ಮರಳು ಸಿದ್ದೇಶ್ವರ ದೇವಾಲಯ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಕೇಂದ್ರ ಸರ್ಕಾರದ ಪರ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಕಿರಣ್, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಸ್ತಾವದ ಮೂಲಕ ದೇಶದ ಎಲ್ಲ ಪ್ರಜೆಗಳಿಗೂ ಒಂದೇ ಕಾನೂನು ತತ್ವ ತರಲು ಹೊರಟಿರುವುದು ಶ್ಲಾಘನೀಯ’ ಎಂದು ಹೇಳಿದರು.

ADVERTISEMENT

‘ಕಳೆದ ಲೋಕಸಭಾ ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಬಗ್ಗೆ ಭರವಸೆ ನೀಡಿತ್ತು. ಅದನ್ನು ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಿನಲ್ಲಿಯೇ ಈಡೇರಿಸುವ ಮೂಲಕ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಬಿಜೆಪಿ ಜನಪರ ಆಡಳಿತಕ್ಕೆ ಇದೇ ಸಾಕ್ಷಿ. ಇದರಿಂದ ದೇಶದ ಸುಭದ್ರತೆ ಕಡೆಗೆ ಹೆಜ್ಜೆ ಇಡಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರದ ಈ ನಿರ್ಧಾರವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸಿ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಇಡೀ ದೇಶಕ್ಕೆ ಒಂದು ಕಾನೂನು, ಕಣಿವೆ ರಾಜ್ಯಕ್ಕೆ ಮಾತ್ರ ಪ್ರತ್ಯೇಕ ಕಾನೂನನ್ನು ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಆದರೆ ಮತ ಬ್ಯಾಂಕ್‌ಗಾಗಿ ಕೆಲವರು ಕಳೆದ 70 ವರ್ಷಗಳಿಂದ ಇಂತಹ ಸಂವಿಧಾನ ವಿರೋಧಿ ವಿಶೇಷ ಸ್ಥಾನ ಮಾನ ಮುಂದುವರಿಸಿಕೊಂಡು ಬಂದಿದ್ದರು’ ಎಂದು ಆರೋಪಿಸಿದರು.

‘ಭ್ರಷ್ಟಾಚಾರ, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ದಿಟ್ಟ ಕ್ರಮಕೈಗೊಂಡ ಮೋದಿ ಅವರು ಈಗ ದೇಶದ ನಾಗರಿಕರಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಕೈಗೊಂಡ ಈ ಕ್ರಮವನ್ನು ಪ್ರತಿಯೊಬ್ಬ ದೇಶಭಕ್ತರು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕಿದೆ’ ಎಂದು ತಿಳಿಸಿದರು.

‘ಈ ಹಿಂದಿನ ಕೆಲ ಘಟನೆಗಳನ್ನು ಚುನಾವಣಾ ಗಿಮಿಕ್ ಎಂದು ಆರೋಪಿಸುತ್ತಿದ್ದ ವಿರೋಧ ಪಕ್ಷದವರು ಈಗ ಯಾವುದೇ ಚುನಾವಣೆ ಇಲ್ಲದಿದ್ದರೂ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದನ್ನು ಅರಗಿಸಿಕೊಳ್ಳಲಾರದೆ ಪರದಾಡುತ್ತಿದ್ದಾರ. ವಿನಾಕಾರಣ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇವರ ಯಾವುದೇ ಆರೋಪಗಳಿಗೆ ಪ್ರಜ್ಞಾವಂತರು ಬೆಲೆ ಕೊಡುವುದಿಲ್ಲ’ ಎಂದು ಹೇಳಿದರು.

ಬಿಜೆಪಿ ಎಸ್ಸಿಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಮಧುಚಂದ್ರ, ಪ್ರಧಾನ ಕಾರ್ಯದರ್ಶಿ ಮನೋಜ್, ಉಪಾಧ್ಯಕ್ಷ ಪ್ರಮೋದ್, ಮುಖಂಡರಾದ ಪಿ.ಎಂ.ರಘು, ಗಂಗಾಧರ್, ವಿಜಯ್ ಕುಮಾರ್, ಮುನಿರಾಮ್, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.