ADVERTISEMENT

ಚಿಕ್ಕಬಳ್ಳಾಪುರ | ರೇರಾ ಕಾಯ್ದೆ ಪಾಲಿಸದ ನಗರಸಭೆ; ದಾಖಲೆಗಳನ್ನು ನೀಡದ ಅಧಿಕಾರಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 17 ಮಾರ್ಚ್ 2025, 7:31 IST
Last Updated 17 ಮಾರ್ಚ್ 2025, 7:31 IST
ಚಿಕ್ಕಬಳ್ಳಾಪುರ ನಗರಸಭೆ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿದ ತಳ್ಳುಗಾಡಿಗಳು
ಚಿಕ್ಕಬಳ್ಳಾಪುರ ನಗರಸಭೆ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿದ ತಳ್ಳುಗಾಡಿಗಳು   

ಚಿಕ್ಕಬಳ್ಳಾಪುರ: ಹೊಸ ಬಡಾವಣೆಯ ನಿವೇಶನಗಳಿಗೆ ಖಾತೆ ನೀಡುವ ಸಮಯದಲ್ಲಿ ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ) ಕಾಯ್ದೆ ಪಾಲನೆ ಆಗಬೇಕು. ಆದರೆ ಚಿಕ್ಕಬಳ್ಳಾಪುರ ನಗರಸಭೆಯು ರೇರಾ ಕಾಯ್ದೆಗೆ ವಿರುದ್ಧವಾದ ನೀತಿಗಳನ್ನು ಅನುಸರಿಸಿದೆ. ಈ ಕುರಿತು 2022–2023ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕೇಂದ್ರ ಸರ್ಕಾರವು ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು ಮತ್ತು ಉತ್ತೇಜಿಸುವ ಸಲುವಾಗಿ ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೊಳಿಸಿದೆ. ಗ್ರಾಹಕರ ಹಿತ ಕಾಪಾಡುವುದು ಈ ಅಧಿನಿಯಮದ ಮೂಲ ಉದ್ದೇಶ. 

ಈ ಅಧಿನಿಯಮದ ಅನ್ವಯ 500 ಚದುರ ಮೀಟರ್ ಮೇಲಿರುವ ವಸತಿ ವಿನ್ಯಾಸಗಳನ್ನು ಮಾರುವಾಗ ಮತ್ತು ಖರೀದಿಸುವಾಗ ರಿಯಲ್ ಎಸ್ಟೇಟ್ ಏಜೆನ್ಸಿಗಳು ರೇರಾ ಕಡೆಯಿಂದ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ರೇರಾಗೆ ನೋಂದಣಿ ಮಾಡಿಕೊಳ್ಳುವ ವೇಳೆ ವಿನ್ಯಾಸದ ಮಾಲೀಕರು ಡಿಡಿ ಅಥವಾ ಬ್ಯಾಂಕರ್ಸ್ ಚೆಕ್ ಮೂಲಕ ನಿಗದಿತ ನೋಂದಣಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕು. 

ADVERTISEMENT

2022–23ನೇ ಸಾಲಿನಲ್ಲಿ ಅನುಮೋದನೆ ನೀಡಿದ ವಸತಿ ವಿನ್ಯಾಸಗಳ ಕಡತಗಳನ್ನು ಪರಿಶೀಲಿಸಿದಾಗ ಕೆಲವೊಂದು ವಸತಿ ವಿನ್ಯಾಸಗಳ ವಿಸ್ತೀರ್ಣ 500 ಚದುರ ಮೀಟರ್‌ಗಿಂತ ಹೆಚ್ಚಾಗಿದ್ದರೂ ಈ ವಿನ್ಯಾಸಗಳ ಮಾಲೀಕರು ರೇರಾ ಸೂಚಿಸಿದಂತೆ ನೋಂದಣಿಯಾಗಿರುವ ಬಗ್ಗೆ ಮಾಹಿತಿಗಳು ಕಡತದಲ್ಲಿ ಲಭ್ಯವಿಲ್ಲ. ಈ ನೋಂದಣಿ ಮಾಡಿಕೊಳ್ಳದ ಯೋಜನೆಗಳ ಖಾತೆ ನೀಡುವ ಸಮಯದಲ್ಲಿ ಪರಿಶೀಲಿಸದೆ ಖಾತೆ ನೀಡಿರುವುದು ರೇರಾ ಕಾಯ್ದೆಗೆ ವಿರುದ್ಧವಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಡೇ–ನಲ್ಮ್; ಹೆಚ್ಚುವರಿ ಪಾವತಿ:

ನಗರಸಭೆ ವ್ಯಾಪ್ತಿಯಲ್ಲಿ ಡೇ–ನಲ್ಮ್‌ ಯೋಜನೆಯಡಿ ರಾತ್ರಿ ವಸತಿ ರಹಿತರ ತಂಗುದಾಣದ ವಾರ್ಷಿಕ ನಿರ್ವಹಣೆಗಾಗಿ ವೆಂಕಟೇಶ್ವರ ಟೆಕ್ನಿಕಲ್ ರೂರಲ್ ಆ್ಯಂಡ್ ಎಂಜುಕೇಷನ್ ಟ್ರಸ್ಟ್‌ಗೆ ವಹಿಸಲಾಗಿದೆ. ನಿರ್ವಹಣೆಗೆ ಕಾರ್ಯಾದೇಶ ನೀಡಲಾಗಿದೆ. ಟೆಂಡರ್ ವಿವರಗಳನ್ನು ಪರಿಶೀಲಿಸಿದಾಗ ನಿರ್ವಹಣೆ ವೆಚ್ಚದ ವಿವರಗಳೇ ಇಲ್ಲ!

2022ರ ಮಾರ್ಚ್‌ 1ರಿಂದ 2023ರ ಜ.31ರವರೆಗೆ ಪಾವತಿಸಿರುವ ಬಿಲ್‌ಗಳಲ್ಲಿ ನಿರ್ವಹಣೆ ವೆಚ್ಚ ಎಂದು ಪ್ರತಿ ತಿಂಗಳ ಬಿಲ್‌ನಲ್ಲಿ ₹ 6,247 ಇದೆ. ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿ ಒಟ್ಟು ₹ 68,717 ಪಾವತಿಸಲಾಗಿದೆ. ಈ ಬಗ್ಗೆ ನಗರಸಭೆಗೆ ವಿಚಾರಣಾ ಪತ್ರ ನೀಡಿದ್ದರೂ ಅನುಪಾಲನಾ ಉತ್ತರವನ್ನು ಸಲ್ಲಿಸಿಲ್ಲ. ಆದ್ದರಿಂದ ಈ ಮೊತ್ತವನ್ನು ವಸೂಲಾತಿಯ ಕಲಂನಲ್ಲಿ ಇರಿಸಲಾಗಿದೆ.

ಇದಿಷ್ಟೇ ಅಲ್ಲ ವೆಂಕಟೇಶ್ವರ ಟೆಕ್ನಿಕಲ್ ರೂರಲ್ ಆ್ಯಂಡ್ ಎಂಜುಕೇಷನ್ ಟ್ರಸ್ಟ್‌ಗೆ ನೀಡಿರುವ ಟೆಂಡರ್ ಅವಧಿ ಮುಗಿದಿದ್ದರೂ ಅವರನ್ನೇ ಮುಂದುವರಿಸಲಾಗಿದೆ. ಮರು ಟೆಂಡರ್ ಆಹ್ವಾನಿಸದೆ ಹಿಂದಿನ ಟೆಂಡರ್‌ದಾರರನ್ನೇ ಮುಂದುವರಿಸಿ ₹ 7,77,505 ಅನ್ನು ಟ್ರಸ್ಟ್‌ಗೆ ಪಾವತಿಸಲಾಗಿದೆ. ಈ ಬಗ್ಗೆ ನಗರಸಭೆಯು ಅನುಪಾಲನಾ ಉತ್ತರವನ್ನೂ ಸಲ್ಲಿಸಿಲ್ಲ.

ಗೋಡೆ ಬರಹದ ಬಿಲ್‌ಗಳಿಲ್ಲ: ಚಿಕ್ಕಬಳ್ಳಾಪುರ ನಗರದ ವಿವಿಧ ಕಡೆಗಳಲ್ಲಿ ಗೋಡೆ ಬರಹಗಳನ್ನು ಬರೆಸಲಾಗಿದೆ. ಈ ಆದರೆ ನಗರಸಭೆಯಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೇ ಇಲ್ಲ.

ಅಕ್ಷಯ ರೂರಲ್ ಡೆವೆಲಪ್‌ಮೆಂಟ್ ಮತ್ತು ಯೂತ್ ವೇಲ್‌ಫೇರ್ ಸೊಸೈಟಿಗೆ ಪ್ರತಿ ಚದುರ ಅಡಿಗೆ ₹ 49ರ ಅನುಮೋದನೆಯ ಪ್ರಕಾರ ಗೋಡೆ ಬರಹಕ್ಕೆ ಅನುಮೋದನೆ ನೀಡಲಾಗಿದೆ. ಆದರೆ ಯಾವ ಯಾವ ಸ್ಥಳಗಳಲ್ಲಿ ಚಿತ್ರ ಬಿಡಿಸಲಾಗಿದೆ. ಪ್ರಾರಂಭಿಕ ಹಂತ, ಮಧ್ಯಮ ಹಂತ ಮತ್ತು ಅಂತಿಮ ಹಂತದ ದೃಢೀಕರಣ ಛಾಯಾಚಿತ್ರಗಳು, ಜಿಎಸ್‌ಟಿ ಕಟಾಯಿಸದೆ ಬಿಲ್ ಪಾವತಿ ಮಾಡಿರುವುದಕ್ಕೆ ಕಾರಣ ಮತ್ತು ಮೂಲ ಪಾವತಿ ಬಿಲ್‌ಗಳನ್ನು ಸಹ ಲೆಕ್ಕಪರಿಶೋಧಕರಿಗೆ ಹಾಜರುಪಡಿಸಿಲ್ಲ. ಯಾವುದೇ ದಾಖಲೆಗಳನ್ನು ಹಾಜರುಪಡಿಸದ ಕಾರಣ ₹ 8 ಲಕ್ಷವನ್ನು ಆಕ್ಷೇಪಣೆಯಲ್ಲಿ ಇರಿಸಲಾಗಿದೆ.

ಏಕಬಿಡ್‌ ಟೆಂಡರ್‌; ₹ 17.92 ಲಕ್ಷ ಪಾವತಿ

ಸರ್ಕಾರದ ಸುತ್ತೋಲೆಗಳ ಪ್ರಕಾರ ಏಕಬಿಡ್ ಟೆಂಡರ್‌ಗಳು ಸ್ವೀಕೃತವಾದ ಸಂದರ್ಭಗಳಲ್ಲಿ ಸದರಿ ಏಕ ಬಿಡ್‌ಗಳನ್ನು ತಿರಸ್ಕರಿಸಿ ಮರು ಟೆಂಡರ್ ಕರೆಯುವುದು ಟೆಂಡರ್ ಆಹ್ವಾನಿಸುವ ಪ್ರಾಧಿಕಾರದ ಪ್ರಥಮ ಆದ್ಯತೆ ಆಗಿರಬೇಕು ಎಂದು ತಿಳಿಸಿದ್ದರೂ ಚಿಕ್ಕಬಳ್ಳಾಪುರ ನಗರಸಭೆಯು ಏಕಬಿಡ್‌ದಾರರಿಗೆ ಅನುಮೋದನೆ ನೀಡಿದೆ. ಶೇ 22.75 ಶೇ 7.25 ಹಾಗೂ ಶೇ 3ರ ನಿಧಿಯಲ್ಲಿ ತಳ್ಳುವ ಗಾಡಿಗಳನ್ನು ಸರಬರಾಜು ಮಾಡಲು ಲಕ್ಷ್ಮಿ ವೆಂಕಟೇಶ್ವರ ಎಂಜಿನಿಯರಿಂಗ್ ವರ್ಕ್ಸ್‌ಗೆ ₹ 17.92 ಲಕ್ಷ ಪಾವತಿಸಲಾಗಿದೆ. ಈ ಬಗ್ಗೆ ಸೂಕ್ತ ದಾಖಲೆ ಮತ್ತು ವಿವರಣೆ ನೀಡುವಂತೆ ತಿಳಿಸಿದ್ದರೂ ಯಾವುದೇ ವಿವರಣೆ ನೀಡಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ವಿವರಣೆ ಸಲ್ಲಿಸಬೇಕು ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ರಸ್ತೆ ಅಗೆತ; ಆಡಳಿತ ವರ್ಗವೇ ನೇರ ಜವಾಬ್ದಾರಿ

ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಮೂಲಸೌಕರ್ಯಗಳಾದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ರಸ್ತೆ ಅಗೆತ ಮಾಡಬೇಕಾಗಿರುತ್ತದೆ. ವಿವಿಧ ಟಿ.ವಿ ಟವರ್ ಕೇಬಲ್ ಡಿಶ್ ಕೇಬಲ್ ದೂರ ಸಂಪರ್ಕ ಕೇಬಲ್ ಹೀಗೆ ಹಲವು ಕಾರಣಗಳಿಗಾಗಿ ರಸ್ತೆ ಅಗೆಯುವ ಮುನ್ನ ಸಂಬಂಧಿಸಿದ ಕಟ್ಟಡ ಮಾಲೀಕರು ನಗರಸಭೆಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು.  ಅದರಂತೆ 2022–23ನೇ ಸಾಲಿನಲ್ಲಿ ರಸ್ತೆ ಅಗೆತಕ್ಕೆ ಸಂಬಂಧಿಸಿಂತೆ ಅರ್ಜಿಗಳ ವಿವರಗಳು ರಸ್ತೆ ಅಗೆತ ಸಂಬಂಧ ಅನುಮತಿ ನೀಡಿರುವ ವಿವರಗಳು ರಸ್ತೆ ಅಗೆತದ ಶುಲ್ಕ ಜಮೆಯ ವಿವರಗಳ ಬಗ್ಗೆ ನಗರಸಭೆಯು ಯಾವುದೇ ವಿವರಣೆ ನೀಡಿಲ್ಲ. ಈ ದಾಖಲೆಗಳನ್ನು ನಿರ್ವಹಿಸದೆ ಇರುವುದು ಗಂಭೀರ ಲೋಪ. ಯಾವುದೇ ದುರುಪಯೋಗವಾಗಿದ್ದಲ್ಲಿ ಸಂಸ್ಥೆಯ ಆಡಳಿತ ವರ್ಗವೇ ನೇರ ಜವಾಬ್ದಾರಿ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.