ADVERTISEMENT

ಗಡಿಭಾಗದಲ್ಲಿ ಕನ್ನಡ ಬೆಳವಣಿಗೆ ಕುಂಠಿತ

ನೇಮಕವಾಗದ ಕನ್ನಡ ಜಾಗೃತಿ ಸಮಿತಿಗಳು

ಎಂ.ರಾಮಕೃಷ್ಣಪ್ಪ
Published 9 ಸೆಪ್ಟೆಂಬರ್ 2022, 3:07 IST
Last Updated 9 ಸೆಪ್ಟೆಂಬರ್ 2022, 3:07 IST

ಚಿಂತಾಮಣಿ: ಗಡಿ ಭಾಗದ ಗ್ರಾಮಗಳಲ್ಲಿಭಾಷೆ ಉಳಿಸಿ ಬೆಳೆಸಬೇಕಾದ ಕನ್ನಡ ಜಾಗೃತಿ ಸಮಿತಿ ಇನ್ನೂ ರಚನೆಯಾಗದೇ ಭಾಷೆ ಬೆಳೆವಣಿಗೆ ಕುಂಠಿತವಾಗಿದೆ.

ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಡಿಭಾಗ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮೇಲ್ವಿಚರಣೆಗಾಗಿ ‘ಕನ್ನಡ ಜಾಗೃತಿ ಸಮಿತಿ’ ರಚಿಸಬೇಕು. ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲೂ ಕನ್ನಡ ಜಾಗೃತಿ ಸಮಿತಿ ರಚಿಸಿ, ಕನಿಷ್ಟ ಪ್ರತಿ 3 ತಿಂಗಳಿಗೊಮ್ಮೆ ಸಭೆ ಸೇರಿ ಪರಿಶೀಲನೆ ನಡೆಸಬೇಕುಎಂದು ರಾಜ್ಯ ಸರ್ಕಾರವು 1997ರಲ್ಲೇ ಆದೇಶ ಹೊರಡಿಸಿದೆ. ಆದರೆ, ತಾಲ್ಲೂಕಿನಲ್ಲಿ ಯಾವ ಸಮಿತಿಯ ರಚನೆ ಆಗಿಲ್ಲ. ಜಿಲ್ಲಾ ಮಟ್ಟದಲ್ಲೂ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಇದರಿಂದ ಕನ್ನಡದ ಚಟುವಟಿಕೆಗಳು ಗೌಣವಾಗುತ್ತಿವೆ ಎಂಬ ಆಕ್ಷೇಪವನ್ನು ಗಡಿನಾಡಿನ ಕನ್ನಡಿಗರು ಎತ್ತಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚಿಸಲು ಯಾವ ಕ್ರಮವನ್ನೂ ಕೈ ಗೊಂಡಿಲ್ಲ. ಪ್ರಾಧಿಕಾರ ಅದಷ್ಟು ಬೇಗ ಸಮಿತಿ ರಚನೆ ಮಾಡಿ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಂತಾಮಣಿ ತಾಲ್ಲೂಕಿನಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದ್ದು, ಕನ್ನಡ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿಗಳ ರಚನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.ಈ ನಿಟ್ಟಿನಲ್ಲಿ ಕೂಡಲೇ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿ ರಚಿಸಬೇಕು ಎನ್ನುತ್ತಾರೆ ಸಾಹಿತಿ ಕೆ.ಎಸ್.ನೂರುಲ್ಲಾ.

ತಾಲ್ಲೂಕು ಹಾಗೂ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿ ಆಗುತ್ತಿದೆಯೇ? ರಾಷ್ಟ್ರೀಕೃತ ಬ್ಯಾಂಕುಗಳು, ಅಂಚೆಕಚೇರಿಗಳು, ರೈಲು ನಿಲ್ದಾಣಗಳಲ್ಲಿ ಕನ್ನಡ ಬಳಕೆ ಆಗುತ್ತಿದೆಯೇ? ಅಂಗಡಿ ಮುಂಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಖಾಸಗಿ ಬ್ಯಾಂಕ್ ಮತ್ತಿತರ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ದೊರೆತಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸಬೇಕು. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಪೂರಕವಾಗಿ ಸದಸ್ಯರು ಕೆಲಸ ಮಾಡಬೇಕು. ಲೋಪದೋಷಗಳು ಕಂಡುಬಂದರೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂಬುದು ನಿಯಮದಲ್ಲಿ
ಇದೆ.

ಚಿಂತಾಮಣಿ ತಾಲ್ಲೂಕಿನ ಅಂಚೆ ಕಚೇರಿಗಳಲ್ಲಿ, ಬ್ಯಾಂಕ್ ಶಾಖೆಗಳಲ್ಲಿ ಕನ್ನಡ ಭಾಷೆ ಸಂಪೂರ್ಣವಾಗಿ ಮಾಯವಾಗಿದೆ. ಬ್ಯಾಂಕಿನ ವ್ಯವಹಾರ ಸಂಪೂರ್ಣ ಹಿಂದಿ ಮತ್ತು ಇಂಗ್ಲಿಷ್‌ಮಯವಾಗಿದೆ.

ಕನ್ನಡ ಜಾಗೃತಿ ಸಮಿತಿಗಳು ರಚನೆಯಾಗಿದ್ದರೆ ಭಾಷೆ, ನಾಡು, ನುಡಿಯ ಕೆಲಸಗಳನ್ನು ಕ್ರಿಯಾಶೀಲಗೊಳಿಸಬಹುದು. ತಾಲ್ಲೂಕಿನಲ್ಲಿ ಎದುರಿಸುತ್ತಿರುವ ಭಾಷೆ, ಗಡಿಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಸಬಹುದು. ಪರಿಹಾರಕ್ಕಾಗಿ ಸೂಕ್ತ ವರದಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಬಹುದು.

‘ಕರ್ತವ್ಯ ಮರೆತ ಸಂಸ್ಥೆಗಳು’

‘ಕನ್ನಡ ಭಾಷೆ, ಗಡಿ ನಾಡು ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ತಮ್ಮ ಕರ್ತವ್ಯ ಮರೆತು ತಮ್ಮ ವೈಯುಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿವೆ. ಪ್ರಾಧಿಕಾರದ ಅಧ್ಯಕ್ಷರು ಸರ್ಕಾರದಿಂದ ಸಚಿವ ಸ್ಥಾನಮಾನ ಪಡೆಯುವ ಕಾರ್ಯಗಳಲ್ಲೇ ಮಗ್ನರಾಗಿರುವಂತಿದೆ’ ಎಂದು ಅವರುಸಾಹಿತಿ ಕೆ.ಎಸ್.ನೂರುಲ್ಲಾ ವಿಷಾದ ವ್ಯಕ್ತಪಡಿಸಿದರು.

ಮಾಹಿತಿ ತಿಳಿಯದ ಕಸಾಪ ಪದಾಧಿಕಾರಿಗಳು

ಕನ್ನಡ ಪರ ಕೆಲಸ ಮಾಡಬೇಕಾದ ಕನ್ನಡ ಸಾಹಿತ್ಯ ಪರಿಷತ್‌ನ ಅಧಿಕಾರಿಗಳಿಗೆ ಕನ್ನಡ ಜಾಗೃತಿ ಸಮಿತಿಯ ಬಗ್ಗೆ ಮಾಹಿತಿ ಇಲ್ಲದಂತಾಗಿದೆ.

ಕನ್ನಡ ಅನುಷ್ಠಾನ ಪರಿಶೀಲಿಸುವ ತಾಲ್ಲೂಕು ಮಟ್ಟದ ಕನ್ನಡ ಜಾಗೃತಿ ಸಮಿತಿ ರಚನೆಯಾಗಿಲ್ಲ. ಈ ಬಗ್ಗೆ ನಮಗೂ ಯಾವುದೇ ಮಾಹಿತಿ ಇಲ್ಲ ಎನ್ನುವ ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಕೋಡಿರಂಗಪ್ಪ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ದೇವತಾ ದೇವರಾಜ್‌, ಕನ್ನಡ ಉಳಿಸಿ ಬೆಳೆಸಲು ಸರ್ಕಾರ ಸಮಿತಿ ರಚಿಸಬೇಕು. ಇದಕ್ಕೆ ನಮ್ಮ ಸಂರ್ಪೂಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.