ADVERTISEMENT

ಚಿಕ್ಕಬಳ್ಳಾಪುರ | ಬಜಾರ್ ರಸ್ತೆ: ವಿಸ್ತರಣೆಯೊ...ಗುರುತಿಗೆ ಸೀಮಿತವೊ?

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:53 IST
Last Updated 25 ಜುಲೈ 2025, 4:53 IST
ಚಿಕ್ಕಬಳ್ಳಾಪುರದ ಬಜಾರ್ ರಸ್ತೆ ವಿಸ್ತರಣೆಗೆ ಗುರುತು ಹಾಕಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ
ಚಿಕ್ಕಬಳ್ಳಾಪುರದ ಬಜಾರ್ ರಸ್ತೆ ವಿಸ್ತರಣೆಗೆ ಗುರುತು ಹಾಕಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಾಣಿಜ್ಯ ವಹಿವಾಟಿನ ಪ್ರಮುಖ ಮಾರ್ಗಗಳು ಎನಿಸಿರುವ ಬಜಾರ್ ರಸ್ತೆ ಮತ್ತು ಗಂಗಮ್ಮನಗುಡಿ ರಸ್ತೆ ವಿಸ್ತರಣೆಯ ವಿಚಾರವು ದಶಕಗಳಿಂದಲೂ ಚರ್ಚೆಯಲ್ಲಿ ಇದೆ. ರಾಜಕೀಯ ಜಟಾಪಟಿಗೂ ಕಾರಣವಾಗಿದೆ. 

ಈಗ ನಗರಸಭೆಯು ಮತ್ತೆ ಎರಡೂ ರಸ್ತೆಗಳ ವಿಸ್ತರಣೆಗೆ ಗುರುತು ಹಾಕಲು ಮುಂದಾಗಿದೆ. ಗುರುವಾರ ಬಜಾರ್ ರಸ್ತೆಯಲ್ಲಿ ಗುರುತು ಕಾರ್ಯ ನಡೆಯಿತು. ಖುದ್ದು ನಗರಸಭೆ ‍ಪೌರಾಯುಕ್ತ ಮನ್ಸೂರ್ ಅಲಿ ಅವರೇ ಹಾಜರಿದಿದ್ದು ವಿಶೇಷವಾಗಿತ್ತು. ಈ ಗುರುತು ಕಾರ್ಯದ ಬಗ್ಗೆ ತಿಳಿದ ವರ್ತಕರು, ನಾಗರಿಕರು ಕುತೂಹಲದಿಂದ ವೀಕ್ಷಿಸಿದರು. 

ಬಜಾರ್ ರಸ್ತೆಯ ನಡುವೆಯಿಂದ ಎಡ ಮತ್ತು ಬಲ ಬದಿಗೆ ತಲಾ 30 ಅಡಿ ಗುರುತು ಮಾಡಲಾಗಿದೆ. ಇದು ಬರಿ ಗುರುತಿಗೆ ಸೀಮಿತವಾಗುತ್ತದೆಯೊ ಅಥವಾ ಈ ಬಾರಿಯಾದರೂ ವಿಸ್ತರಣೆ ಆಗುತ್ತದೆಯೇ ಎನ್ನುವ ಚರ್ಚೆ ನಗರದಲ್ಲಿ ಜೋರಾಗಿತ್ತು. 

ADVERTISEMENT

ಎರಡೂ ರಸ್ತೆಗಳ ವಿಸ್ತರಣೆ ಹೆಸರಿನಲ್ಲಿ ಈಗಾಗಲೇ ಹಲವು ಬಾರಿ ನಗರಸಭೆ ಗುರುತು ಹಾಕಿದೆ. ‘ನಿಮ್ಮಲ್ಲಿರುವ ದಾಖಲೆ ಸಲ್ಲಿಸಿ’ ಎಂದು ಸುಮಾರು 300 ಆಸ್ತಿಗಳ ಮಾಲೀಕರಿಗೆ ನೋಟಿಸ್ ಸಹ ನೀಡಿತ್ತು. ಕೆಲವು ಮಾಲೀಕರು ದಾಖಲೆಗಳನ್ನು ಸಹ ಸಲ್ಲಿಸಿದ್ದರು.

ರಸ್ತೆ ವಿಸ್ತರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಹ ಮಾಡಿದ್ದರು. ಮತ್ತೊಂದು ಕಡೆ ವರ್ತಕರು, ಆಸ್ತಿಗಳ ಮಾಲೀಕರು ವಿಸ್ತರಣೆ ವಿರೋಧಿಸಿ ಸಭೆಗಳನ್ನು ನಡೆಸಿದ್ದರು.

ಆದರೆ ಪ್ರಕ್ರಿಯೆಗಳು ಮಾತ್ರ ಮುಂದುವರಿಯಲೇ ಇಲ್ಲ. ವಿಸ್ತರಣೆಗೂ ಕಾಲಕೂಡಲಿಲ್ಲ. ಈಗ ಇದು ಮತ್ತೊಂದು ಹೊಸ ಪ್ರಹಸನವೇ ಅಥವಾ ವಿಸ್ತರಣೆ ಖಚಿತವೇ ಎನ್ನುವ ಚರ್ಚೆಗಳು ಜೋರಾಗಿವೆ.

ಪೌರಾಯುಕ್ತರು ಹೇಳಿದ್ದೇನೆ: ‘ಬಜಾರ್ ಮತ್ತು ಗಂಗಮ್ಮನಗುಡಿ ರಸ್ತೆ ನಗರದ ಪ್ರಮುಖ ರಸ್ತೆಗಳಾಗಿವೆ. ಈ ರಸ್ತೆಗಳನ್ನು ವಿಸ್ತರಿಸಬೇಕು ಎನ್ನುವುದು ನಾಗರಿಕರ ಬಹುದಿನಗಳ ಬೇಡಿಕೆ ಎಂದು ಪೌರಾಯುಕ್ತ ಮನ್ಸೂರ್ ಅಲಿ ತಿಳಿಸಿದರು. 

ರಸ್ತೆ ವಿಸ್ತರಣೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ಬಳಿ ಅನುದಾನ ಲಭ್ಯವಿದೆ. ವಿಸ್ತರಣೆಯ ಬಗ್ಗೆ ಪರಿಶೀಲಿಸಿ ಕ್ರಮವಹಿಸಿ ಎಂದು ಶಾಸಕರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿದೆ. ವಿಸ್ತರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಬಿ.ಬಿ ರಸ್ತೆಗೆ ಹೊಂದಿಕೊಂಡಿರುವ ಬಜಾರ್ ರಸ್ತೆಯು 60 ಅಡಿ ಇದೆ. ಆದರೆ ನಂತರ ನಗರಸಭೆಯ ಕಡೆ ಬರುವ ರಸ್ತೆಯು 8ರಿಂದ 9 ಮೀಟರ್ ಇದೆ. ಏಕೆ ಕಿರಿದಾಯಿತು ಎಂದು ಪರಿಶೀಲಿಸಲಾಗುತ್ತಿದೆ. ರಸ್ತೆಯ ಎರಡೂ ಕಡೆ ಸೇರಿ 60 ಅಡಿಗೆ ಗುರುತು ಹಾಕಲಾಗಿದೆ. ಇಲ್ಲಿ ನಗರಸಭೆಯ ಜಾಗ ಇದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದರು.

ನಗರಸಭೆಗೆ ಸೇರಿದ ಜಾಗ ಒತ್ತುವರಿ ಆಗಿದ್ದರೆ ತೆರವುಗೊಳಿಸುತ್ತೇವೆ. ಖಾಸಗಿ ಕಟ್ಟಡ ನಿರ್ಮಿಸಬೇಕಾದರೆ ರಸ್ತೆ, ವಾಹನ ನಿಲುಗಡೆಗೆ ಜಾಗ ಬಿಡಬೇಕು. ಆ ಜಾಗ ಬಿಟ್ಟು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆಯಬೇಕು. ಸೆಟ್ ಬ್ಯಾಕ್ ಬಿಡಬೇಕು. ನಿಯಮಗಳು ಉಲ್ಲಂಘನೆ ಆಗಿದ್ದರೆ ಕಾನೂನು ‍ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು. 

ದಾಖಲೆಗಳ ಪರಿಶೀಲನೆ ನಂತರ ಒತ್ತುವರಿ ಆಗಿದೆಯೇ ಇಲ್ಲವೆ ಎನ್ನುವುದು ಖಚಿತವಾಗಲಿದೆ. ಎಲ್ಲರಿಗೂ ಕಾನೂನು ಬದ್ಧವಾಗಿ ನೋಟಿಸ್ ನೀಡುತ್ತೇವೆ. ನಿಯಮಗಳು ‌ಉಲ್ಲಂಘನೆ ಆಗದಿದ್ದರೆ ಕಟ್ಟಡಗಳ ಮಾಲೀಕರ ಜೊತೆ ಮಾತುಕತೆ ನಡೆಸುತ್ತೇವೆ. ಎಷ್ಟು ಕಟ್ಟಡಕ್ಕೆ ಹಾನಿ ಆಗುತ್ತದೆಯೊ ಕಾನೂನು ಪ್ರಕಾರ ಪರಿಹಾರ ನೀಡುತ್ತೇವೆ. ಈ ಬಗ್ಗೆ ಕಟ್ಟಡಗಳ ಮಾಲೀಕರ ಜೊತೆ ಸಭೆ ಸಹ ಮಾಡುತ್ತೇವೆ ಎಂದರು.  

ಈ ಹಿಂದೆ ಕೆಲಸ ಮಾಡಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗ ಇಲ್ಲ. ಹಿಂದಿನವರು ಎಲ್ಲಿ ಗುರುತು ಮಾಡಿದ್ದಾರೆಯೊ ಗೊತ್ತಿಲ್ಲ. ಒತ್ತುವರಿ ಆಗಿದೆ, ಆಗಿಲ್ಲ ಎಂದು ಕುರುಡಾಗಿ ಹೇಳಲು ಸಾಧ್ಯವಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗಿದೆ. ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದರು.  

‘ಕಾನೂನು ರೀತಿ ಕ್ರಮ; ಸಹಕರಿಸಿ

ಈ ಹಿಂದೆಯೂ ನಗರಸಭೆಯು ಈ ರಸ್ತೆಗಳ ವಿಸ್ತರಣೆಗೆ ಗುರುತು ಹಾಕಿತ್ತು. ಹೀಗೆ ಮಾಡಿದ ನಗರಸಭೆಯ ಕೆಲವು ಅಧಿಕಾರಿಗಳು ವರ್ಗಾವಣೆಯಾದರೂ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ಮನ್ಸೂರ್ ಅಲಿ ‘ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಲಾಗುವುದು. ಕಾನೂನು ಬಿಟ್ಟು ನಡೆದರೆ ಯಾರೂ ಸಹಕಾರ ನೀಡುವುದಿಲ್ಲ’ ಎಂದರು. ನಗರಸಭೆ ಅನುಕೂಲಕ್ಕೆ ಮಾಡುತ್ತಿಲ್ಲ. ಗ್ರಾಹಕರು ವ್ಯಾಪಾರಿಗಳು ನಾಗರಿಕರು ಹೀಗೆ ಎಲ್ಲ ವರ್ಗದ ಜನರಿಗೆ ಒಳಿತಾಗಲಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುಂದುವರಿಯುತ್ತೇವೆ ಎಂದು ಹೇಳಿದರು. 

‘6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ’

ದಾಖಲೆ ಪರಿಶೀಲನೆ ಒತ್ತುವರಿ ತೆರವು ಕಟ್ಟಡಗಳ ಮಾಲೀಕರ ಜೊತೆ ಸಭೆ ಕ್ರಿಯಾ ಯೋಜನೆ ತಯಾರಿ ಟೆಂಡರ್ ಕಾರ್ಯಾದೇಶ ಹೀಗೆ  ವಿಸ್ತರಣೆ ಪ್ರಕ್ರಿಯೆಗಳಿಗೆ ಕನಿಷ್ಠ ಆರು ತಿಂಗಳು ಅಗತ್ಯವಿದೆ ಎಂದು ಪೌರಾಯುಕ್ತರು ತಿಳಿಸಿದರು. ವಿಸ್ತರಣೆಗೆ ಸುಮಾರು ₹7 ಕೋಟಿಯಿಂದ ₹8 ಕೋಟಿ ಅನುದಾನ ಅಗತ್ಯವಿದೆ. ಈ ರಸ್ತೆಗಳಲ್ಲಿನ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಭೂಗತ ಕೇಬಲ್ ಅಳವಡಿಸಲಾಗುವುದು. ಮುಂದಿನ 50ರಿಂದ 60 ವರ್ಷಗಳ ಕಾಲ ಯಾವುದೇ ರೀತಿಯ ಸಮಸ್ಯೆ ಆಗದಂತೆ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.