ADVERTISEMENT

ವಯಸ್ಕ ಶಿಕ್ಷಣ; ಪ್ರಸಕ್ತ 5,975 ಮಂದಿಯನ್ನು ಅಕ್ಷರಸ್ಥರಾಗಿಸಲು ಹೆಜ್ಜೆ

ಜಿಲ್ಲೆಯ 16 ಪಂಚಾಯಿತಿ ವ್ಯಾಪ್ತಿಯಲ್ಲಿ 292 ಕಲಿಕಾ ಕೇಂದ್ರ ಆರಂಭ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಮಾರ್ಚ್ 2025, 8:18 IST
Last Updated 24 ಮಾರ್ಚ್ 2025, 8:18 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಡಶೀಗೇನಹಳ್ಳಿಯ ಕಲಿಕಾ ಕೇಂದ್ರ
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಡಶೀಗೇನಹಳ್ಳಿಯ ಕಲಿಕಾ ಕೇಂದ್ರ   

ಚಿಕ್ಕಬಳ್ಳಾಪುರ: 2024-25ನೇ ಸಾಲಿನ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಕಾರ್ಯಕ್ರಮದಡಿ ಜಿಲ್ಲೆಯ ಆರು ತಾಲ್ಲೂಕಿನ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಹೆಜ್ಜೆ ಇಟ್ಟಿದೆ.

ಬಹಳ ದಿನಗಳಿಂದ ಕಲಿಕಾ ಸಾಮಗ್ರಿಗಳು ಬಾರದ ಕಾರಣ ಈ ಅನಕ್ಷರಸ್ಥರ ಕಲಿಕೆಗೆ ತೊಂದರೆ ಆಗಿತ್ತು. ಆದರೆ ಈಗ ಲಿಂಕ್ ಡಾಕ್ಯುಮೆಂಟ್ ಕಲಿಕಾ ಕಾರ್ಯಕ್ರಮದ ಅಡಿಯಲ್ಲಿ ಕಲಿಕಾ ಸಾಮಗ್ರಿಗಳು ಬಂದಿವೆ.

ಜಿಲ್ಲೆಯ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯ 5,975 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮುಂದಾಗಿದೆ. 20 ಅಭ್ಯರ್ಥಿಗಳಿಗೆ ಒಬ್ಬರು ಶಿಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 292 ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 292 ಬೋಧಕರನ್ನು ನೇಮಿಸಲಾಗಿದೆ. ಪ್ರತಿ ಕಲಿಕಾ ಕೇಂದ್ರಕ್ಕೆ ಒಬ್ಬರು ಬೋಧಕರನ್ನು ನೇಮಿಸಲಾಗಿದೆ.

ADVERTISEMENT

ಅನಕ್ಷರಸ್ಥರಿಗೆ ‘ಬಾಳಿಗೆ ಬೆಳಕು’ ಮತ್ತು ‘ಸವಿ ಬರಹ’ ಪುಸ್ತಕಗಳು, ನೋಟ್‌ಬುಕ್, ಪೆನ್ನು, ಪೆನ್ಸಿಲ್, ಮೆಂಡರ್, ರಬ್ಬರ್, ಚಾಕ್‌ಪೀಸ್ ಮತ್ತು ಪುಸ್ತಕಗಳನ್ನು ವಿತರಿಸಲಾಗಿದೆ. ಮಾ.12ರಂದು ಕಲಿಕಾರ್ಥಿಗಳಿಗೆ ಪುಸ್ತಕ ವಿತರಿಸಿ ಕಲಿಕೆಗೆ ಚಾಲನೆ ನೀಡಲಾಗಿದೆ. 2025ರ ಜುಲೈ 20ರಂದು ಈ ಕಲಿಕಾರ್ಥಿಗಳಿಗೆ ಪರೀಕ್ಷೆಗಳು ಸಹ ನಡೆಯಲಿವೆ.

16 ಪಂಚಾಯಿತಿಗಳಿವು: ಯಾವ ಪಂಚಾಯಿತಿಗಳಲ್ಲಿ ಕಲಿಕೆ: ಬಾಗೇಪಲ್ಲಿ ತಾಲ್ಲೂಕಿನ ಗೊರ್ತಪಲ್ಲಿ, ಘಂಟವಾರಪಲ್ಲಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ, ಹೊಸಹುಡ್ಯ, ಅಣಕನೂರು ಕಾರಾಗೃಹ, ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ, ಮುನಗನಹಳ್ಳಿ, ಹಿರೇಕಟ್ಟಿಗೇನಹಳ್ಳಿ, ಗೌರಿಬಿದನೂರು ತಾಲ್ಲೂಕಿನ ಹೊಸೂರು, ಗೆದರೆ, ಕುರುಬರಹಳ್ಳಿ, ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ, ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ, ಮೇಲೂರು, ಹೊಸಪೇಟೆ, ಈ. ತಿಮ್ಮಸಂದ್ರ ಗ್ರಾಮ ಪಂಚಾಯಿತಿಗಳಲ್ಲಿ ಕಲಿಕಾ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿ ವರ್ಷವೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗೆ ಇಂತಹ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂತಿಷ್ಟು ಮಂದಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬೇಕು ಎನ್ನುವ ಗುರಿಯನ್ನು ನಿಗದಿಗೊಳಿಸಲಾಗುತ್ತಿದೆ. ಈ ಹಿಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕ್ರಮವಾಗಿ 11,282 ಮತ್ತು 16 ಸಾವಿರ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಬೇಕು ಎಂದು ಗುರಿ ನಿಗದಿಗೊಳಿಸಲಾಗಿತ್ತು.

ಹಂತ ಹಂತವಾಗಿ ಅಕ್ಷರದ ಬೆಳಕಿಗೆ: ಓದು, ಬರಹ ಬಾರದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಸರ್ಕಾರವು ಹಲವು ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ 1,83,202 ಪುರುಷರು ಮತ್ತು 2,38,086 ಮಹಿಳೆಯರು ಸೇರಿದಂತೆ 4,21,288 ಮಂದಿ ಅನಕ್ಷರಸ್ಥರು ಇದ್ದರು. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 3,46,583 ಮತ್ತು ನಗರ ಪ್ರದೇಶದಲ್ಲಿ 74,705 ಅನಕ್ಷರಸ್ಥರು ಇದ್ದರು.

ಪ್ರತಿ ವರ್ಷವೂ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಇಂತಿಷ್ಟು ಮಂದಿಯನ್ನು ಸಾಕ್ಷರರನ್ನಾಗಿ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಗುರಿ ನೀಡುತ್ತದೆ. ಆ ಪ್ರಕಾರ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಇಳಿಕೆಯತ್ತ ಸಾಗಿದೆ. ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ 2022–23ನೇ ಸಾಲಿನ ವೇಳೆ ಅನಕ್ಷರಸ್ಥರನ್ನು 1.90 ಲಕ್ಷಕ್ಕೆ ಇಳಿಸಲಾಗಿದೆ.

ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಹಿತಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ಅನಕ್ಷರಸ್ಥರು ಇದ್ದಾರೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 1,28,398 ಮಂದಿ ಹಾಗೂ ನಗರ ಪ್ರದೇಶದಲ್ಲಿ 62,367 ಮಂದಿ ಅನಕ್ಷರಸ್ಥರು ಇದ್ದಾರೆ. ನಗರ ಪ್ರದೇಶದಲ್ಲಿ ಮಹಿಳೆಯರಲ್ಲಿ ಹೆಚ್ಚು ಅನಕ್ಷರಸ್ಥರು ಇದ್ದರೆ ಗ್ರಾಮೀಣ ಭಾಗಗಳಲ್ಲಿ ಪುರುಷರು ಹೆಚ್ಚು ಅನಕ್ಷರಸ್ಥರು ಇದ್ದಾರೆ. 15 ವರ್ಷ ಮೇಲ್ಪಟ್ಟಿರುವ ಓದು ಮತ್ತು ಬರಹ ಬಾರದವನ್ನು ಅನಕ್ಷರಸ್ಥರು ಎಂದು ಸರ್ಕಾರವು ಗುರುತಿಸುತ್ತದೆ. ಇವರನ್ನು ಅಕ್ಷರಸ್ಥರನ್ನಾಗಿಸಲು ಶಿಕ್ಷಣ ಕೊಡಿಸಲಾಗುತ್ತದೆ. 

ಸಾಕ್ಷರನ್ನಾಗಿಸುವ ಈ ಕಾರ್ಯಕ್ರಮವು ಈಗಾಗಲೇ ಆರಂಭವಾಗಬೇಕಾಗಿತ್ತು. ಆದರೆ ಆರು ತಿಂಗಳ ಕಾಲ ಕಲಿಕಾ ಪುಸ್ತಕಗಳು ಬಾರದ ಕಾರಣ ಮಾರ್ಚ್‌ ತಿಂಗಳಲ್ಲಿ ಸರ್ಕಾರವು ಅನಕ್ಷರಸ್ಥರ ಕಲಿಕೆಗೆ ಹಸಿರು ನಿಶಾನೆ ತೋರಿದೆ.

ತಾಲ್ಲೂಕು; ನಿಗದಿಪಡಿಸಲಾದ ಅನಕ್ಷರಸ್ಥರ ಸಂಖ್ಯೆ;ಕಲಿಕಾ ಕೇಂದ್ರಗಳು
ಬಾಗೇಪಲ್ಲಿ; 1,395; 68
ಚಿಕ್ಕಬಳ್ಳಾಪುರ; 815; 41
ಚಿಂತಾಮಣಿ; 1,200; 60
ಗೌರಿಬಿದನೂರು; 950; 42
ಗುಡಿಬಂಡೆ; 530; 27
ಶಿಡ್ಲಘಟ್ಟ; 1,085; 54
ಒಟ್ಟು; 5,975; 292

ನಿತ್ಯ ಒಂದು ತಾಸು ಕಲಿಕೆ

ರಾಜ್ಯದಾದ್ಯಂತ ಎಲ್ಲ ಕಲಿಕಾ ಕೇಂದ್ರಗಳಲ್ಲಿ ಅನಕ್ಷರಸ್ಥರ ಕಲಿಕೆ ಆರಂಭವಾಗಿದೆ. ಜಿಲ್ಲೆಯಲ್ಲಿಯೂ ಒಂದು ವಾರದಿಂದ ಕಲಿಕೆ ನಡೆಯುತ್ತಿದೆ. 2024-25ನೇ ಸಾಲಿನ 5975 ಜನರನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಕ್ಷರನ್ನಾಗಿಸಲು ಗುರಿ ನಿಗದಿ ಮಾಡಲಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಆಂಜನೇಯ ‘ಪ್ರಜಾವಾಣಿ’ಗೆ ತಿಳಿಸಿದರು.

ಯೋಜನೆಗೆ ಜಿಲ್ಲಾ ಪಂಚಾಯಿತಿಯು ಸಂಪೂರ್ಣವಾಗಿ ಅನುದಾನ ನೀಡುತ್ತದೆ. ಸಂಜೆ ಅಥವಾ ಅನಕ್ಷರಸ್ಥರು ಯಾವಾಗ ಬಿಡುವು ಇರುತ್ತಾರೊ ಆ ಅವಧಿಯಲ್ಲಿ ಕಲಿಕೆಗೆ ಬರಬಹುದು. ಒಂದು ತಾಸು ಕಲಿಕೆ ನಡೆಯುತ್ತದೆ ಎಂದರು. ಅಂಗನವಾಡಿ ಕಾರ್ಯಕರ್ತೆಯರು ಕೆಲವು ಶಿಕ್ಷಕರು 4.30ರ ನಂತರ ಸ್ವಯಂ ಸೇವಕರಾಗಿ ಕೆಲಸ ಮಾಡುವರು. ಗ್ರಾಮಗಳಲ್ಲಿನ ವಿದ್ಯಾವಂತರು ಸ್ವಯಂ ಸೇವಕರಾಗಿ ಬೋಧಿಸುತ್ತಾರೆ. ಕಲಿತ ಋಣವನ್ನು ಕಲಿಸಿ ತೀರಿಸಬೇಕು ಎನ್ನುವ ಧ್ಯೇಯದಲ್ಲಿ ಸ್ವಯಂ ಸೇವಕರು ಕಡಿಮೆ ಗೌರವಧನಕ್ಕೆ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ. 20 ಅನಕ್ಷರಸ್ಥರಿಗೆ ಒಬ್ಬ ಬೋಧಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.