ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯು ಗೊಂದಲದ ಗೂಡಾಯಿತು.
ಸಭೆಗೆ ಕೆಲ ದಲಿತ ಮುಖಂಡರು ಬಹಿಷ್ಕಾರ ಹಾಕಿ ಹೊರ ನಡೆದರೆ, ಸಭೆಯಲ್ಲಿ ಹಾಜರಿದ್ದವರ ಸಮಸ್ಯೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಆಲಿಸಿದರು. ಪರಿಹಾರ ನೀಡುವ ಭರವಸೆ ನೀಡಿದರು.
ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮುಖಂಡರು ಬಹಿಷ್ಕಾರ ಹಾಕಿದ ಪರಿಣಾಮ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಸಭೆಯಲ್ಲಿದ್ದವರ ಸಮಸ್ಯೆ ಆಲಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತು.
ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸಭೆಯಿಂದ ವಾಪಸ್ ಹೋದವರು ನಮ್ಮನ್ನು ಸಂಪರ್ಕಿಸಿ, ಅವರ ಸಮಸ್ಯೆ ಏನು ಎಂದು ಹೇಳಿಲ್ಲ. ಬಂದವರ ಸಮಸ್ಯೆ ಆಲಿಸಿದ್ದೇವೆ. ವಾಪಸ್ ಹೋದವರು ಸಮಸ್ಯೆ ಹೇಳಿದರೆ ಅವರ ಸಮಸ್ಯೆಯನ್ನೂ ಬಗೆಹರಿಸಲು ಶ್ರಮಿಸಲಾಗುವುದು ಎಂದರು.
ಈ ಸಭೆ ಇಂದಿಗೆ ಮಾತ್ರ ಸೀಮಿತವಲ್ಲ. ನಿರಂತರವಾಗಿ ನಡೆಯಲಿದೆ. ಯಾರಿಗೆ ಸಮಸ್ಯೆ ಇದೆ ಅವರು ಬಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಯಾರಿಗೆ ಸಮಸ್ಯೆ ಇಲ್ಲ ಅವರು ಸಭೆ ಬಹಿಷ್ಕರಿಸಿದ್ದಾರೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಡಿಸಿಆರ್ ಠಾಣೆ ಆರಂಭಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿಯೂ ಡಿಸಿಆರ್ ಠಾಣೆಯನ್ನು ಬೆಸ್ಕಾಂ ಕಚೇರಿಯ ಪಕ್ಕದ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿದೆ. ಡಿಸಿಆರ್ ಠಾಣೆಯಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ತನಿಖೆ ನಡೆಯುತ್ತಿವೆ ಎಂದು ಹೇಳಿದರು.
ಯಾವ ಪ್ರಕರಣಗಳು ನ್ಯಾಯಾಲಯದಲ್ಲಿವೆ ಅವುಗಳ ಪರಿಹಾರ ನಮ್ಮಿಂದ ಸಾಧ್ಯವಿಲ್ಲ. ನಮ್ಮಿಂದ ಆಗುವ ಎಲ್ಲ ವಿಚಾರಗಳಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಕುಂದುಕೊರತೆ ಸಭೆಯಲ್ಲಿ ಜಮೀನು ವಿವಾದ, ಹಳೆಯ ಪ್ರಕರಣಗಳಲ್ಲಿ ಅಟ್ರಾಸಿಟಿ ಆಗಿಲ್ಲ ಅಂತ ದೂರಿದ್ದಾರೆ, ಜನರ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ, ನಮ್ಮಿಂದ ಪರಿಹಾರ ಸಾಧ್ಯವಾದರೆ ನಾವು ಪರಿಹರಿಸುತ್ತೇವೆ, ಬೇರೆ ಇಲಾಖೆಗಳ ಸಮಸ್ಯೆ ಇದ್ದರೆ ಆ ಇಲಾಖೆಗಳಿಗೆ ದೂರು ವರ್ಗಾಯಿಸುತ್ತೇವೆ ಎಂದು ಹೇಳಿದರು.
ಚಿಂತಾಮಣಿ ಸಭೆ
200 ಮಂದಿ ಭಾಗಿ ಕಳೆದ ವಾರ ಚಿಂತಾಮಣಿಯಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಹಿಂದೆಯೇ ಕುಂದುಕೊರತೆ ಸಭೆ ಕರೆಯಲಾಗಿತ್ತು. ಆದರೆ ಅಂದು ಮತ್ತೊಂದು ಸಭೆ ಇದ್ದ ಕಾರಣ ಮತ್ತೊಂದು ದಿನ ಸಭೆ ನಡೆಸುವಂತೆ ಕೋರಿದ್ದರು. ಆದ ಕಾರಣ ಸಭೆ ಆಯೋಜಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.