ADVERTISEMENT

ಚಿಕ್ಕಬಳ್ಳಾಪುರ: ದಾರಿ ವಿಚಾರವಾಗಿ ಗಲಾಟೆ; ರೈತನ ಮೇಲೆ ಗುಂಡು ಹಾರಿಸಿದ ಗಣಿ ಮಾಲೀಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 11:09 IST
Last Updated 23 ಏಪ್ರಿಲ್ 2025, 11:09 IST
<div class="paragraphs"><p> ಗುಂಡು ಹಾರಿಸಿದ ಗಣಿ ಮಾಲೀಕ</p></div>

ಗುಂಡು ಹಾರಿಸಿದ ಗಣಿ ಮಾಲೀಕ

   

ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಬುಧವಾರ ಗಲಾಟೆ ನಡೆದಿದೆ. 

ಗಣಿ ಮಾಲೀಕ ಸಕಲೇಶ್ ಎಂಬಾತ ಸ್ಥಳೀಯ ರೈತ ರವಿ ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ. 

ADVERTISEMENT

ಗಣಿಗಾರಿಕೆ ಲಾರಿಗಳ ಓಡಾಟ ಮತ್ತು ರಸ್ತೆ ನಿರ್ಮಾಣ ವಿರೋಧಿಸಿ ಫೆಬ್ರುವರಿಯಲ್ಲಿ ಮಂಚೇನಹಳ್ಳಿಯಲ್ಲಿ ರೈತ ಸಂಘ, ಮಂಚೇನಹಳ್ಳಿ ತಾಲ್ಲೂಕು ಪರಿಸರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.

ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರ ಗುಡಿ, ತಿಮ್ಮರಾಯನಗುಡಿ ಇದೆ. ಸ್ವಚ್ಛಗಾಳಿ, ನೀರು, ಮೇವು ನೀಡುತ್ತಿರುವ ನಮ್ಮ ಊರಿನ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ದಾರಿ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಸಭೆಗಳು ಸಹ ನಡೆದಿದ್ದವು.  

ಬುಧವಾರ ಸಕಲೇಶ್ ಮತ್ತು ಆತನ ಕಡೆಯವರು ಜೆಸಿಬಿಗಳ ಮೂಲಕ ರಸ್ತೆ ನಿರ್ಮಿಸಲು ಮುಂದಾಗಿದ್ದರು. ಆಗ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಆಗ ಸಕಲೇಶ್, ರಿವಾಲ್ವರ್ ಹಿಡಿದು ‘ಯಾರು ಬರುತ್ತಿರೊ ಬರ್ರೊ’ ಎನ್ನುತ್ತ ರವಿ ಮೇಲೆ ಗುಂಡು ಹಾರಿಸಿದ್ದಾನೆ. ರವಿ ತೊಡೆಗೆ ಗುಂಡು ತಗುಲಿದೆ.

ಗಾಯಾಳುವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಮತ್ತು ಗೌರಿಬಿದನೂರು ಪೊಲೀಸರು ಭೇಟಿ ನೀಡಿದ್ದು ಬಿಗುವಿನ ವಾತಾವರಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.