ADVERTISEMENT

ಚಿಕ್ಕಬಳ್ಳಾಪುರ ಜಿ.ಪಂ ಮಾಜಿ ಅಧ್ಯಕ್ಷ ಮುನೇಗೌಡ ವಿರುದ್ಧ ಬಿಜೆ‍‍ಪಿ ಟೀಂ ಆಕ್ರೋಶ

ಸಂಸದ ಡಾ.ಕೆ. ಸುಧಾಕರ್ ವಿರುದ್ಧದ ಟೀಕೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 4:16 IST
Last Updated 1 ಜನವರಿ 2026, 4:16 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿದರು   

ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನೇಗೌಡ ಟೀಕೆಗೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ‘ಡಾ.ಕೆ.ಸುಧಾಕರ್ ಶಾಸಕ ಮತ್ತು ಸಚಿವರಾಗಿದ್ದ ವೇಳೆ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರು ಮುನೇಗೌಡ ಆರೋಪಿಸಿದ್ದಾರೆ. ನಮ್ಮ ನಾಯಕ ಸುಧಾಕರ್ ಅವರು ಈ ಕೆಲಸ ಮಾಡಿಸಿಲ್ಲ’ ಎಂದರು. ಕೆಲವು ಮುಖಂಡರು ವೈಯಕ್ತಿಕ ಕಾರಣದಿಂದ ಈ ಕೆಲಸ ಮಾಡಿಸಿರಬಹುದು. ನಮ್ಮ ನಾಯಕರು ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಹೇಳಿದರು.

ಪೆರೇಸಂದ್ರ ಕಾರ್ಯಕ್ರಮದಲ್ಲಿ ಡಾ.ಕೆ.ಸುಧಾಕರ್ ಅವರ ಬಗ್ಗೆ ಮುನೇಗೌಡ ಕೆಟ್ಟದಾಗಿ‌ ಮಾತನಾಡಿದ್ದಾರೆ.‌ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 70 ವರ್ಷದಲ್ಲಿ ಆಗದ ಕೆಲಸಗಳನ್ನು 10 ವರ್ಷದಲ್ಲಿ ಸುಧಾಕರ್ ಅವರು ಮಾಡಿಸಿದ್ದಾರೆ ಎಂದರು.

ADVERTISEMENT

ವೈದ್ಯಕೀಯ ಶಿಕ್ಷಣ ಕಾಲೇಜು, ಪ್ರತಿ ಹೋಬಳಿ ಕೇಂದ್ರದಲ್ಲಿ ಉತ್ತಮ ಆಸ್ಪತ್ರೆ, ಗೌರಿಬಿದನೂರು ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು ₹ 5 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದು ಮುನೇಗೌಡ ಅವರಿಗೆ ಗೊತ್ತಿಲ್ಲವೇ ಎಂದರು.

ಬಚ್ಚೇಗೌಡ ಅವರು ಶಾಸಕರಾಗಿದ್ದ ವೇಳೆ ಇವರನ್ನು ಜಿ.ಪಂ ಅಧ್ಯಕ್ಷರನ್ನಾಗಿ ಮಾಡಿದರು. ಮುನೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ತಕ್ಷಣ ಬಚ್ಚೇಗೌಡರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರು. ಆದರೆ ಈಗ ಮತ್ತೆ ಅವರ ಕಾಲು ಹಿಡಿದಿದ್ದಾರೆ ಎಂದರು.

ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸೇರಿದರು. ಬಿಜೆಪಿಗೆ ಬಂದು ನಮ್ಮಲ್ಲಿಯೂ ಎರಡು ಬಣಗಳನ್ನು ಮಾಡಿದರು. ಈಗ ಕಾಂಗ್ರೆಸ್‌ಗೆ ಕಾಲಿಟ್ಟ ಸ್ವಲ್ಪ ದಿನದಲ್ಲಿಯೇ ಅಲ್ಲಿಯೂ ಎರಡು ಬಣ ಮಾಡಿದ್ದಾರೆ ಎಂದು ಹೇಳಿದರು.

ಮುನೇಗೌಡ ದಿಬ್ಬೂರು ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿದ್ದಾರೆ. ಕಚೇರಿಯ ಬೀಗ ಮುರಿದು ತಮಗೆ ಬೇಕಾದ ರೀತಿಯಲ್ಲಿ ರೆಜುಲೂಷನ್ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ನಾವು ದೂರು ನೀಡಿದರೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಪ್ರಕರಣ ದಾಖಲಿಸಲಿಲ್ಲ. ನಾವು ಮೇಲಧಿಕಾರಿಗಳ ಬಳಿಗೆ ಹೋದ ನಂತರ ದೂರು ಪಡೆದರು ಎಂದು ಹೇಳಿದರು.

ಮುನೇಗೌಡ ಯಾವ ಪಕ್ಷಕ್ಕೆ ಹೋದರೂ ಆ ಪಕ್ಷದ ಅಭ್ಯರ್ಥಿಗಳು ಸೋಲುತ್ತಾರೆ. ಪ್ರದೀಪ್ ಈಶ್ವರ್ ಜೊತೆಯಲ್ಲಿಯೂ ಹೆಚ್ಚು ದಿನ ಇರುವುದಿಲ್ಲ ಎಂದರು. 

ಟಿಎಪಿಸಿಎಂಎಸ್ ಅಧ್ಯಕ್ಷ ಆವುಲಕೊಂಡರಾಯಪ್ಪ ಮಾತನಾಡಿ, ಮುನೇಗೌಡ ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಮುಖಂಡರಾದ ಲಿಂಗಾರೆಡ್ಡಿ, ಕಾಳೇಗೌಡ, ಪ್ರಸಾದ್, ಸುದರ್ಶನ ರೆಡ್ಡಿ, ರಾಮಸ್ವಾಮಿ, ಮುರುಳಿ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.