ADVERTISEMENT

ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆ: ಬಿಜೆಪಿಯಲ್ಲಿ ಈಗಲೇ ಅಭ್ಯರ್ಥಿಯ ಗುಲ್ಲು

ವಿಧಾನಸಭೆ ಚುನಾವಣೆಗಿದೆ ಎರಡು ವರ್ಷ; ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಚರ್ಚೆ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಫೆಬ್ರುವರಿ 2026, 8:06 IST
Last Updated 11 ಫೆಬ್ರುವರಿ 2026, 8:06 IST
   

ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂ ಕಾಲು ವರ್ಷಗಳಿವೆ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಬಿಜೆಪಿ ಅಭ್ಯರ್ಥಿಯ ಬಗ್ಗೆ ಚರ್ಚೆಗಳು ನಡೆದಿವೆ.

ಈ ಚರ್ಚೆ ಹುಟ್ಟಿಗೆ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಮಾತುಗಳೇ ಕಾರಣವಾಗಿವೆ. ಸದ್ಯದ ಮಟ್ಟಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಯ ಅಗ್ರನಾಯಕ ಸಂಸದ ಡಾ.ಕೆ.ಸುಧಾಕರ್. ಸಂಘಟನೆ ಮತ್ತು ಸಂಪನ್ಮೂಲದ ಕಾರಣದಿಂದ ಜಿಲ್ಲೆಯ ಬಿಜೆಪಿಯಲ್ಲಿ ಅವರ ಪ್ರಭಾವ ಹೆಚ್ಚಿದೆ.

ಡಾ.ಕೆ.ಸುಧಾಕರ್ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ ತಂಡವೇ ಈಗ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿಯ ವಿಚಾರವಾಗಿ ಚರ್ಚೆ ಹುಟ್ಟು ಹಾಕಿದೆ.

ADVERTISEMENT

ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಅವರು ಹೊದಿಕೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಎಸ್.ಆರ್.ವಿಶ್ವನಾಥ್ ಮತ್ತು ಅವರ ಪುತ್ರ ಅಲೋಕ್ ಪಾಲ್ಗೊಂಡಿದ್ದರು. 

ಸಂದೀಪ್ ರೆಡ್ಡಿ, ‘ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ನೂರಕ್ಕೆ ನೂರು ಸತ್ಯ’ ಎಂದರು. ಎಸ್‌.ಆರ್.ವಿಶ್ವನಾಥ್, ‘ಸಂಸದ ಡಾ.ಕೆ.ಸುಧಾಕರ್ ಕೇಂದ್ರದಲ್ಲಿ ಸಚಿವರಾಗಲಿ. ಸಂದೀಪ್ ರೆಡ್ಡಿ ಅವರಿಗೆ ಚಿಕ್ಕಬಳ್ಳಾಪುರದಲ್ಲಿ ಸ್ಥಾನ ಬಿಟ್ಟುಕೊಡಲಿ. ನಾವೆಲ್ಲರೂ ಸಂಸದರ ಮನವೊಲಿಸುತ್ತೇವೆ’ ಎಂದರು. ಹೊದಿಕೆ ವಿತರಣೆ ಕಾರ್ಯಕ್ರಮದಲ್ಲಿ ಮುಖಂಡರಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ವಿಚಾರವಾಗಿ ಮಾತುಗಳು ಹೊರ ಬಿದ್ದವು. 

ಇತ್ತೀಚೆಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಡಾ.ಕೆ.ಸುಧಾಕರ್, ‘ರಾಜ್ಯ ರಾಜಕಾರಣ ಬಿಟ್ಟು ಎಲ್ಲಿ ಹೋಗಲಿ. ಪಕ್ಷ ನಿಲ್ಲಬೇಕು ಎಂದರೆ ನಾನೇ ಅಭ್ಯರ್ಥಿಯಾಗುವೆ’ ಎಂದಿದ್ದರು.

ವಿಶ್ವನಾಥ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮತ್ತು ಡಾ.ಕೆ.ಸುಧಾಕರ್ ಅವರೇ ಅಭ್ಯರ್ಥಿ ಆಗಬೇಕು ಎಂದು ಅವರ ಅಭಿಮಾನಿಗಳು ಮತ್ತು ಬಿಜೆಪಿ ಮುಖಂಡರು ಮಾಧ್ಯಮಗೋಷ್ಠಿ ಸಹ ನಡೆಸಿದರು. ಹೀಗೆ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಈಗಲೇ ಬಿಜೆಪಿ ಅಭ್ಯರ್ಥಿಯ ಚರ್ಚೆಗಳು ನಡೆದಿವೆ.

ಸುಧಾಕರ್ ವಿರೋಧಿ ತಂಡದ ಸಖ್ಯ: ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಲು ಡಾ.ಕೆ.ಸುಧಾಕರ್ ಮತ್ತು ಎಸ್‌.ಆರ್.ವಿಶ್ವನಾಥ್ ಪುತ್ರ ಅಲೋಕ್ ನಡುವೆ ಪೈಪೋಟಿ ಇತ್ತು. ಸಂದೀಪ್ ರೆಡ್ಡಿ ಚಿಕ್ಕಬಳ್ಳಾಪುರದಲ್ಲಿ ಅಲೋಕ್ ಪರವಾಗಿ ವಿಶ್ವನಾಥ್ ನಡೆಸಿದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಸುಧಾಕರ್ ಅವರಿಗೆ ಟಿಕೆಟ್ ನೀಡಬಾರದು ಎನ್ನುವ ಕೆಲವು ರಾಜ್ಯ ನಾಯಕರ ಯತ್ನದ ನಡುವೆಯೂ ಸುಧಾಕರ್ ಟಿಕೆಟ್ ಪಡೆದರು. ಒಳ ಏಟುಗಳ ನಡುವೆಯೂ ಗೆಲುವು ಸಾಧಿಸಿದರು. ಇದೆಲ್ಲವೂ ಇತಿಹಾಸ.

ಆ ನಂತರ ಡಾ.ಕೆ.ಸುಧಾಕರ್ ವಿರೋಧಿ ತಂಡವು ಸಂದೀಪ್ ರೆಡ್ಡಿ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ನೋಡಿಕೊಂಡಿತು. ಈ ಬಗ್ಗೆ ಬಹಿರಂಗವಾಗಿ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿ, ವರಿಷ್ಠರಿಗೆ ದೂರು ನೀಡಿದರು. ಸಂದೀಪ್ ರೆಡ್ಡಿ ಸಹ ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವರಿಷ್ಠರು ಸಂದೀಪ್ ರೆಡ್ಡಿ ಆಯ್ಕೆ ತಡೆ ಹಿಡಿದರು. ಸೀಕಲ್ ರಾಮಚಂದ್ರಗೌಡ ಅವರಿಗೆ ಪಕ್ಷವು ಅಧ್ಯಕ್ಷ ಸ್ಥಾನ ನೀಡಿತು.

ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ನಂತರ ಬಿಜೆಪಿಯಲ್ಲಿನ ವಾತಾವರಣ ತಣ್ಣಗಾಯಿತು. ಈಗ ಮತ್ತೆ ಎಸ್‌.ಆರ್.ವಿಶ್ವನಾಥ್ ಮತ್ತು ಸಂದೀಪ್ ರೆಡ್ಡಿ ಮಾತುಗಳು ಬಿಜೆಪಿ ಪಾಳಯದಲ್ಲಿ ಚರ್ಚೆ ಹುಟ್ಟಿಸಿದೆ.

ಸಂದೀಪ್ ರೆಡ್ಡಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮೂಲಕ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗುವ ಇಚ್ಛೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಟಿಎಪಿಸಿಎಂಎಸ್ ಚುನಾವಣೆ, ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಮತ್ತು ಗೆಲ್ಲಿಸುವಲ್ಲಿ ಡಾ.ಕೆ.ಸುಧಾಕರ್ ಜವಾಬ್ದಾರಿ ಹೊತ್ತಿದ್ದರು. ಚಿಮುಲ್ ಚುನಾವಣೆಯಲ್ಲಿಯೂ ಅವರದೇ ಸಾರಥ್ಯ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಪಕ್ಷವು ಅವರ ನೇತೃತ್ವದಲ್ಲಿಯೇ ಮುನ್ನಡೆಯಲಿದೆ. ಹೀಗಿದ್ದರೂ ಟಿಕೆಟ್ ವಿಚಾರದಲ್ಲಿ ಮಾತ್ರ ಗುಲ್ಲು ಜೋರಾಗಿದೆ.

ದಳಪತಿಗಳ ನಿರ್ಧಾರವೂ ಪ್ರಮುಖ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವಷ್ಟೇ ಅಲ್ಲ ಜಿಲ್ಲೆಯಲ್ಲಿ ಜೆಡಿಎಸ್ ರಾಜಕೀಯವಾಗಿ ಪ್ರಬಲವಾಗಿದೆ. ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿ ಚಿಂತಾಮಣಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಇದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆ ಇದೆ.  ಆಗ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ದಳಪತಿಗಳ ನಿರ್ಧಾರವು ಸಹ ಪ್ರಮುಖವಾಗಲಿದೆ. ಸದ್ಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರು ಎನ್‌ಡಿಎ ಮೈತ್ರಿಕೂಟದಡಿ ಡಾ.ಕೆ. ಸುಧಾಕರ್ ನೇತೃತ್ವದಲ್ಲಿಯೇ ಸ್ಥಳೀಯ ಚುನಾವಣೆಗಳನ್ನು ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.