ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆ ನನ್ನ ಹಿಡಿತದಲ್ಲಿಯೇ ಇದೆ: ಸಚಿವ ಎಂ.ಟಿ.ಬಿ.ನಾಗರಾಜ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:42 IST
Last Updated 16 ಆಗಸ್ಟ್ 2022, 4:42 IST
ಸಚಿವ ಎಂ.ಟಿ.ಬಿ.ನಾಗರಾಜ್
ಸಚಿವ ಎಂ.ಟಿ.ಬಿ.ನಾಗರಾಜ್   

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತ ನನ್ನ ಹಿಡಿತದಲ್ಲಿಯೇ ಇದೆ. ಅದು ನನಗೆ,ಅಧಿಕಾರಿಗಳಿಗೆ ಗೊತ್ತು’ ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರು ಏನು ಬೇಕಾದರೂ ಮಾತನಾಡಬಹುದು. ಸುಧಾಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು. ಅವರಿಗೆ ಅಲ್ಲಿನ ಆಡಳಿತದ ಮೇಲೆ ಹಿಡಿತವಿದೆ. ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತದ ಮೇಲೆ ಹಿಡಿತವಿದೆ’ ಎಂದರು.

ವಿದುರಾಶ್ವತ್ಥದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಡಾ.ಕೆ.ಸುಧಾಕರ್ ಎರಡು ಬಾರಿ ಚರ್ಚಿಸಿದ್ದಾರೆ. ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಆ ಯೋಜನೆಯ ಬಗ್ಗೆ ಚಿಂತಿಸಲಾಗುವುದು ಎಂದರು.

ADVERTISEMENT

ದೇವನಹಳ್ಳಿ ತಾಲ್ಲೂಕಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಕೈಗಾರಿಕಾ ಸಚಿವರು, ರೈತ ಸಂಘದವರು ಹಾಗೂ ಸಂಘ ಸಂಸ್ಥೆಗಳ ಜತೆ ಸಭೆ ನಡೆಸಿದ್ದೇವೆ. ಒಪ್ಪಿಗೆ ನೀಡಿದ ರೈತರ ಜಮೀನು ಮಾತ್ರ ಸ್ವಾಧೀನಕ್ಕೆ ಪಡೆಯಲಾಗುತ್ತಿದೆ. ಜಮೀನು ಕೊಡುವುದಿಲ್ಲ ಎನ್ನುವವರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಭೂಮಿಗೆ ಒಳ್ಳೆಯ ಬೆಲೆ ಕೊಡಬೇಕು. ನಮ್ಮ ಮಕ್ಕಳ ವಿದ್ಯಾರ್ಹತೆಗೆ ಅನುಗುಣವಾಗಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮತ್ತೆ ರೈತರನ್ನು ಕರೆದು ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದರು

ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಏಕೆ ಬಂದಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ಅವರು ಸಿಕ್ಕಾಗ ನೀವೇ ಕೇಳಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.