ADVERTISEMENT

ಚಿಕ್ಕಬಳ್ಳಾಪುರ ಊರಿಗೆ ಚರಂಡಿಗಳೇ ಮಾರಕ!

ಅವೈಜ್ಞಾನಿಕ ಚರಂಡಿ ನಿರ್ಮಾಣದ ಆರೋಪ, ಚಲಕಾಯಲಪರ್ತಿ ಗ್ರಾಮದಲ್ಲಿ ನಡುವೆಯೇ ಮಡುಗಟ್ಟಿ ನಿಲ್ಲುವ ಮಳೆ ನೀರು

ಈರಪ್ಪ ಹಳಕಟ್ಟಿ
Published 9 ಅಕ್ಟೋಬರ್ 2019, 19:45 IST
Last Updated 9 ಅಕ್ಟೋಬರ್ 2019, 19:45 IST
ಚಲಕಾಯಲಪರ್ತಿ ಗ್ರಾಮದ ನಡುವೆ ಮಡುಗಟ್ಟಿ ನಿಂತ ನೀರಿನಿಂದಾಗಿ ಜನರು ಟ್ಯಾಂಕ್‌ನಲ್ಲಿ ನೀರು ಹಿಡಿದುಕೊಳ್ಳಲು ಹರಸಾಹಸ ಮಾಡಬೇಕಾಗಿದೆ.
ಚಲಕಾಯಲಪರ್ತಿ ಗ್ರಾಮದ ನಡುವೆ ಮಡುಗಟ್ಟಿ ನಿಂತ ನೀರಿನಿಂದಾಗಿ ಜನರು ಟ್ಯಾಂಕ್‌ನಲ್ಲಿ ನೀರು ಹಿಡಿದುಕೊಳ್ಳಲು ಹರಸಾಹಸ ಮಾಡಬೇಕಾಗಿದೆ.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಲಕಾಯಲಪರ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಜೋರು ಮಳೆಗೆ ಊರಿನ ನಡು ಭಾಗದಲ್ಲಿಯೇ ದಿಢೀರ್ ಚಿಕ್ಕದೊಂದು ಕೆರೆ ಸೃಷ್ಟಿಯಾಗಿ ಸ್ಥಳೀಯರನ್ನು ಸಮಸ್ಯೆಯ ಕಡಲಿಗೆ ನೂಕಿದೆ.

ತುಸು ಆಶ್ಚರ್ಯ ಎನಿಸಿದರೂ ಇದು ಸತ್ಯ! ಕಳೆದ ಬೇಸಿಗೆಯಲ್ಲಿ ಚಲಕಾಯಲಪರ್ತಿಯಲ್ಲಿ ಕೈಗೊಂಡ ಚರಂಡಿ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಚರಂಡಿಗಳು ನೀರನ್ನು ಊರಿನಿಂದ ಹೊರಕ್ಕೆ ಹಾಕುವ ಬದಲು, ಗ್ರಾಮದ ಸುತ್ತಮುತ್ತಲ ನೀರನ್ನು ಸಹ ಗ್ರಾಮದ ಒಳಗೆ ಹರಿಸಿ ಆಂಜನೇಯ ದೇವಾಲಯ ಮುಂಭಾಗದ ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಲ್ಲುವಂತೆ ಮಾಡುತ್ತಿವೆ ಎನ್ನುವುದು ಗ್ರಾಮಸ್ಥರ ಆರೋಪ.

ಕೇವಲ 52 ಕುಟುಂಬಗಳಿರುವ ಈ ಗ್ರಾಮ ಅನೇಕ ವರ್ಷಗಳಿಂದ ಮೂಲಸೌಕರ್ಯಗಳಿಂದ ವಂಚಿತವಾಗಿತ್ತು. ಕಳೆದ ವರ್ಷವಷ್ಟೇ ಬಹುಪಾಲು ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಟ್ಟ ವೇಳೆ ಜನರು ಇನ್ನಾದರೂ ನಮ್ಮ ಬವಣೆ ಕಳೆಯಿತು ಎಂದೇ ಸಂತಸಪಟ್ಟಿದ್ದರು. ಆದರೆ ಇದೀಗ ಊರಿನ ಮಧ್ಯೆಯೇ ದೊಡ್ಡ ಹೊಂಡ ನಿರ್ಮಾಣವಾಗುತ್ತಿರುವುದು ಗ್ರಾಮಸ್ಥರಿಗೆ ಹೊಸ ತಲೆ ನೋವು ಉಂಟು ಮಾಡುತ್ತಿದೆ.

ADVERTISEMENT

ಈ ಹಿಂದೆ ಚರಂಡಿ ಕಾಮಗಾರಿ ನಡೆಯುವ ವೇಳೆ ಮುಂದೆ ಆಗಬಹುದಾದ ಅನಾಹುತ ಊಹಿಸಿ ಗ್ರಾಮಸ್ಥರು ಕಾಮಗಾರಿ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಅದಕ್ಕೆ ಕಿವಿಗೊಡದ ಗುತ್ತಿಗೆದಾರರು ಸ್ಥಳೀಯ ರಾಜಕಾರಣಿಗಳ ಪ್ರಭಾವ ಬಳಿಸಿ ಪೂರ್ಣಗೊಳಿಸಿದರು. ದುರಂತ ಎಂದರೆ ಇಂತಹ ಅವೈಜ್ಞಾನಿಕ ಕಾಮಗಾರಿಗೆ ಸರ್ಕಾರಿ ಎಂಜಿನಿಯರ್‌ಗಳು ಕಣ್ಮುಚ್ಚಿ ಬಿಲ್‌ ಪಾವತಿಸಲು ಕ್ರಮಕೈಗೊಂಡರು ಎನ್ನುವುದು ಗ್ರಾಮಸ್ಥರ ಆರೋಪ.

‘ಚರಂಡಿಗಳು ಮಳೆ ನೀರನ್ನು ಹೊರಗೆ ಸಾಗಿಸಿ ಊರು ಸ್ವಚ್ಛವಾಗಿಡಬೇಕು. ಆದರೆ ನಮ್ಮೂರಲ್ಲಿ ಚರಂಡಿಗಳು ನೀರು ಸಾಗಿಸದಷ್ಟು ಎತ್ತರದಲ್ಲಿವೆ. ಗುತ್ತಿಗೆದಾರರು ಬೇಕಾಬಿಟ್ಟಿ ಚರಂಡಿ ನಿರ್ಮಿಸಿದ್ದಾರೆ. ಕಾಮಗಾರಿಯನ್ನು ಕೂಡ ಅರ್ಧಕ್ಕೆ ಬಿಟ್ಟಿದ್ದಾರೆ. ಹೀಗಾಗಿ ಜೋರಾಗಿ ಮಳೆ ಸುರಿದರೆ, ಊರ ನಡುವೆ ಕೊಂಚೆ ಗುಂಡಿ ನಿರ್ಮಾಣವಾಗಿ ಜನರ ನೆಮ್ಮದಿ ಕಳೆಯುತ್ತಿದೆ’ ಎಂದು ಸ್ಥಳೀಯ ನಿವಾಸಿ ಚಿಕ್ಕ ನರಸಿಂಹಪ್ಪ ಹೇಳಿದರು.

‘ಕಳೆದ ವಿಧಾನಸಭೆ ಚುನಾವಣಾ ಸಮಯದಲ್ಲಿ ಶಾಸಕ ಸುಧಾಕರ್ ಅವರಿಗೆ ಈ ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಚಿಕ್ಕಬಳ್ಳಾಪುರವನ್ನು ಸಿಂಗಾಪೂರ ಮಾಡುವ ಒತ್ತಡದ ಕೆಲಸದಲ್ಲಿ ಸುಧಾಕರ್ ಅವರು ಬಹುಶಃ ಗ್ರಾಮಗಳ ಇಂತಹ ಸಮಸ್ಯೆಗಳನ್ನು ಮರೆತಿರಬಹುದೇನೋ’ ಎನ್ನುತ್ತಾರೆ ‘ಉಸಿರಿಗಾಗಿ ಹಸಿರು’ ಸಂಘಟನೆಯ ಟ್ರಸ್ಟಿ ಎನ್.ಗಂಗಾಧರ್ ರೆಡ್ಡಿ.

‘ಚಲಕಾಯಲಪರ್ತಿ ಸಮಸ್ಯೆ ಕುರಿತಂತೆ ಪಿಡಿಒ ಅವರನ್ನು ವಿಚಾರಿಸಿದರೆ ಕಳೆದ ಮೂರು ತಿಂಗಳಿಂದ ಗುಂಡಿ ಮುಚ್ಚಿ ಸಮಸ್ಯೆ ಸರಿಪಡಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಈವರೆಗೆ ಆ ಕೆಲಸ ನಡೆದಿಲ್ಲ. ಇನ್ನಷ್ಟು ಜೋರು ಮಳೆಯಾದರೆ ಊರಿನ ಕೆರೆ ಕಟ್ಟೆ ಒಡೆಯುವ ಸಾಧ್ಯತೆ ಇದೆ. ಆದರೂ ಅಧಿಕಾರಿಗಳು ಜಾಣ ಕುರುಡು, ಕಿವುಡು ಪ್ರದರ್ಶನ ತೋರುತ್ತಿರುವುದು ಬೇಸರ ಮೂಡಿಸಿದೆ’ ಎಂದು ತಿಳಿಸಿದರು.

**

ಶೀಘ್ರದಲ್ಲಿಯೇ ಚಲಕಾಯಲಪರ್ತಿ ಗ್ರಾಮದ ನಡುವಿನ ತಗ್ಗು ಪ್ರದೇಶ ಮುಚ್ಚಲು ಕ್ರಮಕೈಗೊಂಡು ಸಮಸ್ಯೆ ಬಗೆಹರಿಸುತ್ತೇವೆ.
- ಆಶಾ, ದಿಬ್ಬೂರು ಗ್ರಾಮ ಪಂಚಾಯಿತಿ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.