
ಚೇಳೂರು: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮತ್ತು ಮುಖ್ಯವಾಗಿ ದಲಿತ ಕಾಲೊನಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.
ಅಭಿವೃದ್ಧಿ ಹೆಸರಿನಲ್ಲಿ ಬಿಡುಗಡೆಯಾದ ಹಣವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೇಬು ಸೇರುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಗ್ರಾಮದ ದಲಿತ ಕಾಲೊನಿಗಳ ಚರಂಡಿಗಳು ಕೊಳಚೆಯಿಂದ ತುಂಬಿ ಹರಿಯುತ್ತಿದ್ದರೂ ಆರು ತಿಂಗಳಿಂದ ಒಮ್ಮೆಯೂ ಸ್ವಚ್ಛಗೊಳಿಸಿಲ್ಲ. ಚರಂಡಿಗಳು ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು, ಇನ್ನಿತರ ತ್ಯಾಜ್ಯ ಮತ್ತು ಗಿಡಗಂಟಿಗಳಿಂದ ಸಂಪೂರ್ಣವಾಗಿ ತುಂಬಿವೆ.
ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲೇ ಮಡುಗಟ್ಟಿದೆ. ತೀವ್ರ ದುರ್ವಾಸನೆ ಬೀರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಮತ್ತು ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸ್ವಚ್ಛತೆಯ ಕೊರತೆಯಿಂದಾಗಿ ಗ್ರಾಮಸ್ಥರ ಆರೋಗ್ಯಕ್ಕೆ ಅಪಾಯ ಎದುರಾಗಿದೆ. ನಿಂತಿರುವ ಕೊಳಚೆ ನೀರಿನಲ್ಲಿ ಕೀಟಗಳ ಲಾರ್ವಾಗಳು (ಹುಳುಗಳು) ವಿಪರೀತವಾಗಿ ಸೃಷ್ಟಿಯಾಗಿವೆ. ಸೊಳ್ಳೆ ಮತ್ತು ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ.
ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಮಾಕಲಪಲ್ಲಿ ಗ್ರಾಮದಲ್ಲಿ ಕಳಪೆ ಚರಂಡಿ ಕಾಮಗಾರಿಯೊಂದು ಬೆಳಕಿಗೆ ಬಂದಿದೆ. ಚರಂಡಿ ಕಾಮಗಾರಿಗೆ ₹ 80,000ಕ್ಕೂ ಹೆಚ್ಚಿನ ಹಣ ಡ್ರಾ ಮಾಡಿಕೊಳ್ಳಲಾಗಿದ್ದರೂ, ಗುಣಮಟ್ಟ ಕಾಯ್ದುಕೊಂಡಿಲ್ಲ.
ಕಾಮಗಾರಿಗೆ ಯಾವುದೇ ಕಂಬಿಗಳನ್ನು ಬಳಸದೆ ಕೇವಲ ನಾಮಕಾವಸ್ತೆ ಗೆ ಇಟ್ಟಿಗೆಗಳಿಂದ ಗೋಡೆಯ ರೀತಿ ಕಟ್ಟಿ ಕಾಮಗಾರಿ ಪೂರ್ಣಗೊಳಿಸಿ ಕೈತೊಳೆದುಕೊಂಡಿದ್ದಾರೆ.
ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಮತ್ತು 15ನೇ ಹಣಕಾಸು ಯೋಜನೆಯಡಿ ನಡೆದಿರುವ ಅನೇಕ ಕಾಮಗಾರಿಗಳಲ್ಲಿ ಅಧ್ವಾನವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವರು.
‘ಮನೆಯಲ್ಲಿ ಸಣ್ಣ ಮಕ್ಕಳಿದ್ದಾರೆ. ಮನೆಯ ಪಕ್ಕದಲ್ಲಿಯೇ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ಎಸ್.ವಿ. ಚಿಕ್ಕ ನರಸಿಂಹಪ್ಪ.
‘ನಮ್ಮ ಮನೆಯ ಮುಂಭಾಗದಲ್ಲಿ ಚರಂಡಿ ಕಟ್ಟಿಕೊಂಡಿದೆ. ತ್ಯಾಜ್ಯದ ನೀರಿನಲ್ಲಿ ಲಾರ್ವಾ ನಂತಹ ಹಲವು ಬಗೆಯ ಹುಳುಗಳು ಸೃಷ್ಟಿಯಾಗಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಚರಂಡಿ ಸ್ವಚ್ಛ ಮಾಡಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ನರಸಿಂಹಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.